ADVERTISEMENT

ಬಿಜೆಪಿಯಿಂದ ಜನೋದ್ಧಾರ ಸಾಧ್ಯವಿಲ್ಲ: ಮಧು ಬಂಗಾರಪ್ಪ ಆರೋಪ

ಹಿಂದುಳಿದ ವರ್ಗಗಳ ಒಕ್ಕೂಟದ ಸಭೆಯಲ್ಲಿ ಮಧು ಬಂಗಾರಪ್ಪ ಆರೋಪ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2021, 3:43 IST
Last Updated 11 ಏಪ್ರಿಲ್ 2021, 3:43 IST
ಬಸವಕಲ್ಯಾಣದಲ್ಲಿ ಶನಿವಾರ ಉಪ ಚುನಾವಣೆ ಅಂಗವಾಗಿ ಕಾಂಗ್ರೆಸ್ ದಿಂದ ಆಯೋಜಿಸಿದ್ದ ಹಿಂದುಳಿದ ವರ್ಗಗಳ ಒಕ್ಕೂಟದ ಸಭೆಯಲ್ಲಿ ಮಾಜಿ ಶಾಸಕ ಮಧು ಬಂಗಾರಪ್ಪ ಅವರನ್ನು ಸನ್ಮಾನಿಸಲಾಯಿತು
ಬಸವಕಲ್ಯಾಣದಲ್ಲಿ ಶನಿವಾರ ಉಪ ಚುನಾವಣೆ ಅಂಗವಾಗಿ ಕಾಂಗ್ರೆಸ್ ದಿಂದ ಆಯೋಜಿಸಿದ್ದ ಹಿಂದುಳಿದ ವರ್ಗಗಳ ಒಕ್ಕೂಟದ ಸಭೆಯಲ್ಲಿ ಮಾಜಿ ಶಾಸಕ ಮಧು ಬಂಗಾರಪ್ಪ ಅವರನ್ನು ಸನ್ಮಾನಿಸಲಾಯಿತು   

ಬಸವಕಲ್ಯಾಣ: ‘ಬಿಜೆಪಿಯಿಂದ ಜನೋದ್ಧಾರ ಸಾಧ್ಯವಿಲ್ಲ. ಆದ್ದರಿಂದಲೇ ನಾನು ಮತ್ತು ಅಪ್ಪ ಎಸ್.ಬಂಗಾರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದೇನೆ’ ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ಹೇಳಿದರು.

ನಗರದ ಸಾಹಿಲ್ ಸಭಾಂಗಣದಲ್ಲಿ ಉಪ ಚುನಾವಣೆ ಅಂಗವಾಗಿ ಕಾಂಗ್ರೆಸ್‌ ಆಯೋಜಿಸಿದ್ದ ಹಿಂದುಳಿದ ವರ್ಗಗಳ ಒಕ್ಕೂಟದ ಸಭೆಯಲ್ಲಿ ಅವರು ಮಾತನಾಡಿದರು.

‘ಬಿ.ನಾರಾಯಣರಾವ್ ಉತ್ತಮ ಶಾಸಕ ಆಗಿದ್ದರು. ಎಸ್.ಬಂಗಾರಪ್ಪ ಅವರ ಒಡನಾಡಿ ಆಗಿದ್ದರು. ಅವರ ಅಕಾಲ ನಿಧನದಿಂದ ತೆರವಾದ ಸ್ಥಾನಕ್ಕೆ ಅವರ ಪತ್ನಿ ಮಾಲಾ ಬಿ.ನಾರಾಯಣ ರಾವ್ ಸ್ಪರ್ಧಿಸಿದ್ದು ಅವರನ್ನು ಗೆಲ್ಲಿಸಬೇಕು’ ಎಂದು ಕೇಳಿಕೊಂಡರು.

ADVERTISEMENT

ಬಸವತತ್ವ ಗಾಳಿಗೆ: ಕಾರ್ಯಕ್ರಮಕ್ಕೂ ಮೊದಲು ಮಧು ಬಂಗಾರಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, `ಬಿಜೆಪಿ ಬಸವತತ್ವದ ವಿರೋಧಿ ಪಕ್ಷವಾಗಿದೆ. ಜಾತಿ, ಧರ್ಮದ ಆಧಾರದಲ್ಲಿ ಸಮಾಜವನ್ನು ಒಡೆದು ಆಳುತ್ತಿದೆ’ ಎಂದರು.

‘ಅಭ್ಯರ್ಥಿ ಮಾಲಾ ಬಿ.ನಾರಾಯಣ ರಾವ್ ಬಗ್ಗೆ ಅನುಕಂಪದ ಅಲೆ ಇದೆ. ಇಲ್ಲಿನ ಜನರು ಆಡಳಿತಾರೂಢ ಪಕ್ಷದ ದಬ್ಬಾಳಿಕೆ ಹಾಗೂ ಹಣದ ಆಮೀಷಕ್ಕೆ ಒಳಗಾಗುವುದಿಲ್ಲ ಎಂಬ ಭರವಸೆ ಇದೆ. ಅಪ್ಪ ಬಂಗಾರಪ್ಪ ಹೋದಲ್ಲಿ ನಾನಿರುತ್ತಿದ್ದೆ. ಇದೇ ಪ್ರಥಮ ಸಲ ಪಕ್ಷ ಬದಲಾಯಿಸಿ ಕಾಂಗ್ರೆಸ್ ಸೇರಿದ್ದೇನೆ. ಸೇರ್ಪಡೆ ನಂತರದ ಪ್ರಥಮ ಸುದ್ದಿಗೋಷ್ಠಿ ಇದಾಗಿದೆ’ ಎಂದರು.

ಶಾಸಕ ರಹೀಂ ಖಾನ್, ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಉಪಾಧ್ಯಕ್ಷ ರವೀಂದ್ರ ಬೋರೋಳೆ, ಪ್ರಧಾನ ಕಾರ್ಯದರ್ಶಿ ದತ್ತು ಮೂಲಗೆ ಮಾತನಾಡಿದರು. ಮುಖಂಡ ಚಂದ್ರಕಾಂತ ಮೇತ್ರೆ, ನಗರಸಭೆ ಸದಸ್ಯ ರಾಮ ಜಾಧವ, ಸಂತೋಷ ಗುತ್ತೇದಾರ, ಜೈದೀಪ, ದಿಲೀಪ ಶಿಂಧೆ ಮೋರಖಂಡಿ, ಅರವಿಂದ ಮೋರಖಂಡಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.