
ಬೀದರ್: ‘ಮೊಬೈಲ್, ಸಿನಿಮಾ ಹಾವಳಿಯಿಂದ ಪಾರಂಪರಿಕ ಕಲೆಗಳು ನಶಿಸಿ ಹೋಗುತ್ತಿವೆ’ ಎಂದು ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ದುರ್ಗಾದಾಸ ತಿಳಿಸಿದರು.
ಕರ್ನಾಟಕ ಬಯಲಾಟ ಅಕಾಡೆಮಿ ಹಾಗೂ ಅಕ್ಕಮಹಾದೇವಿ ಮಹಿಳಾ ಕಾಲೇಜಿನ ಕನ್ನಡ ವಿಭಾಗದ ಸಹಯೋಗದಲ್ಲಿ ನಗರದ ಅಕ್ಕಮಹಾದೇವಿ ಕಾಲೇಜಿನಲ್ಲಿ ಮಂಗಳವಾರ ಏರ್ಪಡಿಸಿದ್ದ ‘ಕಲ್ಯಾಣ ಕರ್ನಾಟಕ ಬಯಲಾಟಗಳು’ ಕುರಿತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
1980ರಲ್ಲಿ ಬೀದರ್ ಜಿಲ್ಲೆಯ ವಿವಿಧೆಡೆ ದೊಡ್ಡಾಟ ತಂಡಗಳಿದ್ದವು. ಈಗ ಜಿಲ್ಲೆಯಲ್ಲಿ ಒಂದು ತಂಡವೂ ಸಹ ಇಲ್ಲ. ಬಯಲಾಟ ಬರೀ ರಂಜನೆಯಷ್ಟೇ ಅಲ್ಲ, ಅದರಲ್ಲಿ ಲೌಕಿಕ ಬದುಕಿಗೆ ಅಗತ್ಯವಾದ ಮೌಲಿಕ ನೀತಿ ತತ್ವಗಳು ಅಡಗಿವೆ. ಇಂತಹ ಅಪರೂಪದ ಕಲೆಗಳು ಇಂದಿನ ಯುವ ಪೀಳಿಗೆಗೆ ಉಳಿಸುವ ಕೆಲಸ ಮಾಡಬೇಕಿದೆ ಎಂದರು.
ಜಾನಪದ ವಿದ್ವಾಂಸ ವೀರಣ್ಣ ದಂಡೆ ಉದ್ಘಾಟಿಸಿ ಮಾತನಾಡಿ, 'ಅಳಿವಿನಂಚಿನಲ್ಲಿರುವ ಜಾನಪದ ಕಲೆ, ಸಂಸ್ಕೃತಿಯನ್ನು ಯುವ ಜನಾಂಗಕ್ಕೆ ತಲುಪಿಸುವ ಕೆಲಸ ಆಗಬೇಕಾಗಿದೆ. ಬಯಲಾಟದಲ್ಲಿ ಬೀದಿ ಬಯಲಾಟ ಎಂಬ ಪ್ರಕಾರವು ಬೀದರ್ ಜಿಲ್ಲೆಯ
ಕೊಡುಗೆಯಾಗಿದೆ' ಎಂದು ಸ್ಮರಿಸಿದರು.
'ಆಧುನಿಕತೆಯ ಭರಾಟೆಯಲ್ಲಿ ನಮ್ಮತನ ಮರೆಯುತ್ತಿದ್ದೇವೆ. ಇಂದಿನ ಸಾಮಾಜಿಕ ಮಾಧ್ಯಮಗಳಿಂದ ಮುಂದೊಂದು ದಿನ ಬೇಸತ್ತು ಪುನಃ ಹಳೆಯ ಕಲೆ, ಸಂಸ್ಕೃತಿಗೆ ಮರಳುವ ಕಾಲ ದೂರವಿಲ್ಲ ಎಂದು ನುಡಿದರು.
ಸಂಸ್ಕೃತಿ ಚಿಂತಕಿ ಮೀನಾಕ್ಷಿ ಬಾಳಿ ಮಾತನಾಡಿ, 'ರಾಜ್ಯದ 15 ಜಿಲ್ಲೆಗಳಲ್ಲಿ ಬಯಲಾಟ ಕಲೆ ಜೀವಂತವಿದೆ. ಆದರೆ, ಉಳಿದ ಕಲೆಗೆ ದೊರೆತ ಆಧುನಿಕ ಸ್ಪರ್ಶ ಬಯಲಾಟ ಕಲೆಗೆ ದಕ್ಕಿಲ್ಲ' ಎಂದು ಬೇಸರ ವ್ಯಕ್ತಪಡಿಸಿದರು
ಕನ್ನಡ ವಿಭಾಗದ ಮುಖ್ಯಸ್ಥೆ ಗಂಗಾಂಬಿಕಾ ಪಾಟೀಲ್ ಮಾತನಾಡಿ, ಜಾತಿ, ಮತ ಭೇದಗಳಿಲ್ಲದೆ ಸಮಾಜದಲ್ಲಿ ಸಮಾನತೆ ಬೀಜ ಬಿತ್ತುವ ಜಾನಪದ ಕಲೆ, ಸಾಹಿತ್ಯ, ಸಂಸ್ಕೃತಿ ಉಳಿಸುವುದು ಅಗತ್ಯ. ಕಲೆ ಸಾಹಿತ್ಯದಿಂದ ಮನುಷ್ಯನ ಒತ್ತಡದ ಬದುಕು ನಿವಾರಣೆ ಆಗಬಲ್ಲದು ಎಂದರು.
ಅಕ್ಕಮಹಾದೇವಿ ಮಹಿಳಾ ಕಾಲೇಜಿನ ಪ್ರಾಚಾರ್ಯೆ ರಂಜನಾ ಪಾಟೀಲ್ ಮಾತನಾಡಿದರು. ‘ದೊಡ್ಡಾಟಗಳಲ್ಲಿ ಗ್ರಾಮೀಣ ಸಂಸ್ಕೃತಿ’ ಕುರಿತು ಪ್ರೊ. ಸಾರಿಕಾದೇವಿ ಕಾಳಗಿ, ‘ಬೀದರ್ ಜಿಲ್ಲೆಯ ಸಾಂಸ್ಕೃತಿಕ ಪರಿಸರ’ದ ಬಗ್ಗೆ ಪ್ರಾಧ್ಯಾಪಕಿ ಜಯದೇವಿ ಗಾಯಕವಾಡ್ ಮಾತನಾಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ಇದ್ದರು. ಉಪನ್ಯಾಸಕಿ ಮಹಾದೇವಿ ನಿರೂಪಿಸಿದರು. ಉಪನ್ಯಾಸಕಿ ಅಂಬಿಕಾ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.