ADVERTISEMENT

ಔರಾದ್: ಬಸ್‌ಗಳ ಕೊರತೆ, ಗಡಿ ಭಾಗದ ಪ್ರಯಾಣಿಕರಿಗೆ ಸಂಕಟ

​ಪ್ರಜಾವಾಣಿ ವಾರ್ತೆ
Published 31 ಮೇ 2025, 13:23 IST
Last Updated 31 ಮೇ 2025, 13:23 IST
ಔರಾದ್ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿರುವ ಪ್ರಯಾಣಿಕರು
ಔರಾದ್ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿರುವ ಪ್ರಯಾಣಿಕರು   

ಔರಾದ್: ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಬಸ್ ಸೌಲಭ್ಯವಿಲ್ಲದೆ ಇಲ್ಲಿಯ ಗಡಿ ಭಾಗದ ಪ್ರಯಾಣಿಕರು ಪರದಾಡುವಂತಾಗಿದೆ.  

ಔರಾದ್ ಮಹಾರಾಷ್ಟ್ರ ಹಾಗೂ ತೆಲಂಗಾಣ ಗಡಿಗೆ ಹೊಂದಿಕೊಂಡಿರುವ ತಾಲ್ಲೂಕು. ಇಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ.ಈ ನಡುವೆ ಶಕ್ತಿ ಯೋಜನೆ ಜಾರಿಯಿಂದ ಪ್ರಯಾಣಿಕರ ಸಂಖ್ಯೆ ಮತ್ತಷ್ಟು ಹೆಚ್ಚಿದೆ. ಹೀಗಾಗಿ ಇರುವ ಬಸ್‌ಗಳ ಮೇಲೆ ಒತ್ತಡ ಜಾಸ್ತಿಯಾಗಿ ಎರಡು ಬಸ್ ಪ್ರಯಾಣಿಕರು ಒಂದೇ ಬಸ್‌ನಲ್ಲಿ ಪ್ರಯಾಣಿಸಬೇಕಾದ ಅನಿವಾರ್ಯ ಎದುರಾಗಿದೆ.

ಈಗ ಮದುವೆ ಋತುವಿನಿಂದಾಗಿ ಬಸ್‌ಗಳಲ್ಲಿ ಬೇಕಾಬಿಟ್ಟಿ ಪ್ರಯಾಣಿಕರನ್ನು ತುಂಬಲಾಗುತ್ತಿದೆ. ಸೀಟಿಗಾಗಿ ಜಗಳಗಳು ನಡೆಯುತ್ತಿವೆ. ಬೀದರ್-ಔರಾದ್ ಸೇರಿದಂತೆ ತಾಲ್ಲೂಕಿನಲ್ಲಿ ಪ್ರಮುಖ ಮಾರ್ಗಗಳಲ್ಲಿ ಸಮರ್ಪಕ ಬಸ್ ಸೇವೆ ಸಿಗುತ್ತಿಲ್ಲ. ಸಾಮಾನ್ಯ ಬಸ್‌ಗಳ ಓಡಾಟ ಕಡಿಮೆಯಾಗಿ ಹಳ್ಳಿಗಳಿಗೆ ಹೋಗುವ ಜನ ತೊಂದರೆ ಎದುರಿಸಬೇಕಾಗಿದೆ. ಬೋರಾಳ, ಜೀರ್ಗಾ, ಶೆಂಬೆಳ್ಳಿ, ಮುಸ್ತಾಪುರ, ಕೌಡಗಾಂವ ಗ್ರಾಮಗಳಿಗೆ ಸಂಜೆ ಹಾಗೂ ಬೆಳಿಗ್ಗೆ ಹೊತ್ತು ಬಸ್ ಓಡಾಟ ತುಂಬಾ ವಿರಳವಾಗಿದೆ. ಈ ಬಗ್ಗೆ ಸಾರಿಗೆ ಸಂಸ್ಥೆ ಅಧಿಕಾರಿಗಳಿಗೆ ಅನೇಕ ಬಾರಿ ಗಮನಕ್ಕೆ ತಂದರೂ ಪರಿಸ್ಥಿತಿ ಸುಧಾರಿಸಿಲ್ಲ ಎಂದು ವಿದ್ಯಾರ್ಥಿ ಮುಖಂಡ ಅಶೋಕ ಶಂಬೆಳ್ಳಿ ಹೇಳುತ್ತಾರೆ.

ADVERTISEMENT

ಈಗ ಶಾಲೆಗಳು ಆರಂಭವಾಗಿವೆ. ಸದ್ಯ ಇರುವ ಬಸ್‌ನಲ್ಲಿ ಹೇಗೆ ವಿದ್ಯಾರ್ಥಿಗಳಿಗೆ ಸರ್ಮಪಕ ಸೇವೆ ಕೊಡುತ್ತಾರೆ. ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಿ ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಇಲ್ಲವಾದಲ್ಲಿ ನಾವು ಹೋರಾಟ ಮಾಡಬೇಕಾಗುತ್ತದೆ ಎಂದು ಅವರು ಆಗ್ರಹಿಸಿದ್ದಾರೆ.

ಕೆಲ ಮಾರ್ಗಗಳಲ್ಲಿ ಬಸ್ ಓಡಾಟ ಸಮಸ್ಯೆ ಇರುವುದು ತಮ್ಮ ಗಮನಕ್ಕೂ ಬಂದಿದೆ. ಅಂತಹ ಕಡೆಗಳಲ್ಲಿ ಹಂತ ಹಂತವಾಗಿ ಸಮಸ್ಯೆ ಪರಿಹರಿಸುತ್ತಿದ್ದೇವೆ. ಈಗ ಶಾಲೆಗಳು ಆರಂಭವಾಗುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳಲು ಸಾರಿಗೆ ಸಂಸ್ಥೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ಚೆನ್ನಪ್ಪ ಉಪ್ಪೆ ತಿಳಿಸಿದ್ದಾರೆ.

ಈ ಶಕ್ತಿ ಯೋಜನೆ ಜಾರಿಯಿಂದ ಶೇ 40 ಮೇಲ್ಪಟ್ಟು ಪ್ರಯಾಣಿಕರ ಸಂಖ್ಯೆ ಜಾಸ್ತಿಯಾಗಿದೆ. ಇರುವ ಬಸ್‌ಗಳ ಟ್ರಿಪ್ ಜಾಸ್ತಿ ಮಾಡಿ ಉತ್ತಮ ಸೇವೆ ಕೊಡಲು ನಾವು ಪ್ರಯತ್ನಿಸುತ್ತಿದ್ದೇವೆ. ಬೀದರ್—ಔರಾದ್ ಮಾರ್ಗದಲ್ಲಿ ಸಂಜೆ ಹೊತ್ತಿನ ಬಸ್ ಕೊರತೆ ಪರಿಹರಿಸಲಾಗುವುದು ಎಂದು ಘಟಕ ವ್ಯವಸ್ಥಾಪಕ ರಾಜೇಂದ್ರ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.