ADVERTISEMENT

ಬೀದರ್‌ನ ಪ್ರಮುಖ ಮಾರ್ಗಗಳು ಬಂದ್

ಬೀದರ್‌: ಅನಗತ್ಯವಾಗಿ ಸಂಚರಿಸುತ್ತಿದ್ದ ಬೈಕ್‌ ಚಾಲಕರಿಗೆ ದಂಡ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2020, 14:48 IST
Last Updated 31 ಮಾರ್ಚ್ 2020, 14:48 IST
ಬೀದರ್‌ನ ಅಶೋಕ ಹೋಟೆಲ್‌ ಸಮೀಪ ರೈಲ್ವೆ ಕೆಳ ಸೇತುವೆ ರಸ್ತೆ ಮುಚ್ಚಲಾಗಿದೆ
ಬೀದರ್‌ನ ಅಶೋಕ ಹೋಟೆಲ್‌ ಸಮೀಪ ರೈಲ್ವೆ ಕೆಳ ಸೇತುವೆ ರಸ್ತೆ ಮುಚ್ಚಲಾಗಿದೆ   

ಬೀದರ್‌: ಕೋವಿಡ್ 19 ಸೋಂಕು ಹರಡುವಿಕೆ ತಡೆಯುವ ಉದ್ದೇಶದಿಂದ ಸಾರ್ವಜನಿಕರು ಒಂದೆಡೆ ಸೇರದಂತೆ ಜಿಲ್ಲಾಡಳಿತ ಅನೇಕ ಕ್ರಮಗಳನ್ನು ಕೈಗೊಂಡಿದೆ. ಅನಗತ್ಯವಾಗಿ ಸಂಚರಿಸುತ್ತಿದ್ದ ಕೆಲವರಿಗೆ ಬೆತ್ತದ ರುಚಿ ತೋರಿಸಲಾಗಿದೆ. ಪೆಟ್ರೋಲ್‌ ಬಂಕ್‌ಗಳಲ್ಲಿ ಪೆಟ್ರೋಲ್‌ ಲಭಿಸದಂತೆ ನೋಡಿಕೊಂಡಿದೆ. ಆದರೂ ಜನ ಬೀದಿಯಲ್ಲಿ ಸಂಚರಿಸುವುದನ್ನು ನಿಲ್ಲಿಸದ ಕಾರಣ ಪ್ರಮುಖ ಮಾರ್ಗಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ ರಸ್ತೆಗಳನ್ನೇ ಬಂದ್‌ ಮಾಡಿದೆ.

ನಗರದ ಅಶೋಕ ಹೋಟೆಲ್‌ ಸಮೀಪದ ರೈಲ್ವೆ ಕೆಳ ಸೇತುವೆ ಬಳಿ ವಿದ್ಯುತ್‌ ಕಂಬವನ್ನು ಅಡ್ಡಲಾಗಿ ಇಟ್ಟು ಬ್ಯಾರಿಕೇಡ್‌ಗಳನ್ನು ಅವುಗಳಿಗೆ ಕಟ್ಟಿ ವಾಹನ ಸಂಚಾರವನ್ನು ಸಂಪೂರ್ಣ ಬಂದ್‌ ಮಾಡಲಾಗಿದೆ. ಕರ್ನಾಟಕ ಕಾಲೇಜು ಎದುರಿನ ಫತ್ಹೇ ದರ್ವಾಜಾ, ಶಹಾಗಂಜ್‌ ದರ್ವಾಜಾ, ಮೆಹಮೂದ್‌ ಗವಾನ್ ಚೌಕ್, ನಯಾಕಮಾನ್ ಬಳಿ ಹೊಸದಾಗಿ ಗ್ರಿಲ್‌ಗಳನ್ನು ರಸ್ತೆಗೆ ಅಡ್ಡಲಾಗಿ ಕಟ್ಟಲಾಗಿದೆ.

ನಗರದ ಪ್ರಮುಖ ಮಾರ್ಗಗಳನ್ನು ಮುಚ್ಚಿದರೂ ಕೆಲವು ಯುವಕರು ದ್ವಿಚಕ್ರ ವಾಹನದಲ್ಲಿ ನುಸುಳಿ ನಗರದೊಳಗೆ ಬರುತ್ತಿದ್ದಾರೆ. ಪೊಲೀಸರು ಅವರ ವಾಹನಗಳನ್ನು ತಡೆದು ಟೈರ್‌ನ ಗಾಳಿಯನ್ನು ಬಿಡುತ್ತಿದ್ದಾರೆ. ಹೀಗಾಗಿ ಬೈಕ್‌ ಸವಾರರು ದ್ವಿಚಕ್ರ ವಾಹನಗಳನ್ನು ನೂಕಿಕೊಂಡು ಮನೆಯ ವರೆಗೆ ಹೋಗಲು ಪ್ರಯಾಸ ಪಡುತ್ತಿದ್ದಾರೆ.

ADVERTISEMENT

ಬಂಕ್‌ನಲ್ಲಿ ಸಾಮಾಜಿಕ ಅಂತರ: ನಗರದ ಪೆಟ್ರೋಲ್‌ ಬಂಕ್‌ಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಒಂದು ಮೀಟರ್‌ ಅಂತರದ ಮಾರ್ಕ್‌ ಮಾಡಲಾಗಿದೆ. ಅದರಲ್ಲಿ ಅಚ್ಚುಕಟ್ಟಾಗಿ ನಿಂತು ಸರಿಯಾದ ದಾಖಲೆಗಳನ್ನು ತೋರಿಸುವ ಸರ್ಕಾರಿ ಸೇವೆಯಲ್ಲಿರುವ ಸಿಬ್ಬಂದಿ ಹಾಗೂ ಅಗತ್ಯ ಸೇವೆ ಒದಗಿಸುತ್ತಿರುವ ಸಿಬ್ಬಂದಿಗೆ ಮಾತ್ರ ಪೆಟ್ರೋಲ್‌ ಪಡೆಯಲು ಅವಕಾಶ ಕಲ್ಪಿಸಲಾಗುತ್ತಿದೆ.

ಪೆಟ್ರೋಲ್‌ ಬಂಕ್ ಸಿಬ್ಬಂದಿ ಪ್ರವೇಶ ದ್ವಾರದಲ್ಲಿ ಮೈಕ್‌ ಹಿಡಿದುಕೊಂಡು ಎಲ್ಲರೂ ಬಂಕ್‌ಗೆ ಬರದಂತೆ ತಿಳಿವಳಿಕೆ ನೀಡುತ್ತಿದ್ದಾರೆ. ಖಾಸಗಿ ವ್ಯಕ್ತಿಗಳಿಗೆ ಪೆಟ್ರೋಲ್‌ ವಿತರಿಸಲು ನಿರಾಕರಿಸಲಾಗುತ್ತಿದೆ. ದೂರದ ಹೊಲಗಳಿಗೆ ತೆರಳುವ ರೈತರು, ಮೇವು ತರಲು ವಾಹನ ಬಳಸುವವರು ಪೆಟ್ರೋಲ್‌ ದೊರೆಯದೆ ತೊಂದರೆ ಅನುಭವಿಸಬೇಕಾಯಿತು.

ದಾಖಲೆಗಳ ತಪಾಸಣೆ: ನಗರದಲ್ಲಿ ಕಾರು ಹಾಗೂ ದ್ವಿಚಕ್ರ ವಾಹನಗಳ ಓಡಾಟ ತಡೆಯಲು ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. ವಾಹನಗಳ ಸರಿಯಾದ ದಾಖಲೆ, ವಾಹನ ಚಾಲನಾ ಲೈಸನ್ಸ್‌ ಇಲ್ಲದವರಿಗೆ ಸ್ಥಳದಲ್ಲೇ ದಂಡ ವಿಧಿಸಿ ಬಿಸಿ ಮುಟ್ಟಿಸಿದರು.

ನಿರ್ಗತಿಕರು ಹಾಗೂ ಕಡು ಬಡವರಿಗೆ ಆಹಾರ ವಿತರಿಸುವ ನೆಪದಲ್ಲಿ ನೂರಾರು ಜನ ಪಾಸ್‌ಗಳನ್ನು ಪಡೆದಿರುವುದನ್ನು ಕಂಡು ಅವಕ್ಕಾದರು. 20 ಮಂದಿಗೆ ಊಟ ಹಂಚಲು 20 ಮಂದಿ ಪಾಸ್‌ ಪಡೆದಿರುವುದು ಪರಿಶೀಲನೆಯ ಸಂದರ್ಭದಲ್ಲಿ ಕಂಡು ಬಂದಿತು. ಪೊಲೀಸರು ಕೆಲವರಿಗೆ ಎಚ್ಚರಿಕೆ ನೀಡಿ ಮನೆಗೆ ಕಳಿಸಿದರು.

ಮೈಲೂರು ಕ್ರಾಸ್‌, ಗುಂಪಾ ಹಾಗೂ ಓಲ್ಡ್‌ಸಿಟಿಯಲ್ಲಿ ಜನ ಬೇಕಾಬಿಟ್ಟಿಯಾಗಿ ಅಲೆದಾಡುತ್ತಿದ್ದಾರೆ. ಹೀಗಾಗಿ ಮೈಲೂರು ಕ್ರಾಸ್‌ನಲ್ಲಿ ಪೊಲೀಸರು ಎಲ್ಲ ವಾಹನಗಳ ತಪಾಸಣೆ ನಡೆಸಿದರು. ಸುಳ್ಳು ನೆಪ ಹೇಳಿಕೊಂಡು ಅಲೆದಾಡುತ್ತಿದ್ದವರ ವಾಹನಗಳ ಗಾಳಿ ತೆಗೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.