ADVERTISEMENT

ಇಷ್ಟಾರ್ಥ ಪೂರೈಸುವ ಬಲಮೂರಿ ಗಣೇಶ

ವಿವಿಧ ರಾಜ್ಯಗಳ ಭಕ್ತರನ್ನು ಆಕರ್ಷಿಸುವ ಕುಂಭೇಶ್ವರ ಗಜಾನನ ಮಂದಿರ

ಬಸವರಾಜ ಎಸ್.ಪ್ರಭಾ
Published 19 ಸೆಪ್ಟೆಂಬರ್ 2021, 4:49 IST
Last Updated 19 ಸೆಪ್ಟೆಂಬರ್ 2021, 4:49 IST
ಭಾಲ್ಕಿಯಲ್ಲಿರುವ ಹನ್ನೆರಡು ಜ್ಯೋರ್ತಿಲಿಂಗಗಳಲ್ಲಿ ಒಂದಾಗಿರುವ ಕುಂಭೇಶ್ವರ ಲಿಂಗ
ಭಾಲ್ಕಿಯಲ್ಲಿರುವ ಹನ್ನೆರಡು ಜ್ಯೋರ್ತಿಲಿಂಗಗಳಲ್ಲಿ ಒಂದಾಗಿರುವ ಕುಂಭೇಶ್ವರ ಲಿಂಗ   

ಭಾಲ್ಕಿ: ಇಲ್ಲಿಯ ಹಳೇ ಪಟ್ಟಣದಲ್ಲಿರುವ ಐತಿಹಾಸಿಕ ಕುಂಭೇಶ್ವರ ಗಜಾನನ ಮಂದಿರದಲ್ಲಿ ನಿಂತ ಭಂಗಿಯಲ್ಲಿರುವ ಬಲಮೂರಿ ಗಣೇಶ ಭಕ್ತರ ಇಷ್ಟಾರ್ಥಗಳನ್ನು ಪೂರೈಸುವ ಬಲು ಅಪರೂದ ದೇವರ ಮೂರ್ತಿ.

ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವ ಕುಂಭೇಶ್ವರ ಲಿಂಗ. ಶಿವ, ಗಣೇಶ, ಹನುಮಾನ ದೇವರು ಒಂದೇ ಸಾಲಿನಲ್ಲಿರುವ ಮೂರ್ತಿ. ದಕ್ಷಿಣಮುಖಿ ಹನುಮಾನ ದೇವರ ಮೂರ್ತಿ, ಬದುಕಿನ ಸಾರ್ಥಕತೆಗೆ ಭಕ್ತರು ದರ್ಶನ ಪಡೆಯಬೇಕಾದ ಐದು ವೃಕ್ಷಗಳಾದ ಆಲದಮರ, ವಟವೃಕ್ಷ, ಪಿಂಪಲ್‌, ಅವದಂಬರ, ಬೇಲ ಮರಗಳು ಇರುವುದು ಈ ದೇವಸ್ಥಾನದ ವಿಶೇಷ.

