ADVERTISEMENT

SSLC Exam | ಅನುದಾನ ರಹಿತ ಶಾಲೆಗಳ ಉತ್ತಮ ಸಾಧನೆ

ಸರ್ಕಾರಿ ಶಾಲೆಗಳಿಗೆ ಎರಡನೇ ಸ್ಥಾನ; ಪ್ರವರ್ಗ ‘3ಬಿ’ ವಿದ್ಯಾರ್ಥಿಗಳು ಫಲಿತಾಂಶದಲ್ಲಿ ಮುಂದೆ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 5 ಮೇ 2025, 4:34 IST
Last Updated 5 ಮೇ 2025, 4:34 IST
Students Taking Exam in Classroom Setting. Students in uniforms are seated in a classroom, writing answers during an exam, highlighting focus and academic testing.
Students Taking Exam in Classroom Setting. Students in uniforms are seated in a classroom, writing answers during an exam, highlighting focus and academic testing.   

ಬೀದರ್‌: ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಬೀದರ್‌ ಜಿಲ್ಲೆಯ ಅನುದಾನ ರಹಿತ ಶಾಲೆಗಳ ಮಕ್ಕಳು ಉತ್ತಮ ಸಾಧನೆ ಮಾಡಿದ್ದಾರೆ.

ಜಿಲ್ಲೆಯ ಒಟ್ಟಾರೆ ಫಲಿತಾಂಶ ಅವಲೋಕಿಸಿದಾಗ ಸರ್ಕಾರಿ ಹಾಗೂ ಅನುದಾನ ಸಹಿತ ಶಾಲೆಗಳಿಗೆ ಹೋಲಿಸಿದರೆ ಅನುದಾನ ರಹಿತ ಶಾಲೆಗಳ ಮಕ್ಕಳು ಮುಂದೆ ಇದ್ದಾರೆ. ಅನುದಾನ ರಹಿತ ಶಾಲೆಗಳಿಗೆ ಶೇ 62.78ರಷ್ಟು ಫಲಿತಾಂಶ ಬಂದಿದೆ. ಒಟ್ಟು 9,857 ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 6,188 ಮಕ್ಕಳು ಉತ್ತೀರ್ಣರಾಗಿದ್ಧಾರೆ.

ಅನುದಾನ ಸಹಿತ ಶಾಲೆಗಳಿಗೆ ಹೋಲಿಸಿದರೆ ಸರ್ಕಾರಿ ಶಾಲಾ ಮಕ್ಕಳು ಉತ್ತಮ ಫಲಿತಾಂಶ ಪಡೆದಿದ್ದಾರೆ. 9,057 ಸರ್ಕಾರಿ ಶಾಲಾ ಮಕ್ಕಳು ಪರೀಕ್ಷೆ ಬರೆದಿದ್ದು, ಇದರಲ್ಲಿ 4,234 ಮಕ್ಕಳು ಪಾಸಾಗಿದ್ದಾರೆ. ಶೇ 46.75ರಷ್ಟು ಫಲಿತಾಂಶ ಲಭಿಸಿದೆ. ಇನ್ನು, ಅನುದಾನಿತ ಶಾಲೆಗಳಿಗೆ ಶೇ 42.27 ಫಲಿತಾಂಶ ಬಂದಿದೆ. 5,273 ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದರು. ಇದರಲ್ಲಿ 2,229 ಮಕ್ಕಳಷ್ಟೇ ಪಾಸಾಗಿದ್ದಾರೆ.

ADVERTISEMENT

‘ಅನುದಾನ ರಹಿತ ಶಾಲೆಗಳಲ್ಲಿ ‘ಚೆಕ್‌ ಅಂಡ್‌ ಬ್ಯಾಲೆನ್ಸ್‌’ ವ್ಯವಸ್ಥೆ ಇದೆ. ಸರ್ಕಾರಿ ಹಾಗೂ ಅನುದಾನ ಸಹಿತ ಶಾಲೆಗಳಿಗೆ ಹೋಲಿಸಿದರೆ ಅನುದಾನ ರಹಿತ ಶಾಲೆಗಳಿಗೆ ಹೆಚ್ಚಿನ ಸವಾಲು ಇದೆ. ಹೆಚ್ಚಿನ ಶುಲ್ಕ ಪಾವತಿಸುವ ಪೋಷಕರು, ಮಕ್ಕಳ ಪ್ರತಿಯೊಂದು ಶೈಕ್ಷಣಿಕ ವಿಚಾರಗಳನ್ನು ಕಾಲಕಾಲಕ್ಕೆ ಪ್ರಶ್ನಿಸುತ್ತಾರೆ. ಮಕ್ಕಳಿಗೆ ಸರಿಯಾಗಿ ಪಾಠ ಮಾಡದಿದ್ದರೆ ಬೇರೆ ಶಾಲೆಗೆ ಸೇರಿಸುತ್ತಾರೆ. ಈ ಭಯದಿಂದ ಪಾಠ, ಪ್ರವಚನಕ್ಕೆ ಅಲ್ಲಿ ಹೆಚ್ಚಿನ ಒತ್ತು ಕೊಡಲಾಗುತ್ತಿದೆ. ಈ ಭಯ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳವರಿಗೆ ಇಲ್ಲ. ಇಲ್ಲೂ ಕೂಡ ‘ಚೆಕ್‌ ಅಂಡ್‌ ಬ್ಯಾಲೆನ್ಸ್‌’ ವ್ಯವಸ್ಥೆ ಕಟ್ಟುನಿಟ್ಟಿನಿಂದ ಬಂದರೆ ಇನ್ನಷ್ಟು ಸುಧಾರಣೆ ಕಾಣಬಹುದು’ ಎನ್ನುತ್ತಾರೆ ಶಿಕ್ಷಣ ಕ್ಷೇತ್ರದ ತಜ್ಞರು.

ಪ್ರವರ್ಗ ‘3ಬಿ’ಗೆ ಹೆಚ್ಚು ಫಲಿತಾಂಶ:

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪ್ರವರ್ಗ ‘3ಬಿ’ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿ, ಹೆಚ್ಚು ಫಲಿತಾಂಶ ಗಿಟ್ಟಿಸಿದ್ದಾರೆ. ‘3ಬಿ’ಗೆ ಶೇ 67.91ರಷ್ಟು ಫಲಿತಾಂಶ ಲಭಿಸಿದೆ. ಪರಿಶಿಷ್ಟ ಜಾತಿ ಮಕ್ಕಳು ಕೊನೆಯ ಸ್ಥಾನದಲ್ಲಿದ್ದಾರೆ. ಶೇ 42.80ರಷ್ಟು ಫಲಿತಾಂಶ ಬಂದಿದೆ. ಪ್ರವರ್ಗ ‘2ಎ‘, ಪ್ರವರ್ಗ ‘3ಎ’, ಇತರೆ ವರ್ಗದ ವಿದ್ಯಾರ್ಥಿಗಳು ಶೇ 60ಕ್ಕಿಂತ ಹೆಚ್ಚಿನ ಫಲಿತಾಂಶ ಪಡೆದಿದ್ದಾರೆ. ಪರಿಶಿಷ್ಟ ಪಂಗಡಕ್ಕೆ ಸೇರಿದ ಶೇ 50.89ರಷ್ಟು ಮಕ್ಕಳು ಪಾಸಾಗಿದ್ದಾರೆ.

‘ಪ್ರವರ್ಗ ‘3ಬಿ’ಯಲ್ಲಿ ಲಿಂಗಾಯತರಿದ್ದಾರೆ. ಅವರಿಗೆ ಮಠ, ಮಾನ್ಯಗಳು ಸೇರಿದಂತೆ ಎಲ್ಲ ಕಡೆಯಿಂದಲೂ ಆರಂಭದಿಂದ ಉತ್ತಮ ಸೌಲಭ್ಯಗಳು ಸಿಗುತ್ತಿವೆ. ಸಹಜವಾಗಿಯೇ ಆ ವರ್ಗದ ಮಕ್ಕಳು ಹೆಚ್ಚು ಉತ್ತೀರ್ಣರಾಗಿದ್ದಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು ಇನ್ನಷ್ಟೇ ಮುಖ್ಯ ವಾಹಿನಿಗೆ ಬರಬೇಕಿದೆ. ಅನೇಕ ಮನೆತನದವರು ಈಗಷ್ಟೇ ಶಾಲೆಯ ಮುಖ ನೋಡುತ್ತಿದ್ದಾರೆ. ನಿಧಾನವಾಗಿ ಬದಲಾವಣೆ ಆಗುತ್ತದೆ’ ಎಂದು ಹೆಸರು ಹೇಳಲಿಚ್ಛಿಸದ ಪರಿಶಿಷ್ಟ ಸಮಾಜದ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.