
ಭಾಲ್ಕಿ: ಪ್ರಸಕ್ತ ವರ್ಷದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಮುಂಗಾರು ಬೆಳೆಗಳು ಹಾಳಾಗಿದ್ದು, ಅನ್ನದಾತರು ಸಂಕಷ್ಟದಲ್ಲಿದ್ದಾರೆ. ಅಕ್ಟೋಬರ್‌ನಲ್ಲಿ ಸುರಿದ ಹೆಚ್ಚಿನ ಮಳೆಯಿಂದ ಹಿಂಗಾರು ಬಿತ್ತನೆಗೂ ಅಡ್ಡಿಯಾಗಿದ್ದು, ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ.
ಪ್ರತಿವರ್ಷ ಸಾಮಾನ್ಯವಾಗಿ ಸೆಪ್ಟೆಂಬರ್ ಎರಡನೇ ವಾರದಿಂದ ರಬಿ(ಹಿಂಗಾರು) ಬೆಳೆಗಳ ಬಿತ್ತನೆ ಕಾರ್ಯ ಆರಂಭವಾಗುತ್ತದೆ. ಅಕ್ಟೋಬರ್ ಕೊನೆಯಲ್ಲಿ ಇಲ್ಲವೇ ನವೆಂಬರ್ ಮೊದಲನೇ ವಾರದವರೆಗೆ ಬಹುತೇಕ ಬಿತ್ತನೆ ಕಾರ್ಯ ಮುಗಿಯುತ್ತದೆ. ಆದರೆ ಈ ವರ್ಷ ಸುರಿದ ನಿರಂತರ ಮಳೆಯಿಂದಾಗಿ ನವೆಂಬರ್ ಆರಂಭವಾದರೂ ತಾಲ್ಲೂಕಿನಲ್ಲಿ ಶೇ 30ರಷ್ಟು ಮಾತ್ರ ಹಿಂಗಾರು ಬಿತ್ತನೆಯಾಗಿದೆ. ಬೆಳೆಗಳ ಬಿತ್ತನೆಗೆ ಮಳೆ ಮತ್ತು ಮೋಡದ ವಾತಾವರಣ ನಿರಂತರ ಭಯ ಹುಟ್ಟಿಸುತ್ತಿದೆ. ಹೀಗಾಗಿ, ಹಿಂಗಾರಿನಲ್ಲಾದರೂ ಉತ್ತಮ ಬೆಳೆ ಪಡೆಯಬೇಕೆಂಬ ರೈತರ ನಿರೀಕ್ಷೆ ಹುಸಿಗೊಳ್ಳುವ ಸಾಧ್ಯತೆ ಹೆಚ್ಚಿದೆ.
ಅಧಿಕ ವರ್ಷಧಾರೆಯಿಂದಾಗಿ ಮುಂಗಾರು ಬೆಳೆಗಳಾದ ತೊಗರಿ, ಉದ್ದು, ಹೆಸರು ಸಂಪೂರ್ಣ ಹಾಳಾಗಿವೆ. ಹಿಂಗಾರಿನಲ್ಲಾದರೂ ಕಡಲೆ, ಕುಸುಬಿ ಬಿತ್ತನೆ ಮಾಡಿ ಉತ್ತಮ ಬೆಳೆ ಪಡೆದು ಖಾರೀಫ್ ಬೆಳೆಗಳಲ್ಲಾದ ನಷ್ಟವನ್ನು ಸರಿದೂಗಿಸಿಕೊಳ್ಳಬಹುದೆಂದು ಭಾವಿಸಿದ್ದೆವು. ಆದರೆ ಅಕ್ಟೋಬರ್‌ನಲ್ಲಿ ಸುರಿದ ಹೆಚ್ಚಿನ ಮಳೆಯಿಂದಾಗಿ ಕಡಲೆ, ಕುಸುಬಿ ಬಿತ್ತನೆ ಮಾಡಲಾದ ಭೂಮಿಯಲ್ಲಿ ಹೆಚ್ಚಿನ ತೇವಾಂಶ, ನೀರು ಸಂಗ್ರಹಗೊಂಡಿದ್ದು ಕಡಲೆ, ಕುಸುಬಿ ಬೀಜಗಳು ನೀರಿನಲ್ಲಿ ಕೊಳೆತು ಹೋಗಿವೆ. ಇನ್ನೂ ಚಿಕ್ಕದಾಗಿರುವ ಸಸಿಗಳು ಕೂಡ ಕೆಂಪನೆ ಬಣ್ಣಕ್ಕೆ ತಿರುಗಿ ಕೊಳೆಯುವ ಸ್ಥಿತಿಯಲ್ಲಿವೆ ಎಂದು ಡಾವರಗಾಂವ ಗ್ರಾಮದ ರೈತರಾದ ವಿಶ್ವನಾಥ ಕುಂಬಾರ, ಲಕ್ಷ್ಮಣ ಹಾಲಹಳ್ಳೆ, ರಾಜಶೇಖರ ಶೇರಿಕಾರ ಅಳಲು ತೋಡಿಕೊಂಡರು.
ಹೊಲದಲ್ಲಿನ ಮೊಳಕೆಗಳು ಕೊಳೆಯುತ್ತಿರುವುದರಿಂದ ಪುನಃ ಬಿತ್ತನೆ ಅನಿವಾರ್ಯವಾಗಿದೆ. ಇದರಿಂದ ಈಗಾಗಲೇ ಗೊಬ್ಬರ, ಬೀಜ, ಬಿತ್ತನೆ ಖರ್ಚು ಸೇರಿ ಪ್ರತಿ ಎಕರೆ ಬಿತ್ತನೆಗೆ ಖರ್ಚು ಮಾಡಿರುವ ₹ 6 ಸಾವಿರ ಜೊತೆಗೆ ಪುನಃ ಪ್ರತಿ ಎಕರೆಯ ಬಿತ್ತನೆಗೆ ₹ 6 ಸಾವಿರ ಖರ್ಚು ಮಾಡಬೇಕಾಗಿರುವುದರಿಂದ ಅನ್ನದಾತರ ಸಾಲ, ಸಂಕಷ್ಟದ ಪ್ರಮಾಣ ಹೆಚ್ಚಾಗುತ್ತಲೇ ಇದೆ ಎಂಬುದು ರೈತ ಸಮುದಾಯವನ್ನು ಮತ್ತಷ್ಟು ಚಿಂತೆಗೆ ದೂಡುತ್ತಿದೆ. ನಮ್ಮನ್ನು ಸಂಕಷ್ಟದ ಮತ್ತು ಸಾಲದ ಸುಳಿಯಿಂದ ಪಾರು ಮಾಡಲು ಅಧಿಕಾರಿಗಳು, ಜನಪ್ರತಿನಿಧಿಗಳು ಪ್ರತಿ ರೈತರಿಗೆ ಬೆಳೆ ಪರಿಹಾರದ ಹಣ ಸಕಾಲದಲ್ಲಿ ತಲುಪುವಂತೆ ಕಾಳಜಿ ಪೂರ್ವಕವಾಗಿ ನೋಡಿಕೊಳ್ಳಬೇಕಾಗಿದೆ ಎನ್ನುತ್ತಾರೆ ಅನ್ನದಾತರು.
ಗೊಬ್ಬರ ಬೀಜ ಬಿತ್ತನೆ ಖರ್ಚು ಸೇರಿ ಪ್ರತಿ ಎಕರೆ ಬಿತ್ತನೆಗೆ ಖರ್ಚು ₹ 6 ಸಾವಿರ ವೆಚ್ಚವಾಗಿದೆ. ಈಗ ಪುನಃ ಬಿತ್ತನೆ ಮಾಡಬೇಕಾಗಿದೆ. ಹೀಗಾಗಿ ಸಾಲ ಸಂಕಷ್ಟದ ಪ್ರಮಾಣ ಹೆಚ್ಚಾಗಲಿದೆ–ರಾಜಶೇಖರ ಡಾವರಗಾಂವ, ರೈತ
ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಸುರಿದ ಮಳೆಯಿಂದ ಹಿಂಗಾರು ಬಿತ್ತನೆಗೆ ಹಿನ್ನಡೆಯಾಗಿದೆ. ನವೆಂಬರ್ 15ರವರೆಗೆ ಜೋಳ ಕುಸುಬೆ ಮತ್ತು ತಿಂಗಳ ಕೊನೆಯವರೆಗೆ ಕಡಲೆ ಗೋಧಿ ಬಿತ್ತನೆ ಮಾಡಬಹುದು–ಪಿ.ಎಂ. ಮಲ್ಲಿಕಾರ್ಜುನ, ಸಹಾಯಕ ಕೃಷಿ ನಿರ್ದೇಶಕ ಭಾಲ್ಕಿ
ಆರ್ಥಿಕ ಸಂಕಷ್ಟದಲ್ಲಿರುವ ರೈತರ ನೆರವಿಗೆ ಉಚಿತವಾಗಿ ಗೊಬ್ಬರ ಬೀಜ ವಿತರಿಸಬೇಕು. ಕೂಡಲೇ ಅನ್ನದಾತರಿಗೆ ಪರಿಹಾರದ ಹಣ ದೊರೆಯಬೇಕು–ಸಿದ್ರಾಮಪ್ಪ ಆಣದೂರೆ, ರೈತ ಸಂಘದ ಜಿಲ್ಲಾಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.