ADVERTISEMENT

ಇಬ್ಬರು ಅಭ್ಯರ್ಥಿಗಳಿಗೇ ಶೇ 94.36 ಮತ; ಠೇವಣಿ ಕಳೆದುಕೊಂಡ 20 ಅಭ್ಯರ್ಥಿಗಳು

ಚಂದ್ರಕಾಂತ ಮಸಾನಿ
Published 25 ಮೇ 2019, 19:45 IST
Last Updated 25 ಮೇ 2019, 19:45 IST
ಬೀದರ್‌ನ ಬಿ.ವಿ.ಬಿ ಕಾಲೇಜಿನಲ್ಲಿ ಸ್ಥಾಪಿಸಲಾಗಿದ್ದ ಮತ ಎಣಿಕೆ ಕೇಂದ್ರದ ಆವರಣದಲ್ಲೇ ಅಭಿಮಾನಿಯೊಬ್ಬರು ಬಿಜೆಪಿ ಸಂಸದ ಭಗವಂತ ಖೂಬಾ ಅವರನ್ನು ಹೆಗಲ ಮೇಲೆ ಹೊತ್ತುಕೊಂಡು ಅಭಿಮಾನ ಮೆರೆದ ಕ್ಷಣ
ಬೀದರ್‌ನ ಬಿ.ವಿ.ಬಿ ಕಾಲೇಜಿನಲ್ಲಿ ಸ್ಥಾಪಿಸಲಾಗಿದ್ದ ಮತ ಎಣಿಕೆ ಕೇಂದ್ರದ ಆವರಣದಲ್ಲೇ ಅಭಿಮಾನಿಯೊಬ್ಬರು ಬಿಜೆಪಿ ಸಂಸದ ಭಗವಂತ ಖೂಬಾ ಅವರನ್ನು ಹೆಗಲ ಮೇಲೆ ಹೊತ್ತುಕೊಂಡು ಅಭಿಮಾನ ಮೆರೆದ ಕ್ಷಣ   

ಬೀದರ್‌: ಬೀದರ್ ಲೋಕಸಭಾ ಕ್ಷೇತ್ರಕ್ಕೆ ನಡೆದ ಜಿದ್ದಾಜಿದ್ದಿನ ಹೋರಾಟದಲ್ಲಿ ಶೇಕಡ 94.36ರಷ್ಟು ಮತಗಳನ್ನು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್‌ ಪಡೆದುಕೊಂಡಿವೆ. ಚುನಾವಣಾ ಕಣದಲ್ಲಿದ್ದ ಉಳಿದ 20 ಅಭ್ಯರ್ಥಿಗಳಿಗೆ ಒಟ್ಟು ಶೇಕಡ 6 ರಷ್ಟು ಮತಗಳನ್ನು ಕೂಡ ಪಡೆಯಲು ಸಾಧ್ಯವಾಗಿಲ್ಲ. ಎಲ್ಲರೂ ಠೇವಣಿ ಕಳೆದುಕೊಂಡಿದ್ದಾರೆ.

ಬಿಜೆಪಿಯ ವಿಜೇತ ಅಭ್ಯರ್ಥಿ ಭಗವಂತ ಖೂಬಾ ಶೇಕಡ 52.41ರಷ್ಟು ಮತಗಳನ್ನು ಬಾಚಿಕೊಂಡರೆ, ಕಾಂಗ್ರೆಸ್‌ ಪರಾಜಿತ ಅಭ್ಯರ್ಥಿ ಈಶ್ವರ ಖಂಡ್ರೆ ಶೇಕಡ 41.95ರಷ್ಟು ಮತಗಳನ್ನು ಪಡೆದುಕೊಂಡಿದ್ದಾರೆ. ಕಾಂಗ್ರೆಸ್‌