ADVERTISEMENT

ಕಟ್ಟಡ ಕಟ್ಟಿದರೂ ಜನರಿಗೆ ಪ್ರಯೋಜನವಾಗಲಿಲ್ಲ... 

ಕೋಟ್ಯಂತರ ಹಣ ಮಣ್ಣುಪಾಲು: ಅಧಿಕಾರಿಗಳು ಮೌನ

ಚಂದ್ರಕಾಂತ ಮಸಾನಿ
Published 23 ಜನವರಿ 2022, 19:31 IST
Last Updated 23 ಜನವರಿ 2022, 19:31 IST
ಬೀದರ್‌ನ ಮಡಿವಾಳ ವೃತ್ತದ ಬಳಿ ಎರಡು ವರ್ಷಗಳ ಹಿಂದೆ ನಿರ್ಮಿಸಿದ ಬಸ್‌ತಂಗುದಾಣ ಅಪರಿಚಿತ ವಾಹನ ಹಾಯ್ದು ಹಾಳಾಗಿದೆ
ಬೀದರ್‌ನ ಮಡಿವಾಳ ವೃತ್ತದ ಬಳಿ ಎರಡು ವರ್ಷಗಳ ಹಿಂದೆ ನಿರ್ಮಿಸಿದ ಬಸ್‌ತಂಗುದಾಣ ಅಪರಿಚಿತ ವಾಹನ ಹಾಯ್ದು ಹಾಳಾಗಿದೆ   

ಬೀದರ್‌: ಹಿಂದುಳಿದ ಜಿಲ್ಲೆ ಎನ್ನುವ ಕಾರಣಕ್ಕೆ ಅನೇಕ ಯೋಜನೆಗಳಡಿ ಜಿಲ್ಲೆಗೆ ಅಪಾರ ಪ್ರಮಾಣದಲ್ಲಿ ಅನುದಾನ ಹರಿದು ಬರುತ್ತಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹಲವು ಕಟ್ಟಡಗಳನ್ನು ನಿರ್ಮಿಸಲಾಗಿದೆ. ಕಟ್ಟಡಗಳು ಗುತ್ತಿಗೆದಾರರಿಗೆ ಹೆಚ್ಚು ಲಾಭ ತಂದುಕೊಟ್ಟಿವೆಯೇ ಹೊರತು ಅವುಗಳಿಂದ ಸಾರ್ವಜನಿಕರಿಗೆ ಉಪಯೋಗವಾಗಿಲ್ಲ. ಅನೇಕ ಕಟ್ಟಡಗಳು ಸಾರ್ವಜನಿಕರ ಬಳಕೆಗೆ ಮುಕ್ತಗೊಳ್ಳುವ ಮೊದಲೇ ಹಾಳಾಗಿವೆ.

ಜನರ ತೆರಿಗೆ ಹಣದಲ್ಲಿ ಕಟ್ಟಡ ನಿರ್ಮಾಣ ಮಾಡಿ ಕೋಟ್ಯಂತರ ರೂಪಾಯಿ ಪೋಲು ಮಾಡಲಾಗಿದೆ. ಕೆಡಿಪಿ ಸಭೆಗಳಲ್ಲಿ ಇಂತಹ ಕಟ್ಟಡಗಳ ಬಗ್ಗೆ ಚರ್ಚೆಯಾಗುತ್ತಿಲ್ಲ. ಒಣ ಪ್ರತಿಷ್ಠೆಯ ರಾಜಕಾರಣಕ್ಕೆ ಸಭೆಗಳು ಸೀಮಿತಗೊಳ್ಳುತ್ತಿವೆ. ಪರ್ಸಂಟೇಜ್‌ ರುಚಿ ಅನುಭವಿಸಿದ ಅಧಿಕಾರಿಗಳು ಜಿಲ್ಲೆಯಿಂದ ವರ್ಗವಾಗಿ ಹೋದರೂ ರಾಜಕಾರಣಿಗಳನ್ನು ಹಿಡಿದುಕೊಂಡು ಮತ್ತೆ ಇಲ್ಲಿಗೆ ಬರುತ್ತಿದ್ದಾರೆ. ಹಿರಿಯ ಅಧಿಕಾರಿಗಳೇ ಗುಮಾಸ್ತರಂತೆ ಕಾರ್ಯನಿರ್ವಹಿಸುತ್ತಿರುವ ಕಾರಣ ಜಿಲ್ಲೆಯಲ್ಲಿ ಅನೇಕ ಕಟ್ಟಡಗಳು ಕಣ್ಣೆದುರೇ ಮಣ್ಣುಪಾಲಾಗುತ್ತಿವೆ.

ಬಯಲು ಶೌಚಮುಕ್ತ ನಗರಕ್ಕೆ ಸಂಕಲ್ಪ ಮಾಡಿ ಬೀದರ್‌ ನಗರಸಭೆ ನಾವದಗೇರಿಯಲ್ಲಿ ₹ 13 ಲಕ್ಷ ವೆಚ್ಚದಲ್ಲಿ ನಾಲ್ಕು ವರ್ಷಗಳ ಹಿಂದೆ ಸಮುದಾಯ ಶೌಚಾಲಯ ನಿರ್ಮಿಸಿತು. ಆದರೆ ನಗರಸಭೆ ಅಧಿಕಾರಿಗಳು ಅದನ್ನು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಿರಲಿಲ್ಲ. ಕಟ್ಟಡ ನಿರ್ಮಾಣಗೊಂಡ ವರ್ಷದಲ್ಲೇ ಡಾಂಬರ್ ಮರೂಮ್ ಸಾಗಿಸುತ್ತಿದ್ದ ಟಿಪ್ಪರ್‌ ಡಿಕ್ಕಿ ಹೊಡೆದು ಕಟ್ಟಡ ಕುಸಿದು ಬಿದ್ದಿತು. ಆದರೆ, ಅಧಿಕಾರಿಗಳು ಇಂದಿಗೂ ಪ್ರಕರಣ ದಾಖಲಿಸಿಲ್ಲ.

ADVERTISEMENT

ಮಡಿವಾಳ ವೃತ್ತದ ಬಳಿ ಗುರುನಾನಕ ಪದವಿ ಪೂರ್ವ ಕಾಲೇಜಿಗೆ ಹೋಗುವ ತಿರುವಿನಲ್ಲಿ ಜಿಲ್ಲಾಡಳಿತವು ವಿಧಾನ ಪರಿಷತ್‌ ಸದಸ್ಯರ ಅನುದಾನದಲ್ಲಿ ಎರಡು ವರ್ಷಗಳ ಹಿಂದೆ ಬಸ್‌ ತಂಗುದಾಣ ನಿರ್ಮಿಸಿದೆ. ಅದಕ್ಕೆ ವಾಹನ ಡಿಕ್ಕಿ ಹೊಡೆದು ಚಾವಣಿ ಹಾಳಾಗಿದೆ. ಬಸ್ ತಂಗುದಾಣದ ನೆಲಹಾಸು ಬಿರುಕು ಬಿಟ್ಟಿದೆ. ಆಸನಗಳು ತುಕ್ಕು ಹಿಡಿಯುತ್ತಿವೆ.

ಬೀದರ್‌ ತಾಲ್ಲೂಕಿನ ಕಾಡವಾದ ಬಳಿ 15 ವರ್ಷಗಳ ಹಿಂದೆ ತಲಾ ₹ 5 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಅತಿಥಿಗೃಹ ಹಾಗೂ ಕೃಷಿ ಕೇಂದ್ರ ಸಂಪೂರ್ಣ ಹಾಳಾಗಿವೆ. ಅತಿಥಿಗೃಹದಲ್ಲಿನ ಪಿಠೋಪಕರಣ, ಬಾಗಿಲು, ಕಿಟಕಿಗಳನ್ನು ಕಳ್ಳರು ಕಿತ್ತು ಒಯ್ದಿದ್ದಾರೆ. ಕಳ್ಳರು ಕಟ್ಟಡದೊಳಗಿನ ವೈರಿಂಗ್‌ಸಹ ಬಿಟ್ಟಿಲ್ಲ. ಸರ್ಕಾರದ ಹಣ ಕಣ್ಣೆದುರೇ ಪೋಲಾದರೂ ಕೇಳುವವರೇ ಇಲ್ಲವಾಗಿದ್ದಾರೆ ಎಂದು ಕಳವಳ ವ್ಯಕ್ತಪಡಿಸುತ್ತಾರೆ ಕಾಡವಾದ ನಿವಾಸಿ ಸತೀಶ ಪಾಟೀಲ.

ಹುಲಸೂರಿನಲ್ಲಿ ನಿರ್ಮಿಸಿದ ತರಕಾರಿ ಮಾರುಕಟ್ಟೆ ಕಟ್ಟಡ ಹಾಳಾಗಿದೆ. ಕಟ್ಟಡದ ಚಾವಣಿಯ ಸಿಮೆಂಟ್‌ ಸೀಟುಗಳು ಕಿತ್ತು ಹೋಗಿವೆ. ಕಟ್ಟಡದಲ್ಲಿ ಹುಲ್ಲು ಬೆಳೆದು ನಿಂತಿದೆ.

ಹುಮನಾಬಾದ್ ತಾಲ್ಲೂಕಿನ ಹಳ್ಳಿಖೇಡ(ಬಿ), ಕಮಲನಗರ, ಔರಾದ್ ತಾಲ್ಲೂಕಿನ ಸಂತಪುರದ ಬಸ್‌ನಿಲ್ದಾಣ, ಭಾಲ್ಕಿ ತಾಲ್ಲೂಕಿನ ಭಾತಾಂಬ್ರಾದಲ್ಲಿನ ಗುರುಭವನ ಹಾಳು ಬಿದ್ದಿವೆ. ₹60 ಲಕ್ಷ ವ್ಯಯಿಸಿ ಗುರುಭವನ ನಿರ್ಮಿಸಿದರೂ ಪ್ರಯೋಜನ ಆಗಿಲ್ಲ. ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಸ್ಪಂದಿಸುತ್ತಿಲ್ಲ ಎಂದು ಭಾತಾಂಬ್ರಾದ ವಕೀಲ ಮಹೇಶ ರಾಚೋಟೆ, ಧನ್ನೂರಿನ ಮಹೇಶ ಹಾಳೆ ಆಕ್ರೋಶ ವ್ಯಕ್ತಪಡಿಸುತ್ತಾರೆ.

ಗ್ರಂಥಾಲಯ ಇಲಾಖೆ ಮಳಿಗೆಗಳು ಹಾಳು

ಬಸವಕಲ್ಯಾಣ: ನಗರದ ಕೇಂದ್ರ ಗ್ರಂಥಾಲಯದ ಎದುರಲ್ಲಿ ಕಟ್ಟಿದ 35 ಮಳಿಗೆಗಳು ವಿತರಣೆಯಾಗದೆ ಹಾಳು ಬಿದ್ದಿವೆ.

ಗ್ರಂಥಾಲಯ ಇಲಾಖೆಯಿಂದ 15 ವರ್ಷಗಳ ಹಿಂದೆ ಕಟ್ಟಡ ನಿರ್ಮಿಸಿದ್ದರೂ ಅಂಗಡಿಗಳಿಗೆ ಶೆಟರ್ ಇಲ್ಲದ ಕಾರಣ ಈ ಸ್ಥಳ ಹಂದಿ, ನಾಯಿಗಳ ವಾಸಸ್ಥಾನವಾಗಿತ್ತು. ಎರಡು ವರ್ಷಗಳ ಹಿಂದೆ ಶೆಟರ್ ಗಳನ್ನು ಅಳವಡಿಸಿದ್ದರೂ ಯಾರಿಗೂ ಹಂಚಿಕೆ ಮಾಡಿಲ್ಲ. ಅಧಿಕಾರಿಗಳು ಸರ್ಕಾರದ ಹಣ ಪೋಲು ಮಾಡಿದ್ದಾರೆ ಎಂದು ಯುವ ನಾಯಕ ಪಂಕಜ ಬೇಸರ ವ್ಯಕ್ತಪಡಿಸುತ್ತಾರೆ.

ಪಾಳು ಬಿದ್ದ ಸಂತಪುರ ಪ್ರವಾಸಿ ಮಂದಿರ ಕಟ್ಟಡ

ಔರಾದ್ ತಾಲ್ಲೂಕಿನ ಸಂತಪುರ ಹೋಬಳಿ ಕೇಂದ್ರದಲ್ಲಿರುವ ಅನೇಕ ಸರ್ಕಾರಿ ‌ಕಟ್ಟಡಗಳು ಹಾಳು ಬಿದ್ದವೆ. ಇಲ್ಲಿಯ ಪ್ರವಾಸಿ ಮಂದಿರ, ತಾಲ್ಲೂಕು ಪಂಚಾಯಿತಿ ಕಟ್ಟಡ ಸೇರಿದಂತೆ ಅನೇಕ ಕಟ್ಟಡಗಳು ‌ಸೂಕ್ತ ನಿರ್ವಹಣೆ ಇಲ್ಲದೆ ಹಾಳಾಗುತ್ತಿವೆ. ಕೆಲ ಕಟ್ಟಡಗಳು ಭಾಗಶಃ ಬಿದ್ದು ಕಲ್ಲು ಮಣ್ಣು ಕಳ್ಳರ ಪಾಲಾಗುತ್ತಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ‌ ಕಟ್ಟಲಾದ ಸಂತಪುರ ಬಸ್ ನಿಲ್ದಾಣ ಬಳಕೆಯಾಗದೆ ಈಗ ಅನೈತಿಕ ಚಟುವಟಿಕೆ ತಾಣವಾಗಿದೆ.

ಸಂತಪುರ ಹಿಂದೆ ತಾಲ್ಲೂಕು ಕೇಂದ್ರವಾಗಿತ್ತು. ಹೀಗಾಗಿ ಇಲ್ಲಿ ಅನೇಕ ತಾಲ್ಲೂಕು ಮಟ್ಟದ ಕಚೇರಿಗಳಿವೆ. ಆದರೆ ಸಂಬಂಧಿತರ ನಿರ್ಲಕ್ಷ್ಯದಿಂದ ಸರ್ಕಾರದ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಹಾಳಾಗುತ್ತಿದೆ ಎಂದು ದಲಿತ ಸಂಘರ್ಷ ಸಮಿತಿ ಸಂಚಾಲಕ ಧನರಾಜ ಮುಸ್ತಾಪುರ ಹಾಗೂ ತುಕಾರಾಮ ಹಸನ್ಮುಖಿ ಆಕ್ರೋಶ ವ್ಯಕ್ತಪಡಿಸುತ್ತಾರೆ.

ಬಳಕೆಗೆ ಮುಕ್ತವಾಗದ ನಿರ್ಣಾ ಗುರುಭವನ

ಚಿಟಗುಪ್ಪ ತಾಲ್ಲೂಕಿನ ನಿರ್ಣಾ ಗ್ರಾಮದಲ್ಲಿ 1೦ ವರ್ಷಗಳ ಹಿಂದೆ ₹ 33.42 ಲಕ್ಷ ಮೊತ್ತದಲ್ಲಿ ನಿರ್ಮಿಸಿದ ಗುರು ಭವನ ಇಂದಿಗೂ ಬಳಕೆಗೆ ಮುಕ್ತವಾಗಿಲ್ಲ.

ಕ್ಯಾಪೊಟೆಕ್ ಕಂಪನಿ ಕಟ್ಟಡ‌ ನಿರ್ಮಾಣ ಮಾಡಿದ್ದು, ಕಟ್ಟಡ ಶಿಕ್ಷಣ ಇಲಾಖೆ ಗೆ ಹಸ್ತಾಂತರ ಆಗಿಲ್ಲ, ಕಿಟಕಿ, ಬಾಗಿಲು, ನೆಲಹಾಸು, ಶೌಚಾಲಯ ಎಲ್ಲವೂ ಹಾಳಾಗಿವೆ, ಕಟ್ಟಡಕ್ಕೆ ಪಾಚಿಕಟ್ಟಿದ್ದು, ಸುತ್ತ ಗಿಡಗಳು ಬೆಳೆದು ನಿಂತಿವೆ. ಇದೀಗ ಅನೈತಿಕ ಚಟುವಟಿಕೆಯ ತಾಣವಾಗಿ ಮಾರ್ಪಟ್ಟಿದೆ.

ಶಿಕ್ಷಕರು ಗುರುಭವನ ಬಳಕೆಗೆ ಕೊಡುವಂತೆ ಹಲವು ಬಾರಿ ಅಧಿಕಾರಿಗಳ ಬಳಿ ವಿನಂತಿಸಿದರೂ ಅಧಿಕಾರಿಗಳು ಬಂದಿಲ್ಲ. ಈಗ ಕಟ್ಟಡವೇ ಅಗತ್ಯವಿಲ್ಲ ಎಂದು ರಾಜಕಾರಣಿಗಳು ಹೇಳ ತೊಡಗಿದ್ದಾರೆ. ಕೆಲವರು ಅದನ್ನು ನೆಲಸಮಗೊಳಿಸಿ ಸಮುದಾಯ ಭವನ ನಿರ್ಮಿಸಿ ಎಂದು ಸಲಹೆ ಕೊಡುತ್ತಿದ್ದಾರೆ. ಹಣ ಪೋಲು ಆಗುವಂತೆ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒಬ್ಬರೂ ಮುಂದಾಗಿಲ್ಲ.

ಕಾಮಗಾರಿ ವಿಳಂಬ, ಜನರಿಗೆ ಅನುಕೂಲವಾಗುವ ಸ್ಥಳದಲ್ಲಿ ಕಟ್ಟಡ ನಿರ್ಮಾಣ ಮಾಡದಿರುವುದಕ್ಕೆ ಅಧಿಕಾರಿಗಳೇ ಕಾರಣರಾಗಿದ್ದಾರೆ. ಲಕ್ಷಾಂತರ ರೂಪಾಯಿ ವ್ಯಯಿಸಿ ಜನರ ಬಳಕೆಗೆ ಬಾರದಿದ್ದರೆ ಏನು ಪ್ರಯೋಜನ. ಅಭಿವೃದ್ಧಿಗಿಂತ ಕಮಿಷನ್‌ಹೆಚ್ಚು ಮಹತ್ವ ಪಡೆದುಕೊಂಡಾಗ ಇಂತಹ ಆವಾಂತರಗಳು ಆಗುತ್ತವೆ ಎನ್ನುತ್ತಾರೆ ವಿಧಾನ ಪರಿಷತ್‌ಸದಸ್ಯ ಅರವಿಂದಕುಮಾರ ಅರಳಿ.

ಸಹಕಾರ:

ಮನ್ಮಥ ಸ್ವಾಮಿ, ಮಾಣಿಕ ಭೂರೆ, ವೀರೇಶ ಮಠಪತಿ, ನಾಗೇಶ ಪ್ರಭಾ, ಬಸವರಾಜ ಪ್ರಭಾ, ಬಸವಕುಮಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.