ADVERTISEMENT

ಬೀದರ್‌| ಅವಳಿ ಗ್ರಾಮಗಳಿಗೆ ಟ್ಯಾಂಕರ್ ನೀರೇ ಆಸರೆ

ಸಿಪ್ಪಲಗೇರಾ, ಕಬೀರವಾಡದಲ್ಲಿ ಬತ್ತಿದ ಜಲಮೂಲಗಳು

ನಾಗೇಶ ಪ್ರಭಾ
Published 25 ಮೇ 2020, 3:29 IST
Last Updated 25 ಮೇ 2020, 3:29 IST
ಬೀದರ್ ತಾಲ್ಲೂಕಿನ ಕಬೀರವಾಡ ಗ್ರಾಮಸ್ಥರು ಟ್ಯಾಂಕರ್ ನೀರು ಪಡೆಯುತ್ತಿರುವುದು
ಬೀದರ್ ತಾಲ್ಲೂಕಿನ ಕಬೀರವಾಡ ಗ್ರಾಮಸ್ಥರು ಟ್ಯಾಂಕರ್ ನೀರು ಪಡೆಯುತ್ತಿರುವುದು   

ಜನವಾಡ: ಬೀದರ್ ತಾಲ್ಲೂಕಿನ ಅವಳಿ ಗ್ರಾಮಗಳಾದ ಸಿಪ್ಪಲಗೇರಾ ಹಾಗೂ ಕಬೀರವಾಡಕ್ಕೆ ಈಗ ಟ್ಯಾಂಕರ್ ನೀರೇ ಆಸರೆಯಾಗಿದೆ.

ಗ್ರಾಮಗಳಲ್ಲಿನ ಜಲ ಮೂಲಗಳು ಬತ್ತಿ ಹೋಗಿರುವ ಕಾರಣ ಜನ ಟ್ಯಾಂಕರ್ ನೀರನ್ನೇ ಅವಲಂಬಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಗಾದಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಈ ಗ್ರಾಮಗಳಿಗೆ ಪಂಚಾಯಿತಿಯವರು 18 ದಿನಗಳಿಂದ ಟ್ಯಾಂಕರ್ ಮೂಲಕ ನಿತ್ಯ ಆರು ಟ್ರಿಪ್ ನೀರು ಸರಬರಾಜು ಮಾಡುತ್ತಿದ್ದಾರೆ.

ಬೀದರ್- ಗಾದಗಿ ಮಾರ್ಗದಲ್ಲಿ ಸಿಪ್ಪಲಗೇರಾ ಹಾಗೂ ಕಬೀರವಾಡ ಗ್ರಾಮಗಳು ಇವೆ. ರಸ್ತೆಯ ಈಚೆ ಕಬೀರವಾಡ ಇದ್ದರೆ, ಆಚೆ ಸಿಪ್ಪಲಗೇರಾ ಇದೆ. ಎರಡೂ ಗ್ರಾಮಗಳು ಸೇರಿ ಸುಮಾರು 1,200 ಜನಸಂಖ್ಯೆ ಇದ್ದು, ಎರಡು ತಿಂಗಳಿಂದ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ.

ADVERTISEMENT

ಗ್ರಾಮಗಳಲ್ಲಿನ ಐದು ಕೊಳವೆಬಾವಿಗಳು ಬತ್ತಿದ್ದು, ಇರುವ ಒಂದು ತೆರೆದ ಬಾವಿಯೂ ಒಣಗಿ ಹೋಗಿದೆ. ಒಂದು ಹ್ಯಾಂಡ್‍ಪಂಪ್ ಮಾತ್ರ ಚಾಲ್ತಿಯಲ್ಲಿ ಇದೆ. ಹೀಗಾಗಿ ಜನ ಕುಡಿಯುವ ನೀರಿಗಾಗಿ ಖಾಸಗಿ ತೆರೆದ ಬಾವಿ ಹಾಗೂ ಕೊಳವೆಬಾವಿಗಳನ್ನು ಹುಡುಕಿಕೊಂಡು ಹೋಗಬೇಕಾಗಿದೆ. ಸದ್ಯ ಅನೇಕರು ಮಾಮನಕೇರಿಯಿಂದ ಸೈಕಲ್, ಬೈಕ್ ಮೇಲೆ ಕುಡಿಯಲು ನೀರು ಹೊತ್ತು ತರುತ್ತಿದ್ದಾರೆ.

ಸೋಲಪುರ ಗ್ರಾಮದಿಂದ ಪೈಪ್‍ಲೈನ್ ಮೂಲಕ ಗ್ರಾಮಕ್ಕೆ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ, ಅಲ್ಲಿ ನೀರು ಕಡಿಮೆಯಾದ ಕಾರಣ ಸಮಸ್ಯೆ ಉಂಟಾಗಿದೆ. ನೀರಿಗಾಗಿ ಪಂಚಾಯಿತಿ ಟ್ಯಾಂಕರ್ ಅನ್ನೇ ಕಾಯಬೇಕಾಗಿದೆ ಎಂದು ಹೇಳುತ್ತಾರೆ ಗ್ರಾಮಸ್ಥರು.

ಸಿಪ್ಪಲಗೇರಾ ಹಾಗೂ ಕಬೀರವಾಡ ಗ್ರಾಮಗಳಲ್ಲಿ ಪ್ರತಿ ವರ್ಷ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತದೆ. ಜನ ನೀರಿಗಾಗಿ ಪರದಾಟ ನಡೆಸಬೇಕಾಗುತ್ತದೆ. ಆದರೂ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಕೆಲಸ ಈವರೆಗೂ ನಡೆದಿಲ್ಲ ಎಂದು ಗೋಳು ತೋಡಿಕೊಳ್ಳುತ್ತಾರೆ ಜನ.

ಸಿಪ್ಪಲಗೇರಾ ಹಾಗೂ ಕಬೀರವಾಡ ಗ್ರಾಮಗಳಲ್ಲಿ ಕೊಳವೆಬಾವಿಗಳು ಬತ್ತಿವೆ. ತೆರೆದ ಬಾವಿಯಲ್ಲೂ ನೀರಿಲ್ಲ. ಎರಡೂ ಗ್ರಾಮಗಳಲ್ಲಿ ಜಲಮೂಲಗಳು ಇಲ್ಲದ ಕಾರಣ ಮಾಮನಕೇರಿಯಿಂದ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ ಎಂದು ತಿಳಿಸುತ್ತಾರೆ ಗಾದಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀಧರ.

ಜನರಿಗೆ ನೀರಿನ ಸಮಸ್ಯೆಯಾಗದಂತೆ 6 ಸಾವಿರ ಲೀಟರ್ ಸಾಮರ್ಥ್ಯದ ಟ್ಯಾಂಕರ್‍ನಿಂದ ನಿತ್ಯ ಆರು ಟ್ರಿಪ್ ನೀರು ಸರಬರಾಜು ಮಾಡಲಾಗುತ್ತಿದೆ. ಮಳೆಗಾಲ ಆರಂಭವಾಗುವವರೆಗೂ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುವುದು ಎಂದು ಹೇಳುತ್ತಾರೆ.

ಗಾದಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಲಾಗಿದೆ. ಜನರ ನೀರಿನ ಬವಣೆ ತಪ್ಪಿಸಲು ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.