ADVERTISEMENT

ಜವಾಬ್ದಾರಿ ವೇಳೆ ಪಲಾಯನ: ಬೀದರ್ ಸಂಸದರ ವಿರುದ್ಧ ತೀವ್ರ ಆಕ್ರೋಶ

ಸಂಸದರ ಮೌನವೃತಕ್ಕೆ ವ್ಯಾಪಕ ಟೀಕೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2020, 16:35 IST
Last Updated 28 ಮಾರ್ಚ್ 2020, 16:35 IST
ಬೀದರ್ ಸಂಸದ ಭಗವಂತ ಖೂಬಾ ಮೌನವೃತಾಚರಣೆಯಲ್ಲಿ ನಿರತರಾಗಿರುವುದು
ಬೀದರ್ ಸಂಸದ ಭಗವಂತ ಖೂಬಾ ಮೌನವೃತಾಚರಣೆಯಲ್ಲಿ ನಿರತರಾಗಿರುವುದು   

ಬೀದರ್‌: ಕೊರೊನಾ ಸೋಂಕಿನಿಂದ ಜನರನ್ನು ರಕ್ಷಿಸುವಂತೆ ದೇವರಲ್ಲಿ ಪ್ರಾರ್ಥಿಸಿ ಬೀದರ್‌ ಸಂಸದ ಭಗವಂತ ಖೂಬಾ ಮಾರ್ಚ್‌ 31ರ ವರೆಗೆ ಮೌನವೃತಾಚಾರಣೆಯಲ್ಲಿ ತೊಡಗಿರುವುದು ಸಾರ್ವಜನಿಕರಿಂದ ವ್ಯಾಪಕ ಟೀಕೆಗೆ ಒಳಗಾಗಿದೆ.

ಸಂಸದರ ಆಪ್ತ ಸಹಾಯಕ ಅಮರ್ ಹಿರೇಮಠ ಅವರು ಸಂಸದರು ಮಾರ್ಚ್‌ 26ರಿಂದ 31ರ ವರೆಗೆ ಮೌನವೃತದಲ್ಲಿದ್ದಾರೆ ಎಂದು ಉಲ್ಲೇಖಿಸಿ ವಾಟ್ಸ್‌ಆ್ಯಪ್‌ ಗ್ರೂಪ್‌ಗಳಲ್ಲಿ ಸಂದೇಶವನ್ನು ಹರಿಯ ಬಿಡುತ್ತಿದ್ದಂತೆಯೇ ನೆಟ್ಟಿಗರು ಟೀಕೆಗಳ ಸುರಿಮಳೆಯನ್ನು ಹರಿಸಿದ್ದಾರೆ.

‘ಸಂಸದರಂತೆ ಎಲ್ಲ ಅಧಿಕಾರಿಗಳು ಹಾಗೂ ನೌಕರರು ಧ್ಯಾನಕ್ಕೆ ಜಾರಿದರೆ‌ ಸಮಾಜದ ಗತಿ ಏನು’ ಎಂದು ಸದಾನಂದ ಪ್ರಶ್ನಿಸಿದರೆ, ‘ಸಂಸದರು ಚುನಾವಣೆ ಬಂದಾಗ ಹೀಗೆ ಮೌನ ವೃತ ಮಾಡಲಿ’ ಎಂದು ವಿಶ್ವ ಎನ್ನುವವರು ಸಲಹೆ ನೀಡಿದ್ದಾರೆ.
ರಾಜಕಾರಣಿಗಳಿಗೆ ಈಗ ಜನರು ಬೇಕಾಗಿಲ್ಲ. ಎ.ಸಿ.ರೂಮ್‌ನಲ್ಲಿ ಮೌನವೃತ ಆಚರಿಸುತ್ತಿರುವುದು. ನಮ್ಮ ಜನಪ್ರತಿನಿಧಿಗಳ ಜನಪರ ಕಾಳಜಿ ತೋರಿಸುತ್ತದೆ ಎಂದು ಇನ್ನೊಬ್ಬರು ಟೀಕಿಸಿದ್ದಾರೆ.

ADVERTISEMENT

ಸಂಸದರು ಕಷ್ಟಕಾಲದಲ್ಲಿರುವ ಬಡ ಕೂಲಿಕಾರರು, ಕೃಷಿ ಕಾರ್ಮಿಕರು, ಬೀದಿ ವ್ಯಾಪಾರಿಗಳು, ವಾಹನ ಚಾಲಕರ ಸಮಸ್ಯೆಗೆ ಸ್ಪಂದಿಸಲು ಯತ್ನಿಸಬೇಕಿತ್ತು. ಜವಾಬ್ದಾರಿಯಿಂದ ನುಣುಚಿಕೊಳ್ಳಲು ಇಂತಹ ಮಾರ್ಗ ಹುಡುಕಿಕೊಂಡಿರುವುದು ಖಂಡನೀಯ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಲಾಕ್‌ಡೌನ್‌ ನಂತರ ಬೀದಿಯ ಬದಿಗೆ ಬದುಕುವವರ ಸ್ಥಿತಿ ಏನಾಗಿದೆ, ದಿನಗೂಲಿಗಳ ಕುಟುಂಬದ ನಿರ್ವಹಣೆ ಹೇಗೆ?, ಎನ್ನುವುದನ್ನು ಅರಿಯಲು ಜನಪ್ರತಿನಿಧಿಗಳು ಒಮ್ಮೆ ಮನೆಯಿಂದ ಹೊರಬರಲಿ, ಇವರೆಲ್ಲರ ಹಸಿವಿನ ಜೋಳಿಗೆ ತುಂಬಿಸುವ ನಿಟ್ಟಿನಲ್ಲಿ ಒಮ್ಮೆ ಯೋಚಿಸಲಿ ಎಂದು ಜಿಲ್ಲಾ ಕಲಾವಿದರ ಬಳಗದ ಅಧ್ಯಕ್ಷ ವಿಜಯಕುಮಾರ್ ಸೋನಾರೆ ಮನವಿ ಮಾಡಿದ್ದಾರೆ.

ಜನಪ್ರತಿನಿಧಿಗಳನ್ನು ಜನರೇ ಆಯ್ಕೆ ಮಾಡಿದ್ದಾರೆ. ಆದರೆ ಇದೀಗ ಅವರು ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

₹ 1ಲಕ್ಷ ದೇಣಿಗೆ

ಕೋವಿಡ್-19 ನಿಯಂತ್ರಣಕ್ಕಾಗಿ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಗೆ ಸಂಸದ ಭಗವಂತ ಖೂಬಾ ಅವರು ₹1 ಲಕ್ಷ ದೇಣಿಗೆ ನೀಡಿದ್ದಾರೆ ಎಂದು ಸಂಸದರ ಕಚೇರಿಯ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.