ADVERTISEMENT

ಮನೆ ಮಹಾಮನೆಯಾಗಬೇಕು

ಭಾಲ್ಕಿ ಹಿರೇಮಠ ಸಂಸ್ಥಾನದ ಶ್ರೀ ಬಸವಲಿಂಗ ಪಟ್ಟದ್ದೇವರು

​ಪ್ರಜಾವಾಣಿ ವಾರ್ತೆ
Published 12 ಜುಲೈ 2021, 11:34 IST
Last Updated 12 ಜುಲೈ 2021, 11:34 IST
ಬಸವಲಿಂಗ ಪಟ್ಟದ್ದೇವರು
ಬಸವಲಿಂಗ ಪಟ್ಟದ್ದೇವರು   

ಬೀದರ್‌: ಮನೆ ಅಂದರೆ, ಬರೇ ಕಲ್ಲು, ಮಣ್ಣು, ಇಟ್ಟಿಗೆ, ಸೀಮೆಂಟ್, ಕಬ್ಬಿಣದ ಕಟ್ಟಡವಲ್ಲ. ಮನೆ ಅಂದರೆ, ಪ್ರೀತಿ, ನೆಮ್ಮದಿ, ವಿಶ್ವಾಸದಿಂದ ಮನಸ್ಸುಗಳನ್ನು ಕಟ್ಟುವುದು. ಪ್ರೀತಿ ಮತ್ತು ವಿಶ್ವಾಸದಿಂದ ಕೂಡಿರುವ ಮನಸ್ಸುಗಳನ್ನು ಎಲ್ಲಿ ಇರುತ್ತವೆಯೋ ಅದುವೇ ಮನೆಯಾಗುತ್ತದೆ. ಅದು ಗೂಡಿಸಲು ಇರಬಹುದು, ಬಂಗ್ಲೆಯೂ ಇರಬಹುದು. ಮನೆ ಮಹಾಮನೆಯಾಗುವುದೆಂದರೆ ನಾಲ್ಕಾರು ಅಂತಸ್ತು ಕಟ್ಟಿದರೆ ಮಹಾಮನೆಯಾಗುವುದಿಲ್ಲ. ಯಾವ ಮನೆಯಲ್ಲಿ ಪ್ರೀತಿ, ನೆಮ್ಮದಿ, ಸಂತೃಪ್ತಿ, ಸಮಾಧಾನ ಇದೆಯೋ ಅದುವೇ ಮಹಾಮನೆ. ಆ ಮನೆಯೇ ಸ್ವರ್ಗವಾಗುತ್ತದೆ.

`ಮ’ ಎಂದರೆ ಮನಸ್ಸು `ನೆ’ ಎಂದರೆ ನೆಮ್ಮದಿ. ಯಾವ ಮನೆಯಲ್ಲಿ ಮನಸ್ಸು ಸದಾ ನೆಮ್ಮದಿಯಾಗಿದೆಯೋ ಅದುವೇ ಮನೆ. ಸತಿಯ ಮೇಲೆ ಪತಿಯ ವಿಶ್ವಾಸ, ಪತಿಯ ಮೇಲೆ ಸತಿಯ ವಿಶ್ವಾಸವಿದ್ದು, ಕೇವಲ ತನಗಾಗಿ ಮಾತ್ರ ಚಿಂತಿಸದೇ ಇನ್ನೊಬ್ಬರ ಕಷ್ಟದಲ್ಲಿ ಕೈಲಾದಷ್ಟು ಸಹಾಯ ಸಹಕಾರದೊಂದಿಗೆ ಆನಂದವಾಗಿ ಬದುಕಿದರೆ ಅದುವೇ ಮಹಾಮನೆ. ಇದ್ದುದು ವಂಚನೆ ಮಾಡದೆ ಇರಲಾರದ್ದು ಬಯಸದೆ ಸಂತೃಪ್ತತೆಯಿಂದ ಬದುಕುಬೇಕು.

ಅಕ್ಕಮ್ಮತಾಯಿ ಹೇಳುತ್ತಾಳೆ “ಬೇಕು ಬೇಕು ಬೇಕು ಎಂಬುದೆ ಬಡತನ, ಸಾಕು ಸಾಕು ಸಾಕಲು ಎಂಬಂತೆ ಸಿರಿತನ”. ಸಂತ ತುಕಾರಾಮನು ಬಡತನವಿದ್ದರೂ ನನ್ನಷ್ಟು ಶ್ರೀಮಂತರು ಯಾರೂ ಇಲ್ಲ ಎಂದು. ಬಾಹ್ಯ ಸಂಪತ್ತಿನ ಜೊತೆ ಅಂತರಂಗದ ಸಂಪತ್ತಿಗೂ ಲಕ್ಷಕೊಡುತ್ತ ಅರ್ಚನೆ-ಅರ್ಪಣೆ-ಅನುಭಾವದೊಂದಿಗೆ ಬದುಕು ಸಾಗಬೇಕು. `ಮನೆ ನೋಡಾ ಬಡವರು ಮನ ನೋಡಾ ಘನ’ ಬಸವ ತಂದೆಯವರು ಹೇಳಿದಂತೆ ಮನೆ-ಮನ ಎರಡೂ ಘನವಾಗಿದ್ದರೆ ಅದುವೇ ಮಹಾಮನೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.