ADVERTISEMENT

ಭಾಲ್ಕಿಯಲ್ಲಿ ಹೆಚ್ಚುತ್ತಿದೆ ದಟ್ಟಣೆ: ಸುಗಮ ಓಡಾಟಕ್ಕೆ ಬೇಕಿದೆ ‘ಸಂಚಾರ ಠಾಣೆ’

ಸಂಚಾರ ಪೊಲೀಸ್‌ ಠಾಣೆ ಸ್ಥಾಪನೆಗೆ ಹೆಚ್ಚಿದ ಒತ್ತಡ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2024, 7:32 IST
Last Updated 3 ಫೆಬ್ರುವರಿ 2024, 7:32 IST
ಭಾಲ್ಕಿಯ ಮಹಾತ್ಮ ಗಾಂಧಿ ವೃತ್ತದಲ್ಲಿರುವ ಟ್ರಾಫಿಕ್‌ ಸಿಗ್ನಲ್‌ ಲೈಟ್‌ಗಳು ಬಂದ್‌ ಆಗಿದ್ದು, ಯುವಕರು ಹೆಲ್ಮೆಟ್‌ ಧರಿಸಿದೇ ಸಂಚರಿಸಿದರು
ಭಾಲ್ಕಿಯ ಮಹಾತ್ಮ ಗಾಂಧಿ ವೃತ್ತದಲ್ಲಿರುವ ಟ್ರಾಫಿಕ್‌ ಸಿಗ್ನಲ್‌ ಲೈಟ್‌ಗಳು ಬಂದ್‌ ಆಗಿದ್ದು, ಯುವಕರು ಹೆಲ್ಮೆಟ್‌ ಧರಿಸಿದೇ ಸಂಚರಿಸಿದರು   

ಭಾಲ್ಕಿ: ಪಟ್ಟಣದಲ್ಲಿ ವರ್ಷದಿಂದ ವರ್ಷಕ್ಕೆ ಜನಸಂಖ್ಯೆ ಹಾಗೂ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. ಇದರೊಂದಿಗೆ ರಸ್ತೆ ನಿಯಮ ಉಲ್ಲಂಘನೆಯೂ ಜಾಸ್ತಿಯಾಗಿದ್ದು, ಅಪಘಾತಗಳಿಗೆ ಕಾರಣವಾಗುತ್ತಿದೆ. ಸುಗಮ, ಸುರಕ್ಷಿತ, ಅಪಘಾತ ರಹಿತ ಸಂಚಾರಕ್ಕೆ ಪಟ್ಟಣದಲ್ಲಿ ಸಂಚಾರ ಪೊಲೀಸ್‌ ಠಾಣೆ ಸ್ಥಾಪಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಸುಮಾರು 87 ಸಾವಿರ ದ್ವಿಚಕ್ರ, 4,678 ಕಾರು ಸೇರಿದಂತೆ ಬಸ್‌, ಸರಕು ಸಾಗಣೆ, ಟ್ಯಾಕ್ಸಿ ವಾಹನಗಳ ಸಂಖ್ಯೆ ಒಳಗೊಂಡು ಒಟ್ಟು 12,390 ಸಾರಿಗೆ ವಾಹನಗಳು ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ನೋಂದಣಿಯಾಗಿವೆ.

ಖಾಸಗಿ ಹಣಕಾಸು ಸಂಸ್ಥೆಗಳಿಂದ ಸಾಲ ಸಿಗುತ್ತಿರುವ ಕಾರಣ ಮಧ್ಯಮ ವರ್ಗದ ಜನರು ದ್ವಿಚಕ್ರ ವಾಹನ, ಕಾರು ಖರೀದಿಗೆ ಆಸಕ್ತಿ ತೋರುತ್ತಿದ್ದಾರೆ. ‘ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ ವಾಹನಗಳ ಸಂಖ್ಯೆಯಲ್ಲಿ ಅಂದಾಜು 46ರಷ್ಟು ಹೆಚ್ಚಾಗಿದೆ ಎಂದು ಆರ್‌ಟಿಒ ಕಚೇರಿಯ ಮಹಾದೇವ ಹೇಳುತ್ತಾರೆ.

ADVERTISEMENT

ಪಟ್ಟಣದ ಶಿವಾಜಿ ವೃತ್ತದ ರೈಲ್ವೆಗೇಟ್‌, ಅಂಬೇಡ್ಕರ್‌ ವೃತ್ತ, ಮಹಾತ್ಮಗಾಂಧಿ, ಬಸವೇಶ್ವರ, ಜ್ಯೋತಿಬಾ ಫುಲೆ, ವಿವೇಕಾನಂದ ವೃತ್ತ, ಆರ್‌ಟಿಒ ಕಚೇರಿ ಮುಂಭಾಗದ ಸ್ಥಳಗಳಲ್ಲಿ ಜನ ಹಾಗೂ ವಾಹನಗಳ ದಟ್ಟಣೆ ಕಂಡುಬರುತ್ತಿದೆ. ಈ  ಸ್ಥಳಗಳಲ್ಲೇ ರಸ್ತೆ ಅಪಘಾತಗಳು ಹೆಚ್ಚು ಸಂಭವಿಸುತ್ತಿವೆ.