ನಿಂತ ಭಂಗಿ ಮತ್ತು ಬಲಭಾಗಕ್ಕೆ ಸೊಂಡಿಲಿರುವ ಗಣೇಶನ ಮೂರ್ತಿ, ಭಾಲ್ಕಿಯಲ್ಲಿ ಬಿಟ್ಟರೆ ದಕ್ಷಿಣ ಭಾರತದಲ್ಲಿ ಬೇರೆಲ್ಲೂ ಇಲ್ಲ. ಈ ದೇವಸ್ಥಾನಕ್ಕೆ ಸುಮಾರು 1,200 ವರ್ಷಗಳ ಇತಿಹಾಸವಿದೆ. ಮಹಾಭಾರತ ಕಾಲದ ಜೈಮುನಿ ಅಶ್ವಮೇಧ ಪುರಾಣದಲ್ಲಿ ಭಾಲ್ಕಿ ಪಟ್ಟಣದ ಉಲ್ಲೇಖವಿದೆ. ಕರ್ಣನ ಸೊಸೆ ಭಾಲ್ಕಿಯವರೇ. ಅಶ್ವಮೇಧ ಯಾಗಕ್ಕೆ ಇಲ್ಲಿಂದಲೇ ಕುದುರೆಯನ್ನು ತೆಗೆದುಕೊಂಡು ಹೋಗಿದ್ದರು. 12ನೇ ಶತಮಾನದ ಬಸವಣ್ಣನವರ ಸಮಕಾಲೀನ ಶರಣರಾಗಿದ್ದ ಕುಂಬಾರ ಗುಂಡಯ್ಯ ಶ್ರೇಷ್ಠ ಶಿವಭಕ್ತರಾಗಿದ್ದರು. ಗಡಿಗೆ ಮಾಡುವ ಕಾಯಕದ ಜೊತೆಗೆ ಶಿವಭಕ್ತಿಯಲ್ಲಿ ತಲ್ಲೀನರಾಗುತ್ತಿದ್ದ ಅವರ ಶಿವಭಕ್ತಿಯನ್ನು ಮೆಚ್ಚಿ ಶಿವ-ಪಾರ್ವತಿ, ಗಣೇಶ ಪ್ರತ್ಯಕ್ಷರಾಗಿದ್ದರು. ಕುಂಬಾರ ಗುಂಡಯ್ಯನವರ ಶಿವಭಕ್ತಿಗೆ ಮಂತ್ರಮುಗ್ಧರಾಗಿದ್ದ ಗಣೇಶ ಇಲ್ಲಿಯೇ ನಿಂತು ಬಿಟ್ಟಿದ್ದರು ಎನ್ನುವ ಪ್ರತೀತಿ ಇದೆ ಎಂದು ದೇವಸ್ಥಾನದ ಭಕ್ತರು, ಪ್ರಮುಖರಾದ ರತ್ನದೀಪ ಶೇರಿಕಾರ, ನೇತಾಜಿ ಹೊಳಸಮುದ್ರೆ, ಭರತ ಅಹಮದಾಬಾದ ತಿಳಿಸುತ್ತಾರೆ.

ADVERTISEMENT

ಪ್ರತಿ ತಿಂಗಳ ಸಂಕಷ್ಟ ಚತುರ್ಥಿಯಂದು ರಾಜ್ಯದ ವಿವಿಧ ಜಿಲ್ಲೆಗಳಲ್ಲದೆ ಮಹಾರಾಷ್ಟ್ರದ ಮುಂಬೈ, ಪೂನಾ, ಉದಗೀರ್‌, ಲಾತೂರ, ಹೈದರಾಬಾದ್‌, ತೆಲಂಗಾಣ ಸೇರಿದಂತೆ ವಿವಿಧೆಡೆಯ ಭಕ್ತರು ಆಗಮಿಸುತ್ತಾರೆ.

ದಿನಪೂರ್ತಿ ಕೀರ್ತನೆ, ಭಜನೆ, ಹರಿಪಾಠ, ಧಾರ್ಮಿಕ ಕಾರ್ಯಕ್ರಮ, ದಾಸೋಹ ನಡೆಯುತ್ತದೆ. ಈ ದೇವಸ್ಥಾನದ ಆವರಣದಲ್ಲಿರುವ ತೆರೆದ ಬಾವಿಯೂ ಎಂತಹದೇ ಸಂದರ್ಭದಲ್ಲಿಯೂ ಬತ್ತಿಲ್ಲ. ದತ್ತ ದೇವರ, ಶನಿ ದೇವರ, ನಾಗದೇವತೆಯ ಐತಿಹಾಸಿಕ ವಿಗ್ರಹಗಳು ಈ ದೇವಸ್ಥಾನದ ಆವರಣದಲ್ಲಿಯೇ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.