ADVERTISEMENT

ಹಿರೇಮಠ ಸಂಸ್ಥಾನಕ್ಕೆ ರಾಜ್ಯ ಪ್ರಶಸ್ತಿ

ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿನ ಅಪ್ರತಿಮ ಸೇವೆಗೆ ಸಂದ ಗೌರವ

ಬಸವರಾಜ ಎಸ್.ಪ್ರಭಾ
Published 11 ಮಾರ್ಚ್ 2021, 2:41 IST
Last Updated 11 ಮಾರ್ಚ್ 2021, 2:41 IST
ಬೆಂಗಳೂರಿನ ಅರಮನೆ ಮೈದಾನದಲ್ಲಿ ಬುಧವಾರ ಭಾಲ್ಕಿ ಹಿರೇಮಠ ಸಂಸ್ಥಾನ ವಿದ್ಯಾಪೀಠಕ್ಕೆ ದೊರೆತ ‘ಮಕ್ಕಳ ಕಲ್ಯಾಣ ರಾಜ್ಯ ಪ್ರಶಸ್ತಿ’ಯನ್ನು ಡಾ.ಬಸವಲಿಂಗ ಪಟ್ಟದ್ದೇವರಿಗೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವೆ ಶಶಿಕಲಾ ಜೊಲ್ಲೆ ಅವರು ಪ್ರದಾನ ಮಾಡಿದರು
ಬೆಂಗಳೂರಿನ ಅರಮನೆ ಮೈದಾನದಲ್ಲಿ ಬುಧವಾರ ಭಾಲ್ಕಿ ಹಿರೇಮಠ ಸಂಸ್ಥಾನ ವಿದ್ಯಾಪೀಠಕ್ಕೆ ದೊರೆತ ‘ಮಕ್ಕಳ ಕಲ್ಯಾಣ ರಾಜ್ಯ ಪ್ರಶಸ್ತಿ’ಯನ್ನು ಡಾ.ಬಸವಲಿಂಗ ಪಟ್ಟದ್ದೇವರಿಗೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವೆ ಶಶಿಕಲಾ ಜೊಲ್ಲೆ ಅವರು ಪ್ರದಾನ ಮಾಡಿದರು   

ಭಾಲ್ಕಿ: ಇಲ್ಲಿಯ ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್‌ಗೆ ಹಲವು ದಶಕಗಳಿಂದ ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆಯನ್ನು ಪರಿಗಣಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ 2020-21ನೇ ಸಾಲಿನ ‘ಮಕ್ಕಳ ಕಲ್ಯಾಣ ರಾಜ್ಯ ಪ್ರಶಸ್ತಿ’ಯ ಗೌರವ ಸಂದಿದೆ.

ಬುಧವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವೆ ಶಶಿಕಲಾ ಜೊಲ್ಲೆ ಅವರು ಡಾ.ಬಸವಲಿಂಗ ಪಟ್ಟದ್ದೇವರಿಗೆ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

ಕನ್ನಡ ಮಠ ಮತ್ತು ಕನ್ನಡದ ಪಟ್ಟದ್ದೇವರು ಎಂಬ ಹೆಸರು ಹಿರೇಮಠ ಸಂಸ್ಥಾನಕ್ಕೆ ಬರಲು ಕಾರಣಿಕರ್ತರಾದ ಲಿಂಗೈಕ್ಯ ಡಾ.ಚನ್ನಬಸವ ಪಟ್ಟದ್ದೇವರ ಎಲ್ಲ ಸಂಕಲ್ಪಗಳನ್ನು ಸಾಕಾರಗೊಳಿಸಲು ಡಾ.ಬಸವಲಿಂಗ ಪಟ್ಟದ್ದೇವರು ನಾಲ್ಕು ದಶಕಗಳಿಂದ ಶ್ರಮಿಸುತ್ತಿದ್ದಾರೆ.

ADVERTISEMENT

ದೀನ-ದಲಿತರ, ಬಡವರ, ನಿರ್ಗತಿಕರ ಆಶಾಕಿರಣವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶಿಕ್ಷಣವೇ ಶಕ್ತಿ. ಶಿಕ್ಷಣ ಮನುಷ್ಯರ ಎಲ್ಲ ಸಮಸ್ಯೆಗಳನ್ನು ಪರಿಹರಿಸುತ್ತದೆ ಎಂಬ ಆಶಯದಿಂದ ಪೂಜ್ಯರು ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್‌ ಅನ್ನು 1992 ರಲ್ಲಿ ಆರಂಭಿಸಿದ್ದರು.