‘ಸಂಚಾರ ಪೊಲೀಸ್‌ ಠಾಣೆ ಇಲ್ಲದಿರುವುದರಿಂದ ಹಲವು ವಾಹನ ಚಾಲಕರು, ಬೈಕ್‌ ಸವಾರರು ರಸ್ತೆ ಸಂಚಾರ ನಿಯಮ ಪಾಲಿಸುತ್ತಿಲ್ಲ. ನಿಯಮಗಳ ಭಯವಿಲ್ಲದೇ ವಾಹನಗಳನ್ನು ಓಡಿಸುತ್ತಿದ್ದಾರೆ. ಹೆಲ್ಮೆಟ್‌ ಧರಿಸದೆ, ಸೀಟ್‌ ಬೆಲ್ಟ್‌ ಹಾಕಿಕೊಳ್ಳದೆ, ಮೂರ್ಮೂರು ಜನರು ಬೈಕ್‌ಗಳಲ್ಲಿ ಸಂಚರಿಸುತ್ತಿದ್ದಾರೆ. ಇದರಿಂದ ಪಾದಚಾರಿಗಳಿಗೆ, ಸಾರ್ವಜನಿಕರಿಗೆ ಜೀವಭಯ ಸಹಜವಾಗಿಯೇ ಕಾಡುತ್ತಿದೆ’ ಎನ್ನುತ್ತಾರೆ ವಕೀಲ ಮಹೇಶ ರಾಚೋಟೆ.

‘ಕೆಲವೆಡೆ ಟ್ರಾಫಿಕ್‌ ಸಿಗ್ನಲ್‌ಗಳಿದ್ದರೂ, ಅವು ಕಾರ್ಯನಿರ್ವಹಿಸುತ್ತಿಲ್ಲ. ಇನ್ನೂ ಪಟ್ಟಣದ ಹಲವೆಡೆಯ ಪಾರ್ಕಿಂಗ್‌ ಸ್ಥಳವೂ ಅಂಗಡಿ ಮಾಲೀಕರು ಸೇರಿದಂತೆ ಬೀದಿ ಬದಿ ವ್ಯಾಪಾರಿಗಳು ಆಕ್ರಮಿಸಿಕೊಂಡಿದ್ದಾರೆ. ಹಾಗಾಗಿ, ಸಹಜವಾಗಿಯೇ ಸಂಚಾರ ದಟ್ಟಣೆ ಸಮಸ್ಯೆ ಹೆಚ್ಚಿದೆ. ಸುರಕ್ಷಿತ ಪ್ರಯಾಣ, ಸುಗಮ ಸಂಚಾರ ಜನಸಾಮಾನ್ಯರಿಗೆ ಗಗನ ಕುಸುಮವಾಗಿದೆ’ ಎಂದು ಪುರಸಭೆ ಸದಸ್ಯ ಪ್ರವೀಣ ಸಾವರೆ ಅಸಮಾಧಾನ ವ್ಯಕ್ತಪಡಿಸಿದರು.

ಪೊಲೀಸ್‌ ಸಿಬ್ಬಂದಿ ಕೊರತೆ ಕೂಡ ಸುಗಮ ಸಂಚಾರಕ್ಕೆ ತೊಡಕಾಗಿದೆ. ಕೂಡಲೇ ಜನಪ್ರತಿನಿಧಿ, ಅಧಿಕಾರಿಗಳು ವಿಶೇಷ ಮುತುವರ್ಜಿ ವಹಿಸಿ ಸಂಚಾರ ಪೊಲೀಸ್‌ ಠಾಣೆ ಸ್ಥಾಪನೆಗೆ ನೆರವಾಗಬೇಕು ಎಂದು ಪಟ್ಟಣ ವಾಸಿಗಳು ಒತ್ತಾಯಿಸಿದ್ದಾರೆ.

ಭಾಲ್ಲಿ ಪಟ್ಟಣದ ಪ್ರಮುಖ ವೃತ್ತಗಳ ಸುತ್ತಲಿನ ಪಾರ್ಕಿಂಗ್‌ ಸ್ಥಳ ಒತ್ತುವರಿ ಆಗಿದೆ. ಇದರಿಂದ ಮತ್ತಷ್ಟು ಜನದಟ್ಟಣೆ ಉಂಟಾಗಿ ರಸ್ತೆ ಅಪಘಾತದ ಭಯ ಜನರನ್ನು ಕಾಡುತ್ತಿದೆ
ಪ್ರವೀಣ ಸಾವರೆ ಪುರಸಭೆ ಸದಸ್ಯ
ಬೀದರ್‌ ಹೊರತು ಪಡಿಸಿದರೆ ಹೆಚ್ಚಿನ ಜನಸಂಖ್ಯೆ ಭಾಲ್ಕಿಯಲ್ಲಿದೆ. ಸುಗಮ ಹಾಗು ಸುರಕ್ಷಿತ ಸಂಚಾರದ ದೃಷ್ಟಿಯಿಂದ ಪಟ್ಟಣದಲ್ಲಿ ಶೀಘ್ರವೇ ಸಂಚಾರ ಪೊಲೀಸ್‌ ಠಾಣೆ ಸ್ಥಾಪಿಸಬೇಕು
ಮಹೇಶ ರಾಚೋಟೆ ವಕೀಲ
ಸಂಚಾರ ಪೊಲೀಸ್‌ ಠಾಣೆ ಸ್ಥಾಪನೆ ಸಂಬಂಧ ಈಗಾಗಲೇ ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಲು ಪ್ರಯತ್ನಿಸುತ್ತಿದ್ದೇವೆ
ಶಿವಾನಂದ ಪವಾಡಶೆಟ್ಟಿ ಡಿವೈಎಸ್ಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.