ಬೀದರ್: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ದಾಳಿ ನಡೆಸಿ, ಅಮಾಯಕರ ಕಗ್ಗೊಲೆ ನಡೆಸಿರುವ ಕೃತ್ಯವನ್ನು ಜಿಲ್ಲೆಯ ವಿವಿಧ ಸಂಘಟನೆಗಳು ಕಟುವಾಗಿ ಖಂಡಿಸಿವೆ.
ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾ: ಪ್ರವಾಸಿಗರ ಮೇಲಿನ ಗುಂಡಿನ ದಾಳಿ ಅತ್ಯಂತ ಖಂಡನೀಯವಾಗಿದ್ದು, ಈ ದಾಳಿಗೆ ಕೇಂದ್ರ ಸರ್ಕಾರದ ಭದ್ರತಾ ವೈಫಲ್ಯವೇ ನೇರ ಕಾರಣ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ತಾಹೇರ್ ಹುಸೇನ್ ಆರೋಪಿಸಿದ್ದಾರೆ.
ಗುಂಡಿನ ದಾಳಿಯಲ್ಲಿ 27ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ. ಇದರಲ್ಲಿ ಕನ್ನಡಿಗರು ಸೇರಿದ್ದಾರೆ. ಇದಕ್ಕೆ ಕೇಂದ್ರ ಸರ್ಕಾರವೇ ಹೊಣೆ. ಘಟನೆಯ ಹೊಣೆ ಹೊತ್ತು ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡಲೇ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ.
ಬ್ರಾಹ್ಮಣ ಮಹಾಸಂಘ: ಪ್ರವಾಸಿಗರ ಮೇಲಿನ ದಾಳಿ ಖಂಡನಾರ್ಹವಾಗಿದೆ. ಅಮಾಯಕ ಹಿಂದೂ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ. ಭಾರತ ಶಾಂತಿಪ್ರಿಯ ದೇಶ. ಆದರೆ, ಅದನ್ನು ದೌರ್ಬಲ್ಯ ಎಂದು ಭಾವಿಸುವ ವೈರಿ ರಾಷ್ಟ್ರಗಳಿಗೆ ತಕ್ಕ ಪಾಠ ಕಲಿಸಲು ಇದು ಸಕಾಲ ಎಂದು ಬ್ರಾಹ್ಮಣ ಮಹಾಸಂಘದ ಜಿಲ್ಲಾಧ್ಯಕ್ಷ ರಮೇಶ ಕುಲಕರ್ಣಿ ತಿಳಿಸಿದ್ದಾರೆ.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್: ಪ್ರವಾಸಿಗರ ಮೇಲಿನ ದಾಳಿ ಅತ್ಯಂತ ಪೈಶಾಚಿಕ ಕೃತ್ಯ. ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತು ಹಾಕಲು ಭಯೋತ್ಪಾದಕರ ತಾಣಗಳ ಮೇಲೆ ಸರ್ಜಿಕಲ್ ದಾಳಿ ನಡೆಸಬೇಕೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮುಖಂಡ ರೇವಣಸಿದ್ದಪ್ಪ ಜಾಡರ್ ಆಗ್ರಹಿಸಿದ್ದಾರೆ.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ: ಉಗ್ರರು ನಡೆಸಿದ ಘೋರ ದುಷ್ಕೃತ್ಯ ಖಂಡನಾರ್ಹ. ಕೇಂದ್ರ ಸರ್ಕಾರ ದಾಳಿಯಲ್ಲಿ ಭಾಗಿಯಾದವರನ್ನು ಸುಮ್ಮನೆ ಬಿಡಬಾರದು. ಉಗ್ರರನ್ನು ಮಟ್ಟ ಹಾಕಬೇಕು. ದಾಳಿಯಲ್ಲಿ ಮೃತಪಟ್ಟ ಶಿವಮೊಗ್ಗದ ಮಂಜುನಾಥರಾವ್ ಸೇರಿ ಇಬ್ಬರ ಕುಟುಂಬಗಳಿಗೆ ತಲಾ ₹1 ಕೋಟಿ ಪರಿಹಾರ ನೀಡಬೇಕು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ್ ಕುಲಕರ್ಣಿ ಆಗ್ರಹಿಸಿದ್ದಾರೆ.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್: ಉಗ್ರರ ದಾಳಿಯನ್ನು ಕಟುವಾಗಿ ಖಂಡಿಸಿ, ಘಟನೆಯಲ್ಲಿ ಮೃತರಾದವರಿಗೆ ಪರಿಷತ್ತಿನ ಕಾರ್ಯಕರ್ತರು ನಗರದ ಹೆಣ್ಣು ಮಗು ವೃತ್ತದಲ್ಲಿ ಮೇಣದ ಬತ್ತಿ ಬೆಳಗಿಸಿ ಶ್ರದ್ಧಾಂಜಲಿ ಸಲ್ಲಿಸಿದರು.
