
ಭಾಲ್ಕಿ: ತಾಲ್ಲೂಕಿನ ಹಲಬರ್ಗಾ ಗ್ರಾಮದ ರಾಚೋಟೇಶ್ವರ ಸಂಸ್ಥಾನ ಮಠದಲ್ಲಿ ಗುರುವಾರ ಸಂಜೆ ಸಿದ್ಧರಾಮೇಶ್ವರ ನಮ್ಮೂರ 13ನೇ ಜಾತ್ರಾ ಮಹೋತ್ಸವವು ಗುರುವಾರ ಆರಂಭಗೊಂಡಿತು.
ಗ್ರಾ.ಪಂ ಅಧ್ಯಕ್ಷೆ ಪದ್ಮಿನಿಬಾಯಿ ಶಿವಪಾಲ್‍ಸಿಂಗ್ ಠಾಕೂರ ಜ್ಯೋತಿ ಬೆಳಗಿಸಿ ಜಾತ್ರೆಗೆ ವಿಧ್ಯುಕ್ತ ಚಾಲನೆ ನೀಡಿದರು.
ಹಾವಗಿಲಿಂಗೇಶ್ವರ ಶಿವಾಚಾರ್ಯರು ಮಾತನಾಡಿ, ‘ಜೀವನ ಸಾರ್ಥಕಕ್ಕೆ ಯುವಕರು ಸನ್ಮಾರ್ಗದಲ್ಲಿ ಮುನ್ನಡೆಯಬೇಕು. ಅನೇಕ ಯುವಕರು ದುಶ್ಚಟಗಳ ದಾಸರಾಗಿ ತಮ್ಮ ಭವಿಷ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಚಟಗಳ ಕಾರಣಕ್ಕೆ ಸಾಲದ ಸುಳಿಗೆ ಸಿಲುಕುತ್ತಿದ್ದಾರೆ. ಪಾಲಕರಿಗೆ ಸಂಕಷ್ಟ ತಂದೊಡ್ಡುತ್ತಿದ್ದಾರೆ’ ಎಂದು ಕಳವಳ ವ್ಯಕ್ತಪಡಿಸಿದರು.
ಶ್ರೇಷ್ಠ ಸಂಸ್ಕೃತಿ ಹಾಗೂ ಸಂಸ್ಕಾರಕ್ಕಾಗಿ ಭಾರತ ವಿಶ್ವದೆಲ್ಲೆಡೆ ಗೌರವಕ್ಕೆ ಪಾತ್ರವಾಗಿದೆ. ಈ ಭುವಿಯಲ್ಲಿ ಜನಿಸಿದ ನಾವು ಧನ್ಯರು. ಅದರ ಗೌರವಕ್ಕೆ ಧಕ್ಕೆಯಾಗದಂತೆ ನಡೆದುಕೊಳ್ಳಬೇಕು. ಶ್ರೇಷ್ಠ ವ್ಯಕ್ತಿಗಳಾಗಿ ಹೊರ ಹೊಮ್ಮಲು ಪ್ರಯತ್ನಿಸಬೇಕು’ ಎಂದು ತಿಳಿಸಿದರು.
‘ಜಾತ್ರೆ, ಸತ್ಸಂಗ, ಪ್ರವಚನ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು. ಇದರಿಂದ ಒಳ್ಳೆಯ ಆಚಾರ, ವಿಚಾರ, ದೈವ ಭಕ್ತಿ, ಪಾಲಕರು, ಗುರು-ಹಿರಿಯರಿಗೆ ಗೌರವ ಕೊಡುವುದು ಸೇರಿದಂತೆ ಉತ್ತಮ ಜೀವನದ ಸೂತ್ರಗಳನ್ನು ಅರಿತುಕೊಳ್ಳಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.
‘ಹಲಬರ್ಗಾ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರ ಸಹಕಾರದಿಂದ 12 ಜಾತ್ರೆಗಳು ಯಶಸ್ವಿಯಾಗಿವೆ. 13ನೇ ಜಾತ್ರಾ ಮಹೋತ್ಸವವು ವೈಭವದಿಂದ ನೆರವೇರುತ್ತಿದೆ’ ಎಂದು ತಿಳಿಸಿದರು.
ಹಿತ್ತಲಶಿರೂರಿನ ಶರಣುಕುಮಾರ ಶಾಸ್ತ್ರಿ ಶರಣ ಜೀವನ ದರ್ಶನ ಪ್ರವಚನ ನಡೆಸಿಕೊಟ್ಟರು. ಸೊಂತದ ಶಂಕರಲಿಂಗ ಮಹಾರಾಜ ಸಾನ್ನಿಧ್ಯ ವಹಿಸಿದ್ದರು. ಹಣೆಗಾಂವ್‍ನ ಶಂಕರಲಿಂಗ ಶಿವಾಚಾರ್ಯ, ಕೌಳಾಸದ ಬಸವಲಿಂಗ ಶಿವಾಚಾರ್ಯ ಸಮ್ಮುಖ ವಹಿಸಿದ್ದರು. ಇದಕ್ಕೂ ಮುನ್ನ ಸಿದ್ಧರಾಮೇಶ್ವರರು ತಮ್ಮ ಕೈಯ್ಯಾರೆ ತೋಡಿದ ಬಾವಿಗೆ ಮಹಿಳೆಯರು ಗಂಗಾ ಪೂಜೆ ನೆರವೇರಿಸಿದರು. ಭಕ್ತರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.