‘ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್‌ ಅಡಿಯಲ್ಲಿ ಶಿಶುವಿಹಾರ, ಪ್ರಾಥಮಿಕ-ಪ್ರೌಢ ಶಾಲೆಗಳು, ಪದವಿ-ಪೂರ್ವ ಕಾಲೇಜು, ಪದವಿ ಕಾಲೇಜು, ಅನಾಥ ಮಕ್ಕಳ ಕೇಂದ್ರ, ಡಿ.ಇಡಿ. ಕಾಲೇಜು, ಬಿ.ಇಡಿ. ಕಾಲೇಜು, ಐಟಿಐ, ಪ್ರಸಾದ ನಿಲಯ, ಗ್ರಂಥಾಲಯ, ಸಂಗೀತ ಶಾಲೆ, ಗೋ ಶಾಲೆ ಸೇರಿದಂತೆ ಒಟ್ಟು 50 ವೈವಿಧ್ಯಮಯ ವಿಭಾಗಗಳು ಕಾರ್ಯನಿರ್ವಹಿಸುತ್ತಿವೆ. ಹದಿನೈದು ಸಾವಿರಕ್ಕೂ ಮೇಲ್ಪಟ್ಟು ವಿದ್ಯಾರ್ಥಿಗಳು, ಒಂದು ಸಾವಿರಕ್ಕೂ ಮೇಲ್ಪಟ್ಟು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಸೇವೆ ಸಲ್ಲಿಸುತ್ತಿದ್ದಾರೆ’ ಎಂದು ಆಡಳಿತಾಧಿಕಾರಿ ಮೋಹನರೆಡ್ಡಿ ತಿಳಿಸಿದರು.

‘ಭಾಲ್ಕಿಯ ಹೊರವಲಯದಲ್ಲಿರುವ ಡೊಂಬರಾಟ ಓಣಿ ನಿವಾಸಿಗಳ ಮಕ್ಕಳ ಸರ್ವಾಂಗೀಣ ವಿಕಾಸಕ್ಕಾಗಿ ಮಾಡುತ್ತಿರುವ ಸೇವೆ ಪೂಜ್ಯರ ಮಾನವೀಯ ಕಾರ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಹೆತ್ತ ತಾಯಂದಿರಿಂದ ವಂಚಿತರಾಗಿ ರಸ್ತೆಯಲ್ಲಿ, ತಿಪ್ಪೆಯಲ್ಲಿ, ಚರಂಡಿಯಲ್ಲಿ ಬಿಸಾಡಿದ ಅನಾಥ ಮಕ್ಕಳ ಮಾತೆಯಾಗಿ ಬಸವಲಿಂಗ ಪಟ್ಟದ್ದೇವರು ಆ ಶಿಶುಗಳಿಗೆ ಮಾನವೀಯ ಅಂತಃಕರಣ ಸ್ಪರ್ಶ ನೀಡಿ ಬೆಳೆಸುತ್ತಿದ್ದಾರೆ’ ಎಂದು ಪೂಜ್ಯರ ಕಾರ್ಯಗಳನ್ನು ದಶಕಗಳಿಂದ ನೋಡುತ್ತಿರುವ ರಮೇಶ ಪಟ್ನೆ ತಿಳಿಸುತ್ತಾರೆ.

‘ಪೂಜ್ಯರ ಸಮಗ್ರ ಶೈಕ್ಷಣಿಕ ಸೇವೆ ಮತ್ತು ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಗಣನೀಯವಾದ ಸೇವೆ ಗುರುತಿಸಿ ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್‌ಗೆ ರಾಜ್ಯ ಪ್ರಶಸ್ತಿ ನೀಡುವ ಮೂಲಕ ಪ್ರಶಸ್ತಿಯ ಘನತೆಯನ್ನು ಹೆಚ್ಚಿಸಿದೆ’ ಎಂದು ಭಕ್ತರು ಸಂತಸ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.