ADVERTISEMENT

ಬೀದರ್ | ಬಾಲ್ಯ ವಿವಾಹ ತಡೆಯಲು ಕಟ್ಟೆಚ್ಚರ ವಹಿಸಿ: ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ

ಜಿಲ್ಲಾ ಮಕ್ಕಳ ಕಲ್ಯಾಣ ಹಾಗೂ ರಕ್ಷಣಾ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ

​ಪ್ರಜಾವಾಣಿ ವಾರ್ತೆ
Published 30 ಜುಲೈ 2024, 14:35 IST
Last Updated 30 ಜುಲೈ 2024, 14:35 IST
ಬೀದರ್‌ನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಕ್ಕಳ ಕಲ್ಯಾಣ ಹಾಗೂ ರಕ್ಷಣಾ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಮಾತನಾಡಿದರು
ಬೀದರ್‌ನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಕ್ಕಳ ಕಲ್ಯಾಣ ಹಾಗೂ ರಕ್ಷಣಾ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಮಾತನಾಡಿದರು   

ಬೀದರ್: ಜಿಲ್ಲೆಯಲ್ಲಿ ಬಾಲ್ಯ ವಿವಾಹ, ಅನೈತಿಕ ದತ್ತು ಮಾರಾಟ, ಮಕ್ಕಳ ಅಕ್ರಮ ಮಾರಾಟ ಸೇರಿದಂತೆ ಇನ್ನಿತರ ಕೃತ್ಯಗಳು ಜರುಗದಂತೆ ಅಧಿಕಾರಿಗಳು ನಿಗಾ ವಹಿಸಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಮಕ್ಕಳ ಕಲ್ಯಾಣ ಮತ್ತು ರಕ್ಷಣಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ಬಾಲ್ಯ ವಿವಾಹ ಮಾಡುವ ಪಾಲಕರ ವಿರುದ್ಧ ಪೊಕ್ಸೊ ಪ್ರಕರಣ ದಾಖಲಿಸಬೇಕೆಂಬ ನಿಯಮವಿದೆ. ಅದನ್ನು ಎಲ್ಲೆಡೆ ತಿಳಿಹೇಳಿದರೆ ಬಾಲ್ಯ ವಿವಾಹ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತವೆ. ಅಧಿಕಾರಿಗಳು ಕಾಟಾಚಾರಕ್ಕೆ ಕೆಲಸ ಮಾಡದೇ ಪ್ರಜ್ಞಾಪೂರ್ವಕವಾಗಿ ಕೆಲಸ ಮಾಡಬೇಕು ಎಂದು ಎಚ್ಚರಿಕೆ ನೀಡಿದರು.

ADVERTISEMENT

ಮಕ್ಕಳ ಪಾಲನಾ ಸಂಸ್ಥೆಗಳು ಕಡ್ಡಾಯವಾಗಿ ಸರ್ಕಾರದಿಂದ ತಮ್ಮ ಹೆಸರನ್ನು ನೊಂದಣಿ ಮಾಡಿಕೊಳ್ಳಬೇಕು ಮತ್ತು ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರರು ಮಕ್ಕಳ ರಕ್ಷಣಾ ಸಮಿತಿಗಳನ್ನು ರಚಿಸಿ ಆಗಾಗ ಸಭೆ ನಡೆಸಿ ಮಾಹಿತಿ ಪಡೆಯಬೇಕು ಎಂದು ಸೂಚಿಸಿದರು.

ಹೋಟೆಲ್, ಗ್ಯಾರೇಜ್ ಹಾಗೂ ಕಾರ್ಖಾನೆಗಳಲ್ಲಿ ಬಾಲ ಕಾರ್ಮಿಕ ಮಕ್ಕಳು ಕಂಡುಬಂದರೆ ಕಾರ್ಮಿಕ ಇಲಾಖೆಯ ಅಧಿಕಾರಿಗಳು ತಕ್ಷಣ ಕ್ರಮ ವಹಿಸಬೇಕು. ಬಾಲ ಕಾರ್ಮಿಕರನ್ನು ಯಾರೂ ದುಡಿಸಿಕೊಳ್ಳಬಾರದು. ಜಿಲ್ಲೆಯಲ್ಲಿ ಈ ವರ್ಷ ದಾಖಲಾದ 49 ಟಿನೇಜ್‌ ಪ್ರೆಗ್ನೆನ್ಸಿ ಪ್ರಕರಣಗಳ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಹೆಚ್ಚಿನ ಗಮನ ಹರಿಸುವುದರ ಜೊತೆಗೆ ಇಂತಹ ಪ್ರಕರಣಗಳು ನಡೆಯದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ಪ್ರೌಢಶಾಲೆ ಮತ್ತು ಪಿಯುಸಿಯಲ್ಲಿ ಎಷ್ಟು ಮಕ್ಕಳು ಶಾಲೆ ಬಿಟ್ಟಿದ್ದಾರೆ ಎಂಬ ಮಾಹಿತಿಯನ್ನು ಸಂಗ್ರಹಿಸಬೇಕು ಹಾಗೂ ಶಾಲಾ, ಕಾಲೇಜುಗಳಲ್ಲಿ ಮಕ್ಕಳ ಸಹಾಯವಾಣಿ ಫಲಕ ಅಳವಡಿಸುವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ಬದೋಲೆ ಮಾತನಾಡಿ, ಮಕ್ಕಳ ಹಕ್ಕುಗಳು ಹಾಗೂ ಅರಿವಿನ ಕುರಿತು ಹಲವಾರು ಜನ ಜಾಗೃತಿ ಕಾರ್ಯಕ್ರಮಗಳನ್ನು ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಬೇಕು ಎಂದು ಸೂಚಿಸಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ ಪೂಜಾರ, ನಗರಸಭೆ ಆಯುಕ್ತ ಶಿವರಾಜ ರಾಠೋಡ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಚಂದ್ರಕಾಂತ ಶಾಬಾದಕರ್, ಶಾಲಾ- ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಸಲೀಂ ಪಾಶಾ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಗುರುರಾಜ, ರಕ್ಷಣಾಧಿಕಾರಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಗೌರಿಶಂಕರ ಪರತಾಪೂರ, ಮಕ್ಕಳ ಕಲ್ಯಾಣ ಸಮಿತಿ ಜಿಲ್ಲಾಧ್ಯಕ್ಷೆ ರಜಿಯಾ ಬಳಬಟ್ಟಿ, ಜಿಲ್ಲೆಯ ವಿವಿಧ ತಾಲ್ಲೂಕಿನ ತಹಶೀಲ್ದಾರರು ಹಾಗೂ ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಮತ್ತು ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಪದಾಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.

ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು
ಮಕ್ಕಳ ರಕ್ಷಣಾ ಆಯೋಗವು ಮಕ್ಕಳ ಪೌಷ್ಟಿಕ ಆಹಾರ ಆರೋಗ್ಯ ಸೇವೆ ಶುದ್ಧ ಕುಡಿಯುವ ನೀರು ಸ್ವಚ್ಛತೆ ಹಾಗೂ ನೈರ್ಮಲ್ಯ ಶಿಕ್ಷಣ ಆಟಪಾಠಗಳಿಗೆ ಅಗತ್ಯವಿರುವ ಮೂಲ ಸೌಕರ್ಯಗಳನ್ನು ಕಡ್ಡಾಯವಾಗಿ ಒದಗಿಸಬೇಕು
ಶಿಲ್ಪಾ ಶರ್ಮಾ ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.