ADVERTISEMENT

ರಾಜಕೀಯದಲ್ಲಿ ವೈಯಕ್ತಿಕ ಹಿತಾಸಕ್ತಿ ಇಲ್ಲ

ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ವಿಜಯಸಿಂಗ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2020, 7:07 IST
Last Updated 13 ಡಿಸೆಂಬರ್ 2020, 7:07 IST
ಔರಾದ್ ಪಟ್ಟಣದಲ್ಲಿ ಶನಿವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್, ಧುರೀಣ ಶಂಕರರಾವ ದೊಡ್ಡಿ, ಗೋಪಿಕೃಷ್ಣ, ಬಸವರಾಜ ದೇಶಮುಖ ಇದ್ದರು
ಔರಾದ್ ಪಟ್ಟಣದಲ್ಲಿ ಶನಿವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್, ಧುರೀಣ ಶಂಕರರಾವ ದೊಡ್ಡಿ, ಗೋಪಿಕೃಷ್ಣ, ಬಸವರಾಜ ದೇಶಮುಖ ಇದ್ದರು   

ಔರಾದ್: ‘ಇಲ್ಲಿ ನನಗೆ ರಾಜಕೀಯ ಮಾಡಿ ಸಾಧಿಸುವುದು ಏನೂ ಇಲ್ಲ. ಜನರ ಪ್ರೀತಿ, ಅಭಿಮಾನ ನನ್ನನ್ನು ಇಲ್ಲಿಗೆ ಎಳೆದು ತಂದಿದೆ. ನನ್ನ ರಾಜಕೀಯ ಜೀವನ ಶುರು ಆಗಿದ್ದು ಹಾಗೂ ವಿಧಾನ ಪರಿಷತ್ ಸದಸ್ಯನಾಗಿದ್ದು ಈ ಜಿಲ್ಲೆ ಯಿಂದಲೆ’ ಎಂದು ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್ ಹೇಳಿದರು.

ಪಟ್ಟಣದಲ್ಲಿ ಶನಿವಾರ ಗ್ರಾಮ ಪಂಚಾಯಿತಿ ಚುನಾವಣೆ ಅಂಗವಾಗಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

‘ಪಕ್ಷದಲ್ಲಿ ಗುಂಪುಗಾರಿಕೆ ನಿಲ್ಲಿಸಿ. ಇಂದಿನ ಸಭೆಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರೇ ಬಂದಿಲ್ಲ. ಹೀಗಾದರೆ ಪಕ್ಷ ಮುಂದೆ ಬರಲು ಹೇಗೆ ಸಾಧ್ಯ?’ ಎಂಬ ಮುಖಂಡ ಬಿ. ಪ್ರಲ್ಹಾದ್ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದ ವಿಜಯಸಿಂಗ್, ‘ಈ ಬಗ್ಗೆ ಕಾರ್ಯಕರ್ತರೇ ತೀರ್ಮಾನಿಸಬೇಕು’ ಎಂದರು.

ADVERTISEMENT

‘ನಾನು ಈ ಕ್ಷೇತ್ರದಲ್ಲಿ ಜನರ ಜತೆ ಹೊಂದಿದ ಉತ್ತಮ ಸಂಪರ್ಕ ಹಾಗೂ ಪಕ್ಷದ ಬೆಳವಣಿಗೆ ಹಿತದೃಷ್ಟಿಯಿಂದ ಗ್ರಾಮ ಪಂಚಾಯಿತಿ ಚುನಾವಣೆ ಉಸ್ತುವಾರಿ ವಹಿಸಿಕೊಟ್ಟಿದ್ದಾರೆ. ನನಗೆ ಯಾವುದೇ ಗುಂಪುಗಾರಿಕೆ ಗೊತ್ತಿಲ್ಲ. ಯಾವುದೇ ಅಪೇಕ್ಷೆ ಇಲ್ಲ. ಪಕ್ಷದ ಸಿದ್ಧಾಂತ ಹಿಡಿದು ನಡೆಯುವ ವ್ಯಕ್ತಿ. ಸಿದ್ಧಾಂತದ ಮೇಲೆ ಕೆಲಸ ಮಾಡುವವರ ಪರವಾಗಿ ಇದ್ದೇನೆ’ ಎಂದು ಹೇಳಿದರು.

ಧುರೀಣ ಶಂಕರರಾವ ದೊಡ್ಡಿ ಮಾತನಾಡಿ, ‘ಎಲ್ಲರೂ ಸೇರಿ ಗ್ರಾಮ ಪಂಚಾಯಿತಿ ಚುನಾವಣೆ ಎದುರಿಸ ಬೇಕಾಗಿದೆ. ಪ್ರಾಮಾಣಿಕ ಕಾರ್ಯ ಕರ್ತರನ್ನು ಗೆಲ್ಲಿಸಬೇಕು’ ಎಂದು ತಿಳಿಸಿದರು.

ಪಕ್ಷದ ತಾಲ್ಲೂಕು ಉಸ್ತುವಾರಿ ಗೋಪಿಕೃಷ್ಣ ಮಾತನಾಡಿ, ‘ತಾಲ್ಲೂಕಿನಲ್ಲಿ ಕಾಂಗ್ರೆಸ್‌ಗೆ ಉತ್ತಮ ಭವಿಷ್ಯ ಇದೆ. ಇಲ್ಲಿ ನಿಷ್ಠಾವಂತ ಕಾರ್ಯಕರ್ತರು ಇದ್ದಾರೆ. ಆದರೆ ಬಿಜೆಪಿ ಶಾಸಕರಿರುವ ಕಾರಣ ತೊಂದರೆಗೊಳಗಾಗಿದ್ದಾರೆ’ ಎಂದು ಅಭಿಪ್ರಾಯಪಟ್ಟರು.

ಬಸವರಾಜ ದೇಶಮುಖ, ಭೀಮಸೇನರಾವ ಸಿಂಧೆ, ರಾಮ ನರೋಟೆ, ಚೆನ್ನಪ್ಪ ಉಪ್ಪೆ, ರತಿಕಾಂತ ಮಜಗೆ, ಸುಧಾಕರ ಕೊಳ್ಳೂರ್, ಬಂಟಿ ದರಬಾರೆ, ದತ್ತಾತ್ರಿ ಬಾಪುರೆ, ಗುಂಡಪ್ಪ ಮುದಾಳೆ, ಅಮರ ಜಾಧವ್, ಶರಣಪ್ಪ ಪಾಟೀಲ, ದಿಗಂಬರ ಮಾಲೆ ಇದ್ದರು.

ಸಭೆಗೆ ಮುಖಂಡರ ಗೈರು; ಸದಸ್ಯರ ಆಕ್ಷೇಪ

ಔರಾದ್: ಇಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಕುಮಾರ ಹಲಬರ್ಗೆ ಸೇರಿದಂತೆ ಹಲವರ ಗೈರು ಎದ್ದು ಕಾಣುತ್ತಿತ್ತು.

ಈ ಕುರಿತು ಪ್ರಾಸ್ತಾಪಿಸಿದ ಮುಖಂಡ ಬಿ.ಪ್ರಲ್ಹಾದ್, ‘ಇದು ಗುಂಪುಗಾರಿಕೆಗೆ ಆಸ್ಪದ ಮಾಡಿಕೊಡುವಂತಿದೆ. ಇಂತಹದಕ್ಕೆ ಅವಕಾಶ ಕೊಡ ಬೇಡಿ’ ಎಂದು ಕೋರಿದರು.

ಎರಡು ದಿನದ ಹಿಂದೆ ವಿಜಯಸಿಂಗ್ ಹಾಗೂ ಅವರ ಅಭಿಮಾನಿಗಳ ಅನುಪಸ್ಥಿತಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಯಿತು. ಇಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಕುಮಾರ ಹಲಬರ್ಗೆ, ವಿಜಯಕುಮಾರ ಕೌಡಾಳೆ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮೀನಾಕ್ಷಿ ಸಂಗ್ರಾಮ, ಮಾಜಿ ಸಂಸದ ನರಸಿಂಗರಾವ ಸೂರ್ಯವಂಶಿ, ಜಿ.ಪಂ ಮಾಜಿ ಅಧ್ಯಕ್ಷೆ ಗೀತಾ ಚಿದ್ರಿ ಪಾಲ್ಗೊಂಡಿದ್ದರು. ಆದರೆ ಶನಿವಾರದ ಸಭೆಗೆ ಗೈರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.