ADVERTISEMENT

ಔರಾದ್ | ಒಳಮೀಸಲು ಸಮೀಕ್ಷೆ: ಗಣತಿದಾರರಿಗೆ ತರಬೇತಿ

​ಪ್ರಜಾವಾಣಿ ವಾರ್ತೆ
Published 3 ಮೇ 2025, 14:22 IST
Last Updated 3 ಮೇ 2025, 14:22 IST
ಔರಾದ್ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಸಮೀಕ್ಷೆಗೆ ನಿಯೋಜನೆಗೊಂಡ ಗಣತಿದಾರರಿಗೆ ತರಬೇತಿ ನೀಡಲಾಯಿತು
ಔರಾದ್ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಸಮೀಕ್ಷೆಗೆ ನಿಯೋಜನೆಗೊಂಡ ಗಣತಿದಾರರಿಗೆ ತರಬೇತಿ ನೀಡಲಾಯಿತು   

ಔರಾದ್: ಪ್ರಸಕ್ತ ಸಾಲಿನ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಕುರಿತಾದ ಸಮೀಕ್ಷೆಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ ಅವರ ವಿಚಾರಣಾ ಆಯೋಗದ ನಿರ್ದೇಶನದಂತೆ ತಾಲ್ಲೂಕಿನ ಗಣತಿ ಕಾರ್ಯದ ಸಿಬ್ಬಂದಿಗೆ ತರಬೇತಿ ನೀಡಲಾಯಿತು.

ಪಟ್ಟಣದ ಪತ್ರಿಸ್ವಾಮಿ ಕಾಲೇಜಿನಲ್ಲಿ ಶುಕ್ರವಾರ 232 ಹಾಗೂ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ 23 ಸೇರಿದಂತೆ 255 ಗಣತಿದಾರರಿಗೆ ತರಬೇತಿ ನೀಡಲಾಯಿತು. ಪರಿಶಿಷ್ಟ ಜಾತಿಯಲ್ಲಿರುವ 101 ಉಪ ಜಾತಿಗಳ ಸಾಮಾಜಿಕ ಶೈಕ್ಷಣಿಕ ಹಾಗೂ ಆರ್ಥಿಕ ಸ್ಥಿತಿಗತಿ ದಾಖಲಿಸುವ ಸಮೀಕ್ಷೆ ಇದಾಗಿದೆ. ಔರಾದ್ ವಿಧಾನಸಭಾ ಕ್ಷೇತ್ರದ ಒಟ್ಟು 255 ಬೂತ್‌ಗಳ ಮನೆಮನೆಗೆ ಹೋಗಿ ಸಮೀಕ್ಷೆ ನಡೆಸಲಾಗುತ್ತದೆ. ಸಮೀಕ್ಷೆ ವೇಳೆ ಪರಿಶಿಷ್ಟ ಜಾತಿ ವ್ಯಕ್ತಿಯ ಒಟ್ಟು 42 ಪ್ರಶ್ನಾವಳಿ ದಾಖಲಿಸಬೇಕಾಗುತ್ತದೆ. ಈ ಕುರಿತು ಗಣಿತ ಸಿಬ್ಬಂದಿಗೆ ಪೂರ್ಣ ಮಾಹಿತಿ ನೀಡಲಾಗಿದೆ.

ಒಟ್ಟು ಮೂರು ಹಂತದಲ್ಲಿ ಸಮೀಕ್ಷೆ ನಡೆಯಲಿದೆ. ಮೇ 5 ರಿಂದ 17ರವರೆಗೆ ಮನೆ ಮನೆಗೆ ಸಮೀಕ್ಷೆ, ಮೇ 18ರಿಂದ 21ವರೆಗೆ ಆಯಾ ಬೂತ್‌ನಲ್ಲಿ ಸಮೀಕ್ಷೆ, ಮೇ 22ರಿಂದ 25ರ ವರೆಗೆ ಆನ್‌ಲೈನ್‌ಲ್ಲೂ ಸಮೀಕ್ಷೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ತಾಲ್ಲೂಕು ಮಟ್ಟದ ಪರಿಶಿಷ್ಟ ಜಾತಿ ಒಳ ಮೀಸಲಾತಿ ವರ್ಗೀಕರಣ ಸಮನ್ವಯ ಸಮಿತಿ ಕಾರ್ಯದರ್ಶಿ ಅನಿಲಕುಮಾರ ಮೇಲ್ದೊಡ್ಡಿ ತಿಳಿಸಿದರು.

ADVERTISEMENT

ಮಾಸ್ಟರ್ ಟ್ರೈನರ್ ಸೂರ್ಯಕಾಂತ ನಾಗೂರೆ, ಜಗನ್ನಾಥ ದೇಶಮುಖ, ಮಲ್ಲಿಕಾರ್ಜುನ ಟಂಕಸಾಲೆ, ಮಹಾದೇವಪ್ಪ, ಸತೀಶ ಬಿರಾದಾರ, ಸತೀಶ ಮಜಗೆ ಗಣತಿದಾರರಿಗೆ ತರಬೇತಿ ನೀಡಿದರು. ಶಿರಸ್ತೇದಾರ ವೆಂಕಟೇಶ, ಸಿಡಿಪಿಒ ಇಮಾಲಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಜೆ. ರಂಗೇಶ , ಪ್ರಾಂಶುಪಾಲ ಓಂಪ್ರಕಾಶ ದಡ್ಡೆ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.