ಕಮಲನಗರ: ತಾಲ್ಲೂಕಿನ ತೊರಣಾವಾಡಿ ಗ್ರಾಮದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದ್ದು, ಸಾಂಕ್ರಾಮಿಕ ರೋಗ ಭೀತಿ ಎದುರಾಗಿದೆ.
ತಾಲ್ಲೂಕಿನ ತೊರಣಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೊರಣಾವಾಡಿ ಗ್ರಾಮದಲ್ಲಿ ಸುಮಾರು 1,200 ಜನಸಂಖ್ಯೆಯಿದ್ದು, ನೈರ್ಮಲ್ಯದ ಕೊರತೆಯಿದೆ. ಕಾಲಿಟ್ಟ ಕಡೆ ಗಲೀಜು, ಅಸ್ವಚ್ಛತೆ ಹಾಗೂ ದುರ್ನಾತ, ಕೊಳಚೆ ನೀರು ಕಣ್ಣಿಗೆ ಬೀಳುತ್ತದೆ. ಮೂಗು ಮುಚ್ಚಿಕೊಂಡು ಓಡಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಕೊಳಚೆ ನೀರು ರಸ್ತೆಯಲ್ಲಿ ನಿಂತು ಗಬ್ಬು ನಾರುತ್ತಿದೆ. ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ಮಕ್ಕಳು, ವೃದ್ಧರು, ಮಹಿಳೆಯರು ಮಂದಿರ, ಶಾಲೆ ಹಾಗೂ ಇತರೆ ಕಡೆ ಕೊಳಚೆ ನೀರಿನಲ್ಲಿಯೇ ನಡೆದು ಹೋಗಬೇಕಾದ ಪರಿಸ್ಥಿತಿಯಿದೆ.
ಹಲವು ಕಡೆ ಸಮರ್ಪಕ ಸಿಸಿ ರಸ್ತೆ ಹಾಗೂ ಸೂಕ್ತ ಚರಂಡಿ ವ್ಯವಸ್ಥೆಯಿಲ್ಲ. ರಸ್ತೆ ಮೇಲೆ ಹುಲ್ಲು ಬೆಳೆದು ಹಾವು–ಚೇಳು ಓಡಾಡುತ್ತವೆ. ಬಡಾವಣೆಯ ನಾಗರಿಕರು ತಿರುಗಾಡಲು ಭಯಪಡುವ ಸ್ಥಿತಿಯಿದೆ.
ಸಾಕಷ್ಟು ಬಾರಿ ಚುನಾಯಿತ ಪ್ರತಿನಿಧಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಸೊಳ್ಳೆ ಹಾಗೂ ನೊಣಗಳ ಹಾವಳಿ ಹೆಚ್ಚಿದೆ ಎಂದು ಸ್ಥಳೀಯ ನಿವಾಸಿಗಳಾದ ಮಥುರಾಬಾಯಿ ಪೊಪಳೆ, ನಿರ್ಮಲಾ, ಕೊಮಲಬಾಯಿ ಲೋಹಾರ, ಮಂಜುಳಾ ಪ್ರದೀಪ್, ಕಲಾವತಿಬಾಯಿ ಪಂಢರಿ ಜಾಧವ, ಶೋಭಾಬಾಯಿ ಸೀತಾರಾಮ ರಾವಣಗಾವೆ, ಪಾರ್ವತಬಾಯಿ ದೀಪಕ, ಕಾಶಿನಾಥ ಸದಾಶಿವ, ಬಾಲಾಜಿ ಮಾರುತಿರಾವ ಹಾಗೂ ರಾಮ ವೆಂಕಟರಾವ ತಿಳಿಸಿದರು.
ಕೂಡಲೇ ಸಂಬಂಧಿಸಿದವರು ಗಮನಹರಿಸಿ ಗ್ರಾಮದಲ್ಲಿ ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕು. ಔಷಧ ಸಿಂಪಡಣೆ ಮಾಡಬೇಕು. ಮೂಲಸೌಕರ್ಯ ಒದಗಿಸಿಕೊಡಬೇಕು ಎಂದು ಹರಿದಾಸ ನಗರೆ, ಲಖನ ರಾವಣಗಾವೆ, ಭೀಮರಾವ ಕಸ್ತೂರೆ, ರಾಜಪ್ಪ ಕಾಶಿನಾಥ ತಾಂಬೋಳೆ ಹಾಗೂ ಧನಾಜಿ ಪ್ರಲ್ಹಾದರಾವ ಆಗ್ರಹಿಸಿದ್ದಾರೆ.
ತೊರಣಾವಾಡಿ ಗ್ರಾಮದ ಚರಂಡಿ ಸ್ವಚ್ಛ ಮಾಡಿಸಲು ಸಂಬಂಧಿಸಿದ ಅಧಿಕಾರಿಗಳು ಮುಂದಾಗಬೇಕು. ಹೊಸ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಿಸಲು ಯೋಜನೆ ರೂಪಿಸಬೇಕುಶ್ರೀಮಂತ ಮುಕಿಂದರಾವ ಗ್ರಾಮಸ್ಥ
ತೊರಣಾವಾಡಿ ಗ್ರಾಮದಲ್ಲಿ ಸ್ವಚ್ಛತೆಗೆ ಕ್ರಮ ಕೈಗೊಳ್ಳಲಾಗುವುದು. ನರೇಗಾ ಯೋಜನೆಯಡಿ ಸಿಮೆಂಟ್ ರಸ್ತೆ ಚರಂಡಿ ಕಾಮಗಾರಿಗಳನ್ನು ಕ್ರಿಯಾ ಯೋಜನೆಗಳಲ್ಲಿ ಇಟ್ಟುಕೊಂಡು ಕಾಮಗಾರಿ ಕೈಗೊಳ್ಳಲಾಗುವುದುಮಲ್ಲೇಶ ಮಾರುತಿ ಪಿಡಿಒ ತೊರಣಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.