ADVERTISEMENT

ಈದ್ಗಾದಲ್ಲಿ ಮೌನ: ಮನೆಗಳಲ್ಲಿ ಸಂಭ್ರಮ

ವಾಟ್ಸ್‌ಆ್ಯಪ್‌ನಲ್ಲೇ ರಂಜಾನ್‌ ಹಬ್ಬದ ಶುಭಾಶಯ ಸಂದೇಶ ವಿನಿಮಯ

​ಪ್ರಜಾವಾಣಿ ವಾರ್ತೆ
Published 25 ಮೇ 2020, 14:45 IST
Last Updated 25 ಮೇ 2020, 14:45 IST
ಬೀದರ್‌ನ ಕೇಂದ್ರ ಬಸ್‌ ನಿಲ್ದಾಣ ಸಮೀಪದ ಈದ್ಗಾ ಮೈದಾನದ ಬಳಿ ಸೋಮವಾರ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು
ಬೀದರ್‌ನ ಕೇಂದ್ರ ಬಸ್‌ ನಿಲ್ದಾಣ ಸಮೀಪದ ಈದ್ಗಾ ಮೈದಾನದ ಬಳಿ ಸೋಮವಾರ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು   

ಬೀದರ್: ಮುಸ್ಲಿಮರು ಸೋಮವಾರ ತಮ್ಮ ತಮ್ಮ ಮನೆಗಳಲ್ಲೇ ವಿಶೇಷ ಪ್ರಾರ್ಥನೆ ಸಲ್ಲಿಸುವ ಮೂಲಕ ಈದ್ ಉಲ್ ಫಿತ್ರ್ ಹಬ್ಬವನ್ನು ಶ್ರದ್ಧಾ-ಭಕ್ತಿಯಿಂದ ಆಚರಿಸಿದರು.

ನಗರದ ಪ್ರಮುಖ ಮಸೀದಿಗಳಲ್ಲಿ ಬೆಳಗಿನ ಜಾವ 5 ಗಂಟೆಗೆ ಮೂವರು ಮಾತ್ರ ನಮಾಜ್‌ ಮಾಡಿದರು. ನಂತರ ಮಸೀದಿಗಳಿಗೆ ಬೀಗ ಹಾಕಲಾಯಿತು. ಕೋವಿಡ್ 19 ಸೋಂಕು ಹರಡುವ ಭೀತಿಯಿಂದಾಗಿ ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶವಿರಲಿಲ್ಲ. ಹೀಗಾಗಿ ಮುಸ್ಲಿಮರು ಮನೆಗಳಲ್ಲಿ ಕುಟುಂಬದ ಸದಸ್ಯರೊಂದಿಗೆ ನಮಾಜ್‌ ಮಾಡಿದರು.

ಓಲ್ಡ್‌ಸಿಟಿಯಲ್ಲೇ ಕೋವಿಡ್‌ 19 ಸೋಂಕಿತರು ಅಧಿಕ ಸಂಖ್ಯೆಯಲ್ಲಿ ಇರುವ ಕಾರಣ ಓಲ್ಡ್‌ಸಿಟಿ ಜನ ಪರಸ್ಪರ ಆಲಂಗಿಸಿಕೊಂಡು ಶುಭಾಶಯ ವಿನಿಮಯ ಮಾಡಿಕೊಳ್ಳಲು ಹಿಂಜರಿದರು. ಕೆಲವರು ಬಲಗೈಯಿಂದ ನಮಿಸಿ ಶುಭಾಶಯ ಕೋರಿದರು. ಓಲ್ಡ್‌ಸಿಟಿ ಹಾಗೂ ಚಿದ್ರಿಯಲ್ಲಿ ಬೆಳಿಗ್ಗೆಯಿಂದಲೇ ಪೊಲೀಸ್‌ ಬಂದೋಬಸ್ತ್‌ ಬಿಗಿಗೊಳಿಸಲಾಗಿತ್ತು. ಕೆಲವರು ಕುಟುಂಬ ಸಮೇತ ವಾಹನಗಳಲ್ಲಿ ಸಂಬಂಧಿಕರ ಮನೆಗಳಿಗೆ ಹೊರಡಲು ಸಿದ್ಧರಾದಾಗ ಪೊಲೀಸರು ಅವರನ್ನು ತಡೆದು ದಂಡ ವಿಧಿಸಿದರಲ್ಲೇ, ವಾಹನಗಳನ್ನು ಜಪ್ತಿ ಮಾಡಿದರು.

