ADVERTISEMENT

ಜನವಾಡ: ಕೊಳವೆಬಾವಿ ಮರುಪೂರಣ ಕೃಷಿಗೆ ಸಹಕಾರಿ

​ಪ್ರಜಾವಾಣಿ ವಾರ್ತೆ
Published 3 ಜುಲೈ 2021, 15:15 IST
Last Updated 3 ಜುಲೈ 2021, 15:15 IST

ಜನವಾಡ: ಕೊಳವೆಬಾವಿ ಮರುಪೂರಣವು ಕೃಷಿಗೆ ಸಹಕಾರಿಯಾಗಲಿದೆ ಎಂದು ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶನಾಲಯದ ಸಹಾಯಕ ಪ್ರಾಧ್ಯಾಪಕ ರಾಜಕುಮಾರ ಸಲಹೆ ಮಾಡಿದರು.

ಬೀದರ್ ತಾಲ್ಲೂಕಿನ ಜನವಾಡ ಸಮೀಪದ ಕೃಷಿ ವಿಜ್ಞಾನ ಕೇಂದ್ರವು ಕೆ.ವಿ.ಕೆ ಕೃಷಿ ಪಾಠಶಾಲೆ ಸರಣಿಯಲ್ಲಿ ಮಣ್ಣು ಮತ್ತು ನೀರು ಸಂರಕ್ಷಣೆ ತಾಂತ್ರಿಕತೆ ಹಾಗೂ ಕೊಳವೆಬಾವಿ ಮರುಪೂರಣ ವಿಧಾನ ಕುರಿತು ಶನಿವಾರ ರೈತರಿಗೆ ಆನ್‍ಲೈನ್‍ನಲ್ಲಿ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಣ್ಣಿನ ಸವಕಳಿ, ಹಳ್ಳಗಳ ಕೊರೆತ ತಡೆಗೆ ಇರುವ ವಿಧಾನ, ಮಣ್ಣು ಸಂರಕ್ಷಣೆ ವಿಧಾನಗಳಲ್ಲಿ ಬೇಸಾಯ ಮತ್ತು ತಾಂತ್ರಿಕ ಕ್ರಮಗಳು, ಚೌಕಮಡಿ, ಏರುಮಡಿ ಪದ್ಧತಿ, ಸಸ್ಯ ಹೊದಿಕೆ ಬಳಕೆ, ಕೃಷಿ ಹೊಂಡಗಳ ನಿರ್ಮಾಣ, ಮನೆ ಮೇಲ್ಛಾವಣಿ ಹಾಗೂ ಹೊಲಗಳಲ್ಲಿ ಮಳೆ ನೀರು ಕೊಯ್ಲು ವಿಧಾನ ಕುರಿತು ಛಾಯಾಚಿತ್ರ ಹಾಗೂ ವಿಡಿಯೊದೊಂದಿಗೆ ಮಾಹಿತಿ ನೀಡಿದರು.

ADVERTISEMENT

ಬೀದರ್ ಕೃಷಿ ವಿಜ್ಞಾನ ಕೇಂದ್ರವು ಕೆ.ವಿ.ಕೆ ಕೃಷಿ ಪಾಠಶಾಲೆ ಸರಣಿ ಮೂಲಕ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿದೆ. ವಿಶ್ವವಿದ್ಯಾಲಯ ಅಧೀನದ ಇನ್ನುಳಿದ ಕೃಷಿ ವಿಜ್ಞಾನ ಕೇಂದ್ರಗಳು ಕೂಡ ಈ ಕಾರ್ಯಕ್ರಮವನ್ನು ಅಳವಡಿಸಿಕೊಂಡಿವೆ ಎಂದು ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಮುಖ್ಯ ವಿಜ್ಞಾನಾಧಿಕಾರಿ ಡಾ. ಅರುಣಕುಮಾರ ಹೊಸಮನಿ ಹೇಳಿದರು.

ಬದಲಾಗುತ್ತಿರುವ ಹವಾಮಾನದ ಪರಿಣಾಮವಾಗಿ ಮಳೆ ಅಕಾಲಿಕ, ಅಸಮಾನ, ವಿಪರಿತ ಬೀಳುತ್ತಿದೆ. ಸುರಿದ ಮಳೆ ನೀರು ಭೂಮಿಯಲ್ಲಿ ಇಂಗಿಸಲು ಹಾಗೂ ಕೊಳವೆಬಾವಿಗಳ ಮರುಪೂರಣ ಮಾಡಲು ಅವಕಾಶ ಇದೆ. ಈ ಬಗ್ಗೆ ರೈತರಿಗೆ ಮಾಹಿತಿ ಒದಗಿಸುವುದಕ್ಕಾಗಿಯೇ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಸುನೀಲಕುಮಾರ ಎನ್.ಎಂ. ತಿಳಿಸಿದರು.

ತರಬೇತಿಯಲ್ಲಿ ರೈತರು ತಮ್ಮ ವಿವಿಧ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರು. ವಿವಿಧ ಜಿಲ್ಲೆಗಳ 75 ರೈತರು ತರಬೇತಿಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.