ಕೇಂದ್ರ ಸರ್ಕಾರ ಸಾಕಷ್ಟು ಕ್ರಮ ಕೈಗೊಂಡಿದ್ದರೂ ಸಹ ಬಯೋತ್ಪಾದಕರ ಹಾವಳಿ ತಡೆಯಲು ಸಾಧ್ಯವಾಗಿಲ್ಲ. ಉಗ್ರರು, ಪ್ರತ್ಯೇಕತಾವಾದಿಗಳು ಸವಾಲೊಡ್ಡುತ್ತಿರುವುದು ಕಳವಳದ ಸಂಗತಿ. ಇನ್ನಷ್ಟು ಕಠಿಣ ಕ್ರಮ ಜರುಗಿಸಬೇಕೆಂದು ಪರಿಷತ್ತಿನ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹೇಮಂತ್ ತಿಳಿಸಿದರು.
ನಗರ ಘಟಕದ ಅಧ್ಯಕ್ಷ ಅನಿಲ ಜಾಧವ, ಕಾರ್ಯದರ್ಶಿ ಆನಂದ, ಸಹ ಕಾರ್ಯದರ್ಶಿ ಪವನ್ ಕುಂಬಾರ, ನಾಗರಾಜ, ಪವನ್ ಪಾಂಚಾಲ, ತಾಲ್ಲೂಕು ಸಂಚಾಲಕ ಮಹೇಶ ಕೋರಾ, ರಾಜ್ಯ ಕಾರ‍್ಯಕಾರಣಿ ಸದಸ್ಯ ಲಿಂಗದೇವ ಗುತ್ತಿ ಮತ್ತಿತರರು ಹಾಜರಿದ್ದರು.
ಪಾಕಿಸ್ತಾನದಿಂದ ಹೇಡಿ ಕೃತ್ಯ–ಖೂಬಾ: ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ 11 ವರ್ಷಗಳಿಂದ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಇದನ್ನು ಸಹಿಸದೇ ಪಾಕಿಸ್ತಾನ ಹೇಡಿ ಕೃತ್ಯ ಎಸಗಿರುವುದು ಖಂಡನಾರ್ಹ ಎಂದು ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ಟೀಕಿಸಿದ್ದಾರೆ.
ಅಮಾಯಕರ ಸಾವಿಗೆ ಕಾರಣರಾದವರ ವಿರುದ್ಧ ದೇಶದ ಪ್ರಧಾನಿ ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ. ಈ ಘಟನೆಯಿಂದ ಹಿಂದೂಗಳು ಒಗ್ಗಟ್ಟಾಗಿರಬೇಕೆಂಬುದನ್ನು ಮನಗಾಣಬೇಕು. ಜಾತಿಗಳ ಹೆಸರಿನಲ್ಲಿ ಹೋಳಾಗಬಾರದು ಎಂದು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.