ADVERTISEMENT

ವಿಶಿಷ್ಟ ಖಾದ್ಯ ವಿನಿಯಮ ಮಾಡಿಕೊಳ್ಳುವುದಕ್ಕೂ ಕಡಿವಾಣ ಬಿದ್ದಿತು. ಹಿಂದಿನ ವರ್ಷಗಳಂತೆ ನಗರದಲ್ಲಿ ಸಂಭ್ರಮದ ವಾತಾವರಣ ಕಂಡು ಬರಲಿಲ್ಲ. ಪತ್ನಿ, ಮಕ್ಕಳು, ಸಹೋದರ, ಸಹೋದರಿಯರ ಜತೆ ಮನೆಯಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಸಿಕ್ಕಿದ್ದನ್ನು ಕೆಲವರು ಸುದೈವವೆಂದು ಭಾವಿಸಿದರು.

ಈ ಬಾರಿ ಕುಟುಂಬದ ಸದಸ್ಯರೊಂದಿಗೆ ಮನೆಯಲ್ಲೇ ಪ್ರಾರ್ಥನೆ ಸಲ್ಲಿಸಲು ಅವಕಾಶಕೊಟ್ಟಿದ್ದಕ್ಕೆ ಆ ದೇವರಿಗೆ ಕೃತಜ್ಞರಾಗಿದ್ದೇವೆ ಎಂದು ಅನೇಕರು ಹೇಳಿದರು. ಮಾರಕ ಕೋವಿಡ್‌ 19 ಸೋಂಕಿನಿಂದ ಎಲ್ಲರನ್ನೂ ಪಾರು ಮಾಡುವಂತೆ ಅಲ್ಹಾನ ಬಳಿ ಪ್ರಾರ್ಥಿಸಿದರು. ಬಹುತೇಕ ಜನ ತಮ್ಮ ಬಂಧುಗಳು ಹಾಗೂ ಸ್ನೇಹಿತರಿಗೆ ಮೊಬೈಲ್‌ನಲ್ಲಿ ಹಬ್ಬದ ಶುಭಾಶಯದ ಸಂದೇಶ ಕಳಿಸಿದರು. ಇನ್ನು ಕೆಲವರು ನೇರವಾಗಿ ಕರೆ ಮಾಡಿ ಶುಭಾಶಯ ಹೇಳಿದರು.

ಶಾಹೀನ್ ಶಿಕ್ಷಣ ಸಮೂಹ ಸಂಸ್ಥೆಯು ಜಿಲ್ಲಾಡಳಿತದ ವತಿಯಿಂದ ₹ 40 ಲಕ್ಷ ಮೊತ್ತದ ಆಹಾರ ಸಾಮಗ್ರಿಗಳ ಕಿಟ್‌ಗಳನ್ನು ಶನಿವಾರ 40 ಸಾವಿರ ಬಡ ಕುಟುಂಬಗಳಿಗೆ ವಿತರಿಸಿತು. ಹೀಗಾಗಿ ಬಡವರ ಮನೆಗಳಲ್ಲಿ ಸಂಭ್ರಮ ಕಂಡು ಬಂದಿತು.

ಕೋವಿಡ್‌ 19 ಸೋಂಕಿನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕಾರಣ ಅನೇಕ ಜನ ಹೊಸ ಬಟ್ಟೆಗಳನ್ನು ಖರೀದಿಸಿರಲಿಲ್ಲ. ಬಟ್ಟೆ ಖರೀದಿಗೆ ಬಳಸುತ್ತಿದ್ದ ಹಣವನ್ನು ಬಡವರಿಗೆ ನೆರವು ಒದಗಿಸಲು ದೇಣಿಗೆ ನೀಡಿದರು.

ಬಟ್ಟೆ ಅಂಗಡಿಗಳಲ್ಲಿ ಈ ಬಾರಿ ಹೇಳಿಕೊಳ್ಳುವಂತಹ ವ್ಯಾಪಾರ ವಹಿವಾಟು ನಡೆಯಲಿಲ್ಲ.

ಮುಂಜಾಗ್ರತಾ ಕ್ರಮವಾಗಿ ನಗರದ ಕೇಂದ್ರ ಬಸ್‌ ನಿಲ್ದಾಣ ಸಮೀಪದ ಈದ್ಗಾ ಮೈದಾನ, ಚೌಬಾರಾ ಸಮೀಪದ ಮಸೀದಿ ಹಾಗೂ ಚಿದ್ರಿಯ ಈದ್ಗಾ ಮೈದಾನದ ಬಳಿ ಕೆಎಸ್‌ಆರ್‌ಪಿ ತುಕಡಿಗಳನ್ನು ನಿಯೋಜಿಸಲಾಗಿತ್ತು. ಹೀಗಾಗಿ ಯಾರೊಬ್ಬರೂ ಈದ್ಗಾ ಮೈದಾನದತ್ತ ಸುಳಿಯಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.