
ಬಸವಕಲ್ಯಾಣ: ‘ಹಿಂದುಳಿದ ಟೋಕರಿ ಕೋಲಿ ಸಮಾಜ ಸಂಘದ ಏಳಿಗೆಗೆ ನೌಕರರು ಸರ್ವ ರೀತಿಯಿಂದಲೂ ಸಹಕಾರ ನೀಡಬೇಕು’ ಎಂದು ನಿಜಶರಣ ಅಂಬಿಗರ ಚೌಡಯ್ಯ ಜಾಗೃತಿ ಆಶ್ರಮದ ಪೀಠಾಧಿಪತಿ ರತ್ನಾಕಾಂತ ಶಿವಯೋಗಿ ಸಲಹೆ ನೀಡಿದರು.
ನಗರದ ಸಸ್ತಾಪುರ ಬಂಗ್ಲಾ ರಾಷ್ಟ್ರೀಯ ಹೆದ್ದಾರಿಯಲ್ಲಿನ ನಿಜಶರಣ ಅಂಬಿಗರ ಚೌಡಯ್ಯ ಜಾಗೃತಿ ಆಶ್ರಮದಲ್ಲಿ ಗುರುವಾರ ಟೋಕರಿ ಕೋಲಿ ಸಮಾಜ ಸರ್ಕಾರಿ ನೌಕರರ ಸಂಘದಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸನ್ಮಾನ ಹಾಗೂ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ನೌಕರರು ವಿದ್ಯಾವಂತರಾಗಿರುವ ಜೊತೆಗೆ ಆರ್ಥಿಕವಾಗಿಯೂ ಸಬಲರಾಗಿರುತ್ತಾರೆ. ಆದ್ದರಿಂದ ತಮ್ಮ ಕರ್ತವ್ಯ ನಿಭಾಯಿಸುವ ಜೊತೆಗೆ ಸಮಾಜ ಕಾರ್ಯಕ್ಕೂ ಕೈಜೋಡಿಸಬೇಕು. ಸೂಕ್ತ ಮಾರ್ಗದರ್ಶನ ನೀಡಬೇಕು. ಎಲ್ಲರೂ ದುಶ್ಚಟಗಳಿಂದ ದೂರವಿರುವುದು ಸಹ ಅತ್ಯಗತ್ಯ’ ಎಂದರು.
ಸಂಘದ ಜಿಲ್ಲಾ ಗೌರವ ಅಧ್ಯಕ್ಷ ಚನ್ನವೀರ ಜಮಾದಾರ ಮಾತನಾಡಿ, ‘ನೌಕರರು ಸಮಾಜ ಕಾರ್ಯಕ್ಕೆ ಕೈಲಾದಷ್ಟು ಸಹಕರಿಸಬೇಕು. ಸಮಸ್ಯೆ ಬಗೆಹರಿಸುವುದಕ್ಕಾಗಿ ಸಂಘಟಿತರಾಗಿ ಹೋರಾಡಬೇಕು. ಜಾಗೃತಿ ಆಶ್ರಮದ ರತ್ನಾಕಾಂತ ಶಿವಯೋಗಿಗಳು ಸಾಮಾಜಿಕ ಅನಿಷ್ಟಗಳ ವಿರುದ್ಧ ಅರಿವು ಮೂಡಿಸುವ ಕಾರ್ಯ ಕೈಗೊಳ್ಳುತ್ತಿದ್ದು ಅವರಿಗೆ ನೌಕರರ ಸಂಘ ಸಹಕರಿಸುತ್ತಿದೆ’ ಎಂದರು. ತುಕಾರಾಮ ರೊಡ್ಡೆ, ಅಂಬಣ್ಣ ಉದ್ರೆ ಮಾತನಾಡಿದರು.
ಅಂಬಿಗರ ಚೌಡಯ್ಯ ಟ್ರಸ್ಟ್ ಅಧ್ಯಕ್ಷ ನಾಗಪ್ಪ ಚಾಮಾಲೆ, ಸಂಘದ ಜಿಲ್ಲಾಧ್ಯಕ್ಷ ರಾಜಕುಮಾರ ಕರಣೆ, ನಾರಂಜಾ ಸಕ್ಕರೆ ಕಾರ್ಖಾನೆ ನಿರ್ದೇಶಕ ವಿಜಯಕುಮಾರ ಪಾಟೀಲ ಸೀತಾಳಗೇರಾ, ನಗರಸಭೆ ಸದಸ್ಯ ಮಲ್ಲಿಕಾರ್ಜುನ ಬೊಕ್ಕೆ, ತುಕಾರಾಮ ಯಾತಪ್ಪ, ಪ್ರಕಾಶ ಬಾಪಾನೂರ, ಗೋವಿಂದ ಗುರೂಜಿ, ಅಂಬರೀಶ ಜಮಾದಾರ ಬೀದರ್, ಪ್ರಭು ಶಿರ್ಶಿಕರ್ ಭಾಲ್ಕಿ, ರವೀಂದ್ರ ಘರ್ಲೆ ಚಿಟಗುಪ್ಪ, ಧೂಳಪ್ಪ ನಿಟ್ಟೂರೆ ಕಮಲನಗರ, ಮಾರುತಿ ಕೋಲಿ, ವಿಜಯಕುಮಾರ ಜಮಾದಾರ, ಅಪ್ಪಾರಾವ್ ಚಿಂತಾಲೆ, ಪುಂಡಲೀಕ ಬೊಕ್ಕೆ, ಅಪ್ಪಣ್ಣ ಭಂಡಾರಿ, ವಾಲ್ಮೀಕಿ, ಸಾಗರ ಉಪಸ್ಥಿತರಿದ್ದರು.
ಮೂಢನಂಬಿಕೆಗಳಿಂದ ಸಮಾಜ ಹೊರಬರಬೇಕು. ಶಿಕ್ಷಣ ಪಡೆಯುವುದಕ್ಕೆ ಪ್ರೋತ್ಸಾಹ ನೀಡುವುದಕ್ಕಾಗಿ ಪ್ರತಿವರ್ಷ ಸಂಘದಿಂದ ಪ್ರತಿಭಾವಂತರನ್ನು ಸನ್ಮಾನಿಸಲಾಗುತ್ತಿದೆ.-ಚನ್ನವೀರ ಜಮಾದಾರ, ಜಿಲ್ಲಾ ಗೌರವ ಅಧ್ಯಕ್ಷ ಕೋಲಿ ಸಮಾಜ ನೌಕರರ ಸಂಘ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.