ADVERTISEMENT

ನಾರಾಯಣಪುರ: ಯುವಕರ ಪ್ರಯತ್ನದಿಂದ ಜೈಭವಾನಿ ದೇವಿ ಮಂದಿರ ಜೀರ್ಣೋದ್ಧಾರ

ಮಾಣಿಕ ಆರ್ ಭುರೆ
Published 28 ಫೆಬ್ರುವರಿ 2021, 5:18 IST
Last Updated 28 ಫೆಬ್ರುವರಿ 2021, 5:18 IST
ಜೈಭವಾನಿ ಮೂರ್ತಿ
ಜೈಭವಾನಿ ಮೂರ್ತಿ   

ಬಸವಕಲ್ಯಾಣ: ತಾಲ್ಲೂಕಿನ ನಾರಾಯಣಪುರದ ಜೈಭವಾನಿ ದೇವಸ್ಥಾನ ಅಪಾರ ಭಕ್ತರ ಶ್ರದ್ಧಾ ಕೇಂದ್ರವಾಗಿದೆ. ಪಕ್ಕದಲ್ಲಿ ಕೆರೆ ಇರುವ ಕಾರಣ ನಿಸರ್ಗ ರಮಣೀಯ ತಾಣವೂ ಆಗಿದ್ದು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ಊರಿಗೆ ಹೊಂದಿಕೊಂಡು 12ನೇ ಶತಮಾನದ ಕೆರೆ ಬಳಿ. ಜೈಭವಾನಿ ದೇವಸ್ಥಾನವಿದ್ದು, ಇದನ್ನು ದೇವಿ ಮಂದಿರ ಎಂತಲೂ ಕರೆಯಲಾಗುತ್ತದೆ.

ಈ ದೇವಸ್ಥಾನವೂ ಅತ್ಯಂತ ಹಳೆಯದಾಗಿದ್ದು ವ್ಯವಸ್ಥೆ ಇಲ್ಲದ್ದರಿಂದ ಎಲ್ಲವೂ ಹಾಳಾಗಿತ್ತು. ಕೆರೆ ದಂಡೆಯ ಮಣ್ಣು ಕೊಚ್ಚಿಕೊಂಡು ಹೋಗಿದ್ದರಿಂದ ಗುಡಿ ಶಿಥಿಲಾವಸ್ಥೆಗೆ ತಲುಪಿ ಕಲ್ಲುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಆದರೂ ಅಮಾವಾಸ್ಯೆ, ಹುಣ್ಣಿಮೆಗೆ ಭಕ್ತರು ಇಲ್ಲಿ ಪೂಜೆ ನೆರವೇರಿಸುತ್ತಿದ್ದರು.

ADVERTISEMENT

‘ಕೆಲ ವರ್ಷಗಳ ಹಿಂದೆ ಗ್ರಾಮದ ಯುವಕರು ದೇವಸ್ಥಾನದ ಕಲ್ಲುಗಳನ್ನು ಒಂದೆಡೆ ಸೇರಿಸಿ ಸರಿಯಾದ ಸ್ಥಿತಿಗೆ ತಂದರು. ಭಕ್ತರು ನೀಡಿದ ಕಾಣಿಕೆಯಿಂದ ಹಳೆಯ ಶಿಲ್ಪಕಲಾಕೃತಿಗಳನ್ನು ಗೋಡೆಗೆ ಜೋಡಿಸಿದರು’ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ನಾರಾಯಣರೆಡ್ಡಿ ಪಾಟೀಲ ತಿಳಿಸಿದ್ದಾರೆ.

‘ಕೆರೆ ಭಾಗದಲ್ಲಿ ಎತ್ತರದ ಗೋಡೆ ನಿರ್ಮಿಸಿ ಮಣ್ಣನ್ನು ಭರ್ತಿ ಮಾಡಿಕೊಂಡು ಜಾಗವನ್ನು ಸಮತಟ್ಟುಗೊಳಿಸಲಾಗಿದೆ. ಈಚೆಗೆ ದೊಡ್ಡದಾದ ತಗಡುಗಳ ಮಂಟಪ ನಿರ್ಮಿಸಲಾಗಿದೆ. ಈ ಕಾರಣ ಇಲ್ಲಿ ಮದುವೆ ಇತ್ಯಾದಿ ಕಾರ್ಯಕ್ರಗಳು ನಡೆಯುವಂತಾಗಿದೆ. ಹಾಳಾಗಿದ್ದ ದೇವಸ್ಥಾನದ ಪುನರ್ ನಿರ್ಮಾಣ ಕಾರ್ಯದಲ್ಲಿ ಕರಬಸಪ್ಪ ಪಟ್ನೆ, ಸೂರ್ಯಕಾಂತ ಕಡಲೆ, ನಾರಾಯಣರೆಡ್ಡಿ, ಕಿರಣ ಮೂಲಗೆ, ರವಿ ಪಟ್ನೆ, ಅನಿಲರೆಡ್ಡಿ ಶೇರಿಕಾರ, ರಾಜೀವ ಗೋರಟೆ, ಅಹ್ಮದಪಾಶಾ, ಸೂರ್ಯಕಾಂತ ಮಠ, ನಾಗಶೆಟ್ಟಿ ಪಟ್ನೆ, ಮಲ್ಲಿಕಾರ್ಜುನ ಹಲಶೆಟ್ಟೆ ಮುಂತಾದವರು ಶ್ರಮವಹಿಸಿದ್ದಾರೆ’ ಎಂದರು.

‘ಅಪಾರ ಭಕ್ತರ ಶ್ರದ್ಧಾಕೇಂದ್ರವಾದ ಈ ದೇವಸ್ಥಾನದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಆರಂಭಕ್ಕೆ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಅಮ್ರಪಾಲಿ ವೀರಣ್ಣ ಹಲಗೆ ಭರವಸೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.