ADVERTISEMENT

ಕುಂಬಾರ ಗುಂಡಯ್ಯನವರ ಬದುಕು ಸಮಾಜಕ್ಕೆ ದಾರಿದೀಪ

ಸಾಹಿತಿ ಪಾರ್ವತಿ ಸೋನಾರೆ ಅಭಿಮತ

​ಪ್ರಜಾವಾಣಿ ವಾರ್ತೆ
Published 3 ಜುಲೈ 2022, 13:49 IST
Last Updated 3 ಜುಲೈ 2022, 13:49 IST
ಬೀದರ್‌ನಲ್ಲಿ ಭಾನುವಾರ ಜಿಲ್ಲಾ ಕುಂಬಾರ ಸಂಘದ ವತಿಯಿಂದ ಆಯೋಜಿಸಿದ್ದ ಶಿವ ಶರಣ ಕುಂಬಾರ ಗುಂಡಯ್ಯನವರ ಜಯಂತಿ ಆಚರಿಸಲಾಯಿತು
ಬೀದರ್‌ನಲ್ಲಿ ಭಾನುವಾರ ಜಿಲ್ಲಾ ಕುಂಬಾರ ಸಂಘದ ವತಿಯಿಂದ ಆಯೋಜಿಸಿದ್ದ ಶಿವ ಶರಣ ಕುಂಬಾರ ಗುಂಡಯ್ಯನವರ ಜಯಂತಿ ಆಚರಿಸಲಾಯಿತು   

ಬೀದರ್: ಹನ್ನೆರಡನೆಯ ಶತಮಾನದ ಬಸವಾದಿ ಶರಣರ ಸಮಕಾಲೀನ ಶರಣ ಕುಂಬಾರ ಗುಂಡಯ್ಯನವರು ಕಾಯಕದಲ್ಲೇ ಕೈಲಾಸ ಕಂಡವರು. ಅವರ ನಿಷ್ಠೆ, ಪ್ರಾಮಾಣಿಕ, ಶ್ರದ್ಧೆ ಇಂದಿನ ಸಮಾಜಕ್ಕೆ ದಾರಿ ದೀಪವಾಗಿದೆ ಎಂದು ಸಾಹಿತಿ ಪಾರ್ವತಿ ಸೋನಾರೆ ಅಭಿಪ್ರಾಯಪಟ್ಟರು.

ನಗರದಲ್ಲಿ ಜಿಲ್ಲಾ ಕುಂಬಾರ ಸಂಘದ ವತಿಯಿಂದ ಆಯೋಜಿಸಿದ್ದ ಶಿವ ಶರಣ ಕುಂಬಾರ ಗುಂಡಯ್ಯನವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಭಕ್ತಿಯ ಕುಂಬಾರಿಕೆ ಕಾಯಕ ಮೂಲಕ ಶರಣ ಸಂಕುಲಕ್ಕೆ ಶ್ರೇಷ್ಠ ಕಾಯಕಜೀವಿ ಎನಿಸಿಕೊಂಡಿದ್ದರು ಎಂದು ಪ್ರತಿಪಾದಿಸಿದರು.

ಗುಂಡಯ್ಯನವರು ಮೂಲತಃ ಬೀದರ್ ಜಿಲ್ಲೆಯ ಭಾಲ್ಕಿ ಪಟ್ಟಣದವರು. ಗುಂಡಯ್ಯನವರು ಭಕ್ತಿಯ ಕಾಯಕ ಜತೆಗೆ ವಚನಗಳು ರಚಿಸಿರಬಹುದು, ಆದರೆ ಅವರ ಒಂದೇ ಒಂದು ವಚನ ಲಭ್ಯವಾಗಿಲ್ಲ. ಆದರೆ ಅವರ ಧರ್ಮ ಪತ್ನಿ ಕೇತಲದೇವಿ ರಚಿಸಿರುವ ಎರಡು ವಚನಗಳು ಲಭ್ಯವಾಗಿವೆ. ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ ಎನ್ನುವಂತೆ ಕುಂಬಾರ ಗುಂಡಯ್ಯ ಹಾಗೂ ಕೇತಲದೇವಿ ದಂಪತಿ ಆದರ್ಶ ಬದುಕು ಇಡೀ ಸಮಾಜಕ್ಕೆ ಆದರ್ಶವಾಗಿದೆ ಎಂದು ಹೇಳಿದರು.

ADVERTISEMENT

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪಂಚಾಯಿತಿ ನಿವೃತ್ತ ಅಧಿಕಾರಿ ಬಸವರಾಜ ಕುಂಬಾರ ಮಾತನಾಡಿ, ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಕುಂಬಾರ ಸಮಾಜಕ್ಕೆ ಇಲ್ಲಿಯವರೆಗೂ ರಾಜಕೀಯ ಪ್ರಾತಿನಿಧ್ಯ ಸಿಕ್ಕಿಲ್ಲ ಎಂದರು.

ಜಿಲ್ಲಾ ಕುಂಬಾರ ಸಂಘದ ಅಧ್ಯಕ್ಷ ವಿಠ್ಠಲ್ ಕುಂಬಾರ ಅಧ್ಯಕ್ಷತೆ ವಹಿಸಿದ್ದರು. ಅಂಬಿಗರ ಚೌಡಯ್ಯ ಯುವ ಸೇನೆಯ ಸಂಸ್ಥಾಪಕ ಅಧ್ಯಕ್ಷ ಸುನೀಲ ಭಾವಿಕಟ್ಟಿ ಮಾತನಾಡಿದರು. ಬಾಲಾಜಿ ಕುಂಬಾರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಮಾಜದ ಮುಖಂಡರಾದ ಶಿವರಾಜ ಕಾಳಶೆಟ್ಟಿ, ವಿಜಯಕುಮಾರ ಕುಂಬಾರ, ಶಿವಕುಮಾರ ಗಾದಗಿ, ಶ್ರೀಕಾಂತ ಮಾಳಚಾಪುರ, ರಾಜಕುಮಾರ ಹಲಬರ್ಗಾ, ಲಿಂಗಪ್ಪ ಚಾಂಬೋಳ, ಬಾಬುರಾವ್ ಚಾಂಬೋಳ್, ಅಂಬಾದಾಸ್ ಜನವಾಡಾ, ಸದಾನಂದ ಚಿಟ್ಟಾ, ಶಿವಾನಂದ ನೌಬಾದ್, ಚಂದ್ರಕಾಂತ ಹಳ್ಳಿಖೇಡಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.