ADVERTISEMENT

ಶಿಕ್ಷಕರ ಕ್ಷೇತ್ರದ ಚುನಾವಣೆ | ನೋಂದಣಿ ಚುರುಕುಗೊಳಿಸಿ: ಡಾ. ಗಿರೀಶ ಬದೋಲೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2025, 6:16 IST
Last Updated 25 ಅಕ್ಟೋಬರ್ 2025, 6:16 IST
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ ಬದೋಲೆ ಮಾತನಾಡಿದರು
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ ಬದೋಲೆ ಮಾತನಾಡಿದರು   

ಬೀದರ್‌: ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಮತದಾರರ ನೋಂದಣಿ ಚುರುಕುಗೊಳಿಸಬೇಕೆಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ ಬದೋಲೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದಲ್ಲಿ ಶುಕ್ರವಾರ ನಡೆದ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಸ್ವೀಪ್‌ ಮತ್ತು ಜಿಲ್ಲಾ ಮಟ್ಟದ ಮೇಲ್ವಿಚಾರಣಾ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮತದಾರರ ನೋಂದಣಿ ನಿಗದಿತ ಗುರಿಯಂತೆ ನಡೆಯುತ್ತಿಲ್ಲ. ಡಿಡಿಪಿಐ ಮತ್ತು ಡಿಡಿಪಿಯು ವಿಶೇಷ ಐಇಸಿ ಚಟುವಟಿಕೆಗಳನ್ನು ಕೈಗೊಳ್ಳಬೇಕು. ತಮ್ಮ ಆಧೀನದ ಕಾಲೇಜುಗಳ ಪ್ರಾಂಶುಪಾಲರುಗಳಿಗೆ ಕರೆ ಮಾಡಿ ಪ್ರತಿ ದಿನ ಫಾಲೋ ಅಪ್‌ ಮಾಡಬೇಕು. ಬೀದರ್‌ ವಿಶ್ವವಿದ್ಯಾಲಯದ ಕುಲಸಚಿವರು 66 ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅರ್ಹ ಮತದಾರರಿಂದ ನಮೂನೆ 19 ಭರ್ತಿ ಮಾಡಿಸಿ ತಹಶೀಲ್ದಾರ್‌ ಕಚೇರಿಗೆ ತಲುಪಿಸಲು ಕ್ರಮ ಕೈಗೊಳ್ಳಬೇಕು. ಮತದಾರರ ನೋಂದಣಿಗೆ ನವೆಂಬರ್ 6ರ ವರೆಗೆ ಕಾಲಾವಕಾಶ ಇದೆ. ಅಕ್ಟೋಬರ್ 30ರ ಒಳಗೆ ಅರ್ಹ ಮತದಾರರಲ್ಲಿ ಶೇಕಡಾ 90ರಷ್ಟು ಮತದಾರರ ನೋಂದಣಿ ಆಗಿರಬೇಕು ಎಂದು ಸೂಚಿಸಿದರು.

ADVERTISEMENT

ಅಕ್ಟೋಬರ್ 27ರಂದು ಮಿಂಚಿನ ನೋಂದಣಿ ಅಭಿಯಾನ ನಡೆಯಲಿದೆ. ಆ ದಿನ ಕಡ್ಡಾಯವಾಗಿ ಎಲ್ಲಾ ಶಿಕ್ಷಣ ಸಂಸ್ಥೆಗಳ ಅರ್ಹ ಮತದಾರ ಶಿಕ್ಷಕರು ನಮೂನೆ 19 ಭರ್ತಿ ಮಾಡಿ ತಹಶೀಲ್ದಾರ್‌ ಕಚೇರಿಗೆ ಸಲ್ಲಿಸಬೇಕು. ಈ ಪ್ರಕ್ರಿಯೆ ಪೂರ್ಣಗೊಳಿಸಲು ಆಯಾ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಮುಕ್ಕಣ್ಣ ಕರಿಗಾರ, ಜಿಲ್ಲಾ ಸ್ವೀಪ್ ಅಧಿಕಾರಿ ಡಾ.ಗೌತಮ್ ಅರಳಿ, ಬೀದರ್‌ ವಿಶ್ವವಿದ್ಯಾಲಯದ ಕುಲಸಚಿವ ಪರಮೇಶ್ವರ ನಾಯಕ, ಬೀದರ್‌ ಪಶು ವೈದ್ಯಕೀಯ ಕಾಲೇಜಿನ ಡೀನ್ ಡಾ. ಎಂ.ಕೆ. ತಾಂದಲೆ, ಡಿಡಿಪಿಐ ಕಚೇರಿಯ ಅಧಿಕಾರಿಗಳು, ಜಿಲ್ಲೆಯ ಎಲ್ಲಾ ತಾಲ್ಲೂಕು ಪಂಚಾಯತಿಗಳ ಕಾರ್ಯನಿರ್ವಾಹಕ ಅಧಿಕಾರಿಗಳು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.