ADVERTISEMENT

ಬೀದರ್‌: ಕಳ್ಳತನ ಮಾಡಿದ ಮಹಿಳೆ ಬಿಜೆಪಿ ಮುಖಂಡನ ಪತ್ನಿ

ಆರೋಪಿ ಪರವಾಗಿ ಪೊಲೀಸರಿಗೆ ರಾಜಕೀಯ ಮುಖಂಡರ ಕರೆ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2022, 14:48 IST
Last Updated 2 ಡಿಸೆಂಬರ್ 2022, 14:48 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೀದರ್‌: ರಾಜ್ಯದ ಸಚಿವರು ರೌಡಿಗಳನ್ನು ಭೇಟಿ ಮಾಡುತ್ತಿರುವ ವಿಷಯ ಬಿಜೆಪಿ ಹಾಗೂ ಕಾಂಗ್ರೆಸ್‌ ಮಧ್ಯೆ ವಾಕ್ಸಮರಕ್ಕೆ ಕಾರಣವಾಗಿರುವಾಗಲೇ ಬೀದರ್‌ ನಗರದಲ್ಲಿ ಬಿಜೆಪಿ ಮುಖಂಡರೊಬ್ಬರ ಪತ್ನಿ ಮದುವೆ ಮನೆಯಲ್ಲಿ ಕಳ್ಳತನ ಮಾಡಿ ಪಕ್ಷವನ್ನು ಮುಜುಗರಕ್ಕೆ ಸಿಲುಕಿಸಿದ್ದಾರೆ.

ನಾವದಗೇರಿಯ ಸಂತೋಷಿ ಶಿವರಾಜ ಕೊಳ್ಳೂರ ನಗರದ ಸಾಯಿ ಪುಷ್ಪಾಂಜಲಿ ಕಲ್ಯಾಣ ಮಂಟಪಕ್ಕೆ ಆಹ್ವಾನಿತರಂತೆ ಬಂದು ಮದುಮಕ್ಕಳ ಕೊಠಡಿಯೊಳಗೆ ನುಗ್ಗಿ ಚಿನ್ನಾಭರಣ ಕಳ್ಳತನ ಮಾಡಿ ಪರಾರಿಯಾಗಿದ್ದಳು. ಸಿಸಿಟಿವಿ ದೃಶ್ಯದಲ್ಲಿ ಕೃತ್ಯ ಸೆರೆಯಾಗಿ ಕೊನೆಗೂ ಸಿಕ್ಕಿ ಬಿದ್ದಿದ್ದಾಳೆ.

ಪೊಲೀಸರು ಸಂತೋಷಿಯನ್ನು ಬಂಧಿಸುತ್ತಿದ್ದಂತೆಯೇ ಬಿಜೆಪಿಯ ಕೆಲ ಮುಖಂಡರು ಪೊಲೀಸ್‌ ಅಧಿಕಾರಿಗಳಿಗೆ ಫೋನ್‌ ಮಾಡಿ ರಕ್ಷಣೆಗೆ ಮುಂದಾಗಿದ್ದಾರೆ. ಪೊಲೀಸರು ಆರೋಪಿಯಿಂದ ₹ 3.80 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡು, ಜೈಲಿಗೆ ಕಳಿಸಿದ್ದಾರೆ.

ADVERTISEMENT

ಮಹಿಳೆ ಬಂಧನದ ನಂತರ ಕಲ್ಯಾಣ ಮಂಟಪಗಳಲ್ಲಿ ನಡೆದ ಕಳ್ಳತನದ ಪ್ರಕರಣಗಳು ಹೊರ ಬರುತ್ತಿವೆ. ನಗರದಲ್ಲಿರುವ ನಾಮಾಂಕಿತ ಜವಳಿ ಅಂಗಡಿಗಳಲ್ಲೂ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಮುಖಂಡರು ಮಹಿಳೆಯ ಪರವಾಗಿ ಪೊಲೀಸರಿಗೆ ಕರೆ ಮಾಡಿ ಪ್ರಕರಣವನ್ನು ದುರ್ಬಲಗೊಳಿಸುವಂತೆ ಬೇಡಿಕೊಂಡಿರುವುದು ಗುಟ್ಟಾಗಿ ಉಳಿದಿಲ್ಲ.

ಪೊಲೀಸರು ಸಹ ಪತ್ರಿಕೆಗಳಿಗೆ ಪ್ರೆಸ್‌ನೋಟ್‌ ಕೊಟ್ಟಿಲ್ಲ. ಕಳ್ಳತನ ಮಾಡಿದ ಆರೋಪಿ ಇಲ್ಲದೇ ಚಿನ್ನಾಭರಣದೊಂದಿಗೆ ಪೊಟೊ ತೆಗೆಸಿಕೊಂಡಿದ್ದಾರೆ. ಬಂಧಿಸಿ ಠಾಣೆಗೆ ಕರೆದೊಯ್ದರೂ ಪೊಲೀಸರು ಆರೋಪಿಗೆ ರಾಜ ಮರ್ಯಾದೆ ಕೊಟ್ಟಿದ್ದಾರೆ ಎಂದು ಸಾರ್ವಜನಿಕರು ಆಡಿಕೊಳ್ಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.