ADVERTISEMENT

40 ಮಂದಿಗೆ ಉಚಿತ ಕನ್ನಡಕ ವಿತರಣೆ

ಡಾ.ಸಾಲಿನ್ಸ್ ನೇತ್ರ ಆಸ್ಪತ್ರೆಯಲ್ಲಿ ವಿಶ್ವ ದೃಷ್ಟಿ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2020, 15:26 IST
Last Updated 9 ಅಕ್ಟೋಬರ್ 2020, 15:26 IST
ಬೀದರ್‌ನ ಡಾ.ಸಾಲಿನ್ಸ್ ನೇತ್ರ ಆಸ್ಪತ್ರೆಯಲ್ಲಿ ನಡೆದ ವಿಶ್ವ ದೃಷ್ಟಿ ದಿನಾಚರಣೆ ಕಾರ್ಯಕ್ರಮದಲ್ಲಿ ದೃಷ್ಟಿ ದೋಷ ಕಂಡು ಬಂದವರಿಗೆ ಉಚಿತ ಕನ್ನಡಕ ವಿತರಿಸಲಾಯಿತು
ಬೀದರ್‌ನ ಡಾ.ಸಾಲಿನ್ಸ್ ನೇತ್ರ ಆಸ್ಪತ್ರೆಯಲ್ಲಿ ನಡೆದ ವಿಶ್ವ ದೃಷ್ಟಿ ದಿನಾಚರಣೆ ಕಾರ್ಯಕ್ರಮದಲ್ಲಿ ದೃಷ್ಟಿ ದೋಷ ಕಂಡು ಬಂದವರಿಗೆ ಉಚಿತ ಕನ್ನಡಕ ವಿತರಿಸಲಾಯಿತು   

ಬೀದರ್: ವೆಲ್‍ಮೆಗ್ನಾ ಗುಡ್ ನ್ಯೂಸ್ ಸೊಸೈಟಿ ಸಂಚಾಲಿತ ಇಲ್ಲಿಯ ಡಾ.ಸಾಲಿನ್ಸ್ ನೇತ್ರ ಆಸ್ಪತ್ರೆಯಲ್ಲಿ ನಡೆದ ವಿಶ್ವ ದೃಷ್ಟಿ ದಿನಾಚರಣೆ ಕಾರ್ಯಕ್ರಮದಲ್ಲಿ ಪಕ್ಕಲವಾಡದ 40 ಮಂದಿಗೆ ಉಚಿತ ಕನ್ನಡಕ ವಿತರಿಸಲಾಯಿತು.

60 ಜನರ ತಪಾಸಣೆ ನಡೆಸಿ ದೃಷ್ಟಿ ದೋಷ ಕಂಡು ಬಂದವರಿಗೆ ಕನ್ನಡಕ ವಿತರಣೆ ಮಾಡಲಾಯಿತು.ಸಮುದಾಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಮಾಜ ಕಾರ್ಯಕರ್ತರಿಗೆ ಕಣ್ಣಿನ ಆರೈಕೆ ಕುರಿತು ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ವೆಲ್‍ಮೆಗ್ನಾ ಗುಡ್ ನ್ಯೂಸ್ ಸೊಸೈಟಿ ನಿರ್ದೇಶಕಿ ಡಾ.ಸಿಬಿಲ್ ಸಾಲಿನ್ಸ್ ಅವರು, ಕಣ್ಣಿನ ಆರೋಗ್ಯದ ಬಗ್ಗೆ ಗ್ರಾಮೀಣ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಹೆಚ್ಚು ಹೆಚ್ಚಾಗಿ ನಡೆಯಬೇಕಾಗಿದೆ ಎಂದು ಹೇಳಿದರು.

ಸಾಲಿನ್ಸ್ ಆಸ್ಪತ್ರೆಯು ಐದು ದಶಕಕ್ಕೂ ಅಧಿಕ ಅವಧಿಯಿಂದ ಉಚಿತ ನೇತ್ರ ತಪಾಸಣೆ, ಶಸ್ತ್ರಚಿಕಿತ್ಸಾ ಶಿಬಿರಗಳ ಮೂಲಕ ಜಿಲ್ಲೆಯಲ್ಲಿ ಅಂಧತ್ವ ನಿವಾರಣೆಗೆ ಶ್ರಮಿಸುತ್ತಿದೆ. ಆಸ್ಪತ್ರೆಯಲ್ಲಿ ಪ್ರತಿ ವರ್ಷ 3,500 ರಿಂದ 4,000 ಸಾವಿರ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗುತ್ತಿದೆ. ಬಡವರಿಗೆ ನೆರವಾಗಲು ಈ ಪೈಕಿ 1,500 ಶಸ್ತ್ರಚಿಕಿತ್ಸೆಗಳನ್ನು ಉಚಿತವಾಗಿ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ADVERTISEMENT

ಬೀದರ್ ನಗರದ ಜತೆಗೆ ಗ್ರಾಮೀಣ ಪ್ರದೇಶದ ಜನರಿಗೂ ಅನುಕೂಲ ಕಲ್ಪಿಸಲು ಆಸ್ಪತ್ರೆ ಔರಾದ್, ಹಳ್ಳಿಖೇಡ ಹಾಗೂ ಮನ್ನಾಎಖ್ಖೆಳ್ಳಿಯಲ್ಲಿ ಉಪ ಕೇಂದ್ರಗಳನ್ನು ಆರಂಭಿಸಿದೆ ಎಂದು ಹೇಳಿದರು.

ನಗರಸಭೆ ಮಾಜಿ ಉಪಾಧ್ಯಕ್ಷರಾದ ಆಸ್ಪತ್ರೆ ಆಡಳಿತಾಧಿಕಾರಿ ಫಿಲೋಮನ್‍ರಾಜ್ ಪ್ರಸಾದ್ ಮಾತನಾಡಿ, ಕಣ್ಣಿದ್ದರೆ ಮಾತ್ರ ಜಗತ್ತಿನ ಸೌಂದರ್ಯವನ್ನು ಕಾಣಬಹುದು. ಪ್ರತಿಯೊಬ್ಬರು ಕಣ್ಣಿನ ಸುರಕ್ಷತೆಗೆ ಒತ್ತು ಕೊಡಬೇಕು.ಡಾ.ಸಾಲಿನ್ಸ್ ಆಸ್ಪತ್ರೆ ಪ್ರತಿ ವರ್ಷ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರಗಳನ್ನು ಆಯೋಜಿಸಿ ಬಡವರಿಗೆ ಸಹಾಯ ಹಸ್ತ ಚಾಚುತ್ತಿದೆ ಎಂದು ತಿಳಿಸಿದರು.

ಚಟ್ನಳ್ಳಿಯಲ್ಲಿ ಕುಷ್ಠರೋಗಿಗಳ ಕೇಂದ್ರ ನಡೆಸುತ್ತಿದೆ. ಅನೇಕ ಅನಾಥ ಮಕ್ಕಳಿಗೆ ಊಟ, ವಸತಿ ಸಹಿತ ಶಿಕ್ಷಣ ಒದಗಿಸುತ್ತಿದೆ. ಡಾ. ಸಿಬಿಲ್ ಅವರ ಮಾನವೀಯ ಸೇವೆ ಅನುಕರಣೀಯವಾಗಿದೆ ಎಂದು ಹೇಳಿದರು.

ಟೌನ್ ಪೊಲೀಸ್ ಠಾಣೆಯ ಸರ್ಕಲ್ ಇನ್‍ಸ್ಪೆಕ್ಟರ್ ರಾಜಣ್ಣ, ಡಾ.ವೀರೇಂದ್ರ ಪಾಟೀಲ, ಡಾ. ಪಲ್ಲವಿ, ಡಾ. ನೇಹಾ, ಕಾರ್ಯಕ್ರಮ ಸಂಘಟಕ ಸುದೇಶ ಪ್ರೇಮ್ಸ್ ಇದ್ದರು. 80 ಜನ ಸಮಾಜ ಕಾರ್ಯಕರ್ತರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.