ADVERTISEMENT

ಬಿಜೆಪಿಗೆ ಎಲ್ಲ ಸಮುದಾಯಗಳ ಬೆಂಬಲ

ಬಸವಕಲ್ಯಾಣ ಉಪ ಚುನಾವಣೆ: ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2021, 3:29 IST
Last Updated 8 ಏಪ್ರಿಲ್ 2021, 3:29 IST
ಬಸವಕಲ್ಯಾಣದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಸಮ್ಮುಖದಲ್ಲಿ ಮಾಜಿ ಶಾಸಕ ಎಂ.ಜಿ.ಮುಳೆ ಬಿಜೆಪಿಗೆ ಸೇರ್ಪಡೆ ಮಾಡಿಕೊಂಡರು
ಬಸವಕಲ್ಯಾಣದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಸಮ್ಮುಖದಲ್ಲಿ ಮಾಜಿ ಶಾಸಕ ಎಂ.ಜಿ.ಮುಳೆ ಬಿಜೆಪಿಗೆ ಸೇರ್ಪಡೆ ಮಾಡಿಕೊಂಡರು   

ಬಸವಕಲ್ಯಾಣ: ‘ಎಲ್ಲ ಸಮುದಾಯಗಳ ಬೆಂಬಲ ದೊರಕುತ್ತಿರುವ ಕಾರಣ ಬಿಜೆಪಿ ಅಭ್ಯರ್ಥಿ ಶರಣು ಸಲಗರ ಜಯ ನಿಶ್ಚಿತವಾಗಿದೆ’ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.

ಇಲ್ಲಿನ ಶಾಂತಿನಿಕೇತನ ಶಾಲೆ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಮಾಜಿ ಶಾಸಕ ಎಂ.ಜಿ.ಮುಳೆ ಅವರ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಎಂ.ಜಿ.ಮುಳೆ ಅವರು ಎನ್.ಸಿ.ಪಿ ಅಭ್ಯರ್ಥಿಯಾಗಿದ್ದರೂ ಸಮಾಜದ ಹಿತಕ್ಕಾಗಿ ನಾಮಪತ್ರ ಹಿಂದಕ್ಕೆ ಪಡೆದು ಪಕ್ಷ ಸೇರ್ಪಡೆ ಆಗುತ್ತಿದ್ದಾರೆ. ಇವರು ಮರಾಠಾ ಸಮುದಾಯದ ಪ್ರಬಲ ನಾಯಕರಾಗಿದ್ದು ಇವರಿಂದ ಪಕ್ಷಕ್ಕೆ ಆನೆ ಬಲ ದೊರೆತಂತಾಗಿದೆ. ಇವರ ಮುಂದಾಳತ್ವದಲ್ಲಿ ಸಮಾಜದ ಉದ್ಧಾರವೂ ಆಗಲಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನಪರ ಯೋಜನೆಗಳು ಜನರಿಗೆ ಹಿಡಿಸಿವೆ. ಆದ್ದರಿಂದ ಎಲ್ಲೆಡೆ ಬಿಜೆಪಿ ಜಯಭೇರಿ ಬಾರಿಸುತ್ತಿದೆ’ ಎಂದರು.

ADVERTISEMENT

ಮಾಜಿ ಶಾಸಕ ಎಂ.ಜಿ.ಮುಳೆ ಮಾತನಾಡಿ, ‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮರಾಠಾ ಸಮಾಜದ 6 ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದಾರೆ. ಆದ್ದರಿಂದ ಕಣದಿಂದ ಹಿಂದಕ್ಕೆ ಸರಿದಿದ್ದೇನೆ. ಈ ಕ್ಷೇತ್ರದಲ್ಲಿ ಬಿಜೆಪಿ ಅಲೆ ಇದ್ದು ಅಭ್ಯರ್ಥಿ ಶರಣು ಸಲಗರ ಗೆಲುವಾಗಲಿದೆ’ ಎಂದು ಹೇಳಿದರು.

ಗೃಹ ಸಚಿವ ಬಸವರಾಜ ಬೊಮ್ಮಾಯಿ, ವಸತಿ ಸಚಿವ ವಿ.ಸೋಮಣ್ಣ, ಸಂಸದ ಭಗವಂತ ಖೂಬಾ, ಮಾಜಿ ಸಚಿವ ಬಾಬುರಾವ್ ಚಿಂಚನಸೂರ, ಅಭ್ಯರ್ಥಿ ಶರಣು ಸಲಗರ, ಮಹಾರಾಷ್ಟ್ರದ ಮಾಜಿ ಸಚಿವ ಸಂಭಾಜಿ ಪಾಟೀಲ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಮಂಠಾಳಕರ್, ತಾಲ್ಲೂಕು ಘಟಕದ ಅಧ್ಯಕ್ಷ ಅಶೋಕ ವಕಾರೆ, ಕೃಷ್ಣಾ ಗೋಣೆ, ಕರ್ನಾಟಕ ಕ್ಷತ್ರಿಯ ಮರಾಠಾ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ದಿಗಂಬರರಾವ್ ಮಾನಕರಿ, ಶಂಕರ ನಾಗದೆ, ಬಾಬುರಾವ್ ಕಾರಬಾರಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.