ADVERTISEMENT

ವಿಶಿಷ್ಟ ಸಂಪ್ರದಾಯದ ಗೊಂದಲಿಗರು

ಶುಭಕಾರ್ಯಗಳಲ್ಲಿ ಮನಸೂರೆಗೊಳಿಸುವ ಗಾಯನ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 13 ಜೂನ್ 2021, 3:53 IST
Last Updated 13 ಜೂನ್ 2021, 3:53 IST
ಗಾಯನದಲ್ಲಿ ತೊಡಗಿರುವ ಗೊಂದಲಿಗರು
ಗಾಯನದಲ್ಲಿ ತೊಡಗಿರುವ ಗೊಂದಲಿಗರು   

ಬೀದರ್‌: ತುಳಜಾಪುರ ಅಂಬಾ ಭವಾನಿಯ ಹೆಸರಿನಲ್ಲಿ ಇಡೀ ರಾತ್ರಿ ಗೊಂದಲ (ಗೋಂಧಳ) ಹಾಕುವ ಗೊಂದಲಿಗರು ತಮ್ಮ ವಿಶಿಷ್ಟ ಸಂಪ್ರದಾಯದ ಮೂಲಕ ತಮ್ಮ ಸಮುದಾಯದ ಛಾಪು ಉಳಿಸಿಕೊಂಡಿದ್ದಾರೆ.

ಮದುವೆ, ತೊಟ್ಟಿಲು, ಜಾವಳ, ಗೃಹಪ್ರವೇಶದಂತಹ ಶುಭಕಾರ್ಯಗಳ ಸಂದರ್ಭಗಳಲ್ಲಿ ಇಡೀ ರಾತ್ರಿ ಜಾಗರಣೆ ಮಾಡುತ್ತಾರೆ. ಗೊಂದಲ ಕಾರ್ಯಕ್ರಮ ದೇವಿಯನ್ನು ಸಂತುಷ್ಟಗೊಳಿಸಲು ಕೈಗೊಳ್ಳುವ ಭಕ್ತಿ ಸೇವೆಯಾಗಿದೆ. ಮನೆಗಳಲ್ಲಿ ಶುಭಕಾರ್ಯಕ್ಕೆ ಮೊದಲು ಅಥವಾ ಮುಕ್ತಾಯದ ಸಂದರ್ಭಗಳಲ್ಲಿ ಈ ಭಕ್ತಿ ಪಾರಮ್ಯದ ಪೂಜೆಯನ್ನು ಹಮ್ಮಿಕೊಳ್ಳುವ ರೂಢಿಯಿದೆ.

ಗೊಂದಲಿಗರ ಮನೆಗೆ ಹೋಗಿ ದಿನಾಂಕ ನಿಗದಿಗೊಳಿಸಿ ಅವರಿಗೆ ವೀಳ್ಯೆ ನೀಡಿ ಬರುವುದು ರೂಢಿಯಲ್ಲಿದೆ. ಬೀದರ್‌ ಜಿಲ್ಲೆಯಲ್ಲಿ ಗೊಂದಲಿಗರ ಸಮುದಾಯದ ಸಂಖ್ಯೆ ಕಡಿಮೆ ಇದ್ದರೂ ಕರ್ನಾಟಕ, ಮಹಾರಾಷ್ಟ್ರ ಹಾಗೂ ಆಂಧ್ರದ ಸಂಪರ್ಕ ಇರುವುದರಿಂದ ಭಾಷಿಕ ಸಮನ್ವಯತೆ ಯನ್ನೂ ಕಾಯ್ದುಕೊಂಡು ಬಂದಿದ್ದಾರೆ. ಇವರು ಹೇಳುವ ಕಥೆ, ಪ್ರಸಂಗಗಳು ಉತ್ತಮ ನಿದರ್ಶನಗಳಾಗಿವೆ.

ADVERTISEMENT

ಗೊಂದಲದ ರಾತ್ರಿ ಈ ವೃತ್ತಿ ಗಾಯಕರು, ಕಲಾವಿದರು ತಾವು ಹಾಡುವ ಸ್ಥಳದಲ್ಲಿ ದೇವಿಯನ್ನು ಸುಂದರವಾಗಿ ಅಲಂಕರಿಸಿರುವ ಮಂಟಪದ ಮುಂದೆ ತಮ್ಮ ಗಾಯನ ಪ್ರದರ್ಶನವನ್ನು ನಡೆಸಿಕೊಡುತ್ತಾರೆ. ಮಂಟಪವನ್ನು ಬಾಳೆ ದಿಂಡು, ತಳಿರು, ತೋರಣ, ದೀಪಗಳಿಂದ ಅಲಂಕರಿಸಿ ಅವರೊಂದಿಗೆ ತಂದ ದೀವಟಿಗೆ ಉರಿಯಲು ಎಣ್ಣೆ ಹಾಕಲು ಒಬ್ಬ ವ್ಯಕ್ತಿಯನ್ನು ಕೂಡಿಸುತ್ತಾರೆ.

ಸಭಿಕರಿಗೆ ಗೊಂದಳಿಗರು ಕಥನಾಕಲೆ, ಹಾಸ್ಯಮಿಶ್ರಿತ ಶೈಲಿ, ಕಥೆಯೊಳಗೊಂದು ಉಪಕಥೆಯನ್ನು, ಹಾಸ್ಯ, ವ್ಯಂಗ್ಯ, ವಿಡಂಬನೆ, ಚಮತ್ಕಾರಗಳನ್ನು ಮೇಳೈಸುವ ಅವರ ಹಾವಭಾವ ಮನಸೂರೆಗೊಳಿಸುತ್ತದೆ. ಶಕ್ತಿ ದೇವಿಯ ಪರಮ ಆರಾಧಕರಾದ ಗೊಂದಲಿಗರು ಅಂಬಾಭವಾನಿಯನ್ನು ತಮ್ಮ ಆರಾಧ್ಯ ದೇವಿಯನ್ನಾಗಿಸಿಕೊಂಡಿರುವರು. ಹೀಗಾಗಿ ಇಡೀ ರಾತ್ರಿ ಕಥನ ಕಾವ್ಯಗಳ ಗಾಯನದ ಸಂದರ್ಭಗಳಲ್ಲಿ ದೇವಿಯ ಸಂದರ್ಭ ಬಂದಾಗ ಭಾವಪರವಶರಾಗುತ್ತಾರೆ.

‘ಗೊಂದಲಿಗರ ಸಂಸ್ಕೃತಿ ಇನ್ನುಳಿದ ಸಮುದಾಯದವರಿಗಿಂತ ಭಿನ್ನವಾಗಿದೆ. ಅವರು ವಿಶಿಷ್ಟ ಪರಂಪರೆಗೆ, ತಮ್ಮನ್ನು ದೇವಿಗೆ ಅರ್ಪಿಸಿಕೊಂಡಿರುವ ರೀತಿಯೇ ಅವರನ್ನು ಇಷ್ಟೊಂದು ಪ್ರಸಿದ್ಧಿಗೆ ತಂದಿದೆ’ ಎನ್ನುತ್ತಾರೆ ಬೀದರ್‌ನ ಗೋಂಧಳಿ ಸಮಾಜದ ಹಿರಿಯರಾದ ಸಿದ್ರಾಮ ವಾಘಮಾರೆ.

‘ಗೊಂದಲದ ರಾತ್ರಿ ತಮ್ಮ ತಂತಿವಾದ್ಯ ತುಂತುಣಿ ಹಾಗೂ ಸಮಾಳಗಳನ್ನು ಪೂಜಿಸಿ, ದೇವಿಗೆ ನತಮಸ್ತಕ ಮಣಿದು ಕಥೆಗಳನ್ನು ಆರಂಭಿಸುವ ವಾಡಿಕೆಯಿದೆ. ‌ಈಗ ಕೆಲ ಪುರುಷರು ಮಾತ್ರ ಈ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಮಹಿಳೆಯರು ಹೊಟ್ಟೆ ಪಾಡಿಗಾಗಿ ಹಳ್ಳಿಗಳಿಗೆ ಹೋಗಿ ಪಾತ್ರೆಗಳನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಕೋವಿಡ್‌ ಬಂದ ಮೇಲೆ ಅವರ ಬದುಕು ಇನ್ನಷ್ಟು ಕಷ್ಟವಾಗಿದೆ. ಸರ್ಕಾರ ಇವರ ನೆರವಿಗೂ ಬರಬೇಕು’ ಎಂದು ವಿಶ್ವನಾಥ ಚಿಟಗುಪ್ಪ ಮನವಿ ಮಾಡುತ್ತಾರೆ.

ಶಕ್ತಿ ದೇವತೆಗಳ ಸ್ತುತಿಸಿ ಗಾಯನ

ಗೊಂದಳಿಗರು ತುಳಜಾಪುರ ಅಂಬಾ ಭವಾನಿ, ಜಮದಗ್ನಿ, ರೇಣುಕಾ ಯಲ್ಲಮ್ಮ, ಮಾಪುರತಾಯಿ, ಮಹಾಲಕ್ಷ್ಮಿ ಮುಂತಾದ ಶಕ್ತಿ ದೇವತೆಗಳನ್ನು ಸ್ತುತಿಸುತ್ತ ತಮ್ಮ ಗಾಯನವನ್ನು ಮುಂದುವರಿಸುತ್ತಾರೆ. ಆಯಾ ಪ್ರದೇಶದ ದೇವಿಯರನ್ನು ಸ್ಮರಿಸುತ್ತ, ಭಕ್ತಿ ಪರಾಕಾಷ್ಠೆಯಿಂದ ಅವರನ್ನು ವೈವಿಧ್ಯಮಯವಾಗಿ ಮಹಾತ್ಮೆಯನ್ನು ವರ್ಣಿಸುತ್ತಾರೆ. ಪೌರಾಣಿಕ ಸಂದರ್ಭಗಳನ್ನು, ವಸ್ತುವನ್ನು, ಪ್ರಸಂಗವನ್ನು ಬಹು ಮಾರ್ಮಿಕವಾಗಿ ಸಮೀಕರಿಸಿದ ಹೇಳುವ ಕಲೆ ಇವರಿಗೆ ಕರಗತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.