ADVERTISEMENT

ಕೇಂದ್ರದ ನೀತಿಯಿಂದ ದೇಶಕ್ಕೆ ಆಪತ್ತು: ಕಾಂಗ್ರೆಸ್ ಶಾಸಕ ಯು.ಟಿ. ಖಾದರ್ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2021, 15:09 IST
Last Updated 8 ಫೆಬ್ರುವರಿ 2021, 15:09 IST
ಯು.ಟಿ. ಖಾದರ್
ಯು.ಟಿ. ಖಾದರ್   

ಬೀದರ್‌: ‘ಜನಸಾಮಾನ್ಯರ ಮೇಲೆ ತೆರಿಗೆ ಹಾಕಿ, ಸರ್ಕಾರದ ಅಧೀನದಲ್ಲಿದ್ದ ಸಂಸ್ಥೆಗಳನ್ನು ಖಾಸಗಿಯವರಿಗೆ ಮಾರುವ ಮೂಲಕ ಕೇಂದ್ರದ ಬಿಜೆಪಿ ಸರ್ಕಾರ ಸೇಲ್‌ ಇಂಡಿಯಾ, ಲೂಟ್‌ ಇಂಡಿಯಾ ಬಜೆಟ್‌ ಮಂಡಿಸಿದೆ’ ಎಂದು ಶಾಸಕ ಯು.ಟಿ. ಖಾದರ್ ವಾಗ್ದಾಳಿ ನಡೆಸಿದರು.

‘ಬಜೆಟ್‌ನಲ್ಲಿ ಹೊಸ ಯೋಜನೆ ಪ್ರಸ್ತಾಪಿಸದ ಕೇಂದ್ರ ಸರ್ಕಾರವು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸೌಲಭ್ಯ ಒದಗಿಸುವ ಬದಲು ವಿದೇಶಿ ಸಂಸ್ಥೆಗಳ ಮೊರೆ ಹೋಗಲು ಅವಕಾಶ ಮಾಡಿ ಕೊಟ್ಟಿದೆ’ ಎಂದು ಅವರು ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಟೀಕಿಸಿದರು.

‘ಕೃಷಿ ತೆರಿಗೆ ಹೆಸರಿನಲ್ಲಿ ಸರ್ಕಾರವು ಪೆಟ್ರೋಲ್‌ ಹಾಗೂ ಡೀಸೆಲ್‌ ಮೇಲೆ ತೆರಿಗೆ ವಿಧಿಸಿದೆ. ರೈತರು ಟ್ರ್ಯಾಕ್ಟರ್‌, ಯಂತ್ರೋಪಕರಣಗಳಿಗೆ ಹೆಚ್ಚು ಬೆಲೆ ಕೊಟ್ಟು ಡೀಸೆಲ್‌ ಖರೀದಿಸಬೇಕಿದೆ. ತೈಲ ಬೆಲೆ ಹೆಚ್ಚಳದಿಂದ ಸಾಗಣೆ, ಅಗತ್ಯವಸ್ತುಗಳ ಬೆಲೆಯೂ ಹೆಚ್ಚಾಗಲಿವೆ’ ಎಂದರು.

ADVERTISEMENT

‘ಉದ್ಯೋಗ ಸೃಷ್ಟಿ, ಮಹಿಳೆಯರು, ಮೀನುಗಾರಿಕೆಗೆ ಸಂಬಂಧಪಟ್ಟಂತೆ ಹೊಸ ಯೋಜನೆಗಳ ಪ್ರಸ್ತಾಪವಿಲ್ಲ. ಆಟೊ ಗ್ಯಾಸ್‌ ಬೆಲೆ ಏರಿಕೆ ಆಗಿದೆ. ಕೋವಿಡ್‌ ಹೆಸರಲ್ಲಿ ಶೋಷಣೆ ನಡೆಯುತ್ತಿದ್ದು, ಕೇಂದ್ರ ಸರ್ಕಾರದ ಆಘಾತಕಾರಿ ನೀತಿಗಳನ್ನು ಜನರು ಅರ್ಥ ಮಾಡಿಕೊಳ್ಳಬೇಕು’ ಎಂದರು.

‘ಬ್ಯಾಂಕ್‌ಗಳನ್ನು ವಂಚಿಸಿದ ವಿಜಯಮಲ್ಯ ಅವರನ್ನು ವಿದೇಶಕ್ಕೆ ಹೋಗಲು ಬಿಡುತ್ತಾರೆ. ಆದರೆ, ರೈತರು ದೆಹಲಿ ಪ್ರವೇಶಿಸದಂತೆ ತಡೆಯುವುದರ ಜೊತೆಗೆ ಹೋರಾಟ ದಮನ ಮಾಡಲು ವ್ಯವಸ್ಥಿತ ಪ್ರಯತ್ನ ಮಾಡಲಾಗುತ್ತಿದೆ’ ಎಂದು ಕಿಡಿ ಕಾರಿದರು.

‘ಅರುಣಾಚಲಂ ಪ್ರದೇಶಕ್ಕೆ ಬಂದು ಗ್ರಾಮವನ್ನೇ ಸೃಷ್ಟಿಸಿರುವ ಚೀನಾದವರ ವಿರುದ್ಧ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರಕ್ಕೆ ಧೈರ್ಯ ಇಲ್ಲ. ಹಲವು ಬಗೆಯ ತೆರಿಗೆ ವಿಧಿಸಿ ರೈತರ ಗೋರಿ ಮೇಲೆ ಮಹಲ್‌ ಕಟ್ಟಲು ಹೊರಟಿದ್ದಾರೆ’ ಎಂದು ಅವರು ವ್ಯಂಗ್ಯವಾಡಿದರು.

‘ಅಮೆರಿಕದಲ್ಲಿ ಗಲಾಟೆ ನಡೆದಾಗ ನಮ್ಮ ಪ್ರಧಾನಿ ಶಾಂತಿ ಕಾಪಾಡಲು ಸಲಹೆ ನೀಡುತ್ತಾರೆ. ರೈತರಿಗೆ ಅನ್ಯಾಯವಾಗಿದ್ದನ್ನು ವಿದೇಶಿಯರು ಗಮನಕ್ಕೆ ತಂದಾಗ ವಿದೇಶಿ ಕೈವಾಡ ಇದೆ. ನಮ್ಮ ಆಂತರಿಕ ವಿಷಯಕ್ಕೆ ಕೈ ಹಾಕ ಬೇಡಿ ಎನ್ನುತ್ತಾರೆ. ಅನ್ಯಾಯದ ವಿರುದ್ಧ ಮಾತನಾಡಿದರೆ ದೇಶ ದ್ರೋಹದ ಪಟ್ಟ ಕಟ್ಟುತ್ತಾರೆ. ರೈತರು ಬೆಳೆದ ಅನ್ನ ತಿಂದು ರೈತರಿಗೆ ದ್ರೋಹ ಬಗೆಯುತ್ತಿದ್ದಾರೆ’ ಎಂದು ಆರೋಪಿಸಿದರು.

‘ಕೃಷಿ ಕಾಯ್ದೆ ಜಾರಿ ತರುವ ಮೂಲಕ ಎಪಿಎಂಸಿಗಳನ್ನು ಬಂದ್‌ ಮಾಡಲು ಹುನ್ನಾರ ನಡೆಸಿದೆ. ಎಪಿಎಂಸಿಗೆ ಬರುವ ರೈತರು ಹಾಗೂ ಖರೀದಿದಾರರಿಗೆ ಶುಲ್ಕ ವಿಧಿಸಲಾಗುತ್ತಿದೆ. ಎಪಿಎಂಸಿಗಳು ಬಂದ್‌ ಆದ ಮೇಲೆ ಕೃಷಿ ಉತ್ಪನ್ನಗಳನ್ನು ಸುಲಭವಾಗಿ ಮಾರಾಟ ಮಾಡಲು ಹಾಗೂ ಬೆಲೆ ಸ್ಥಿತಿಗತಿ ಅರಿತುಕೊಳ್ಳಲು ಕಷ್ಟವಾಗಲಿದೆ’ ಎಂದರು.

‘ಕಲಬುರ್ಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರಂತಹ ಮುತ್ಸದ್ದಿಯನ್ನು ಸೋಲಿಸಿ ಜನ ಬಹಳಷ್ಟು ಕಳೆದು ಕೊಂಡಿದ್ದಾರೆ. ಇದೀಗ ಸಂಸತ್ತಿನಲ್ಲಿ ಕಲಬುರ್ಗಿಯ ಬಗ್ಗೆ ಮಾತನಾಡುವವರೇ ಇಲ್ಲವಾಗಿದ್ದಾರೆ’ ಎಂದು ಹೇಳಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಬೀದರ್ ಶಾಸಕ ರಹೀಂಖಾನ್, ದತ್ತಾತ್ರಿ ಮೂಲಗಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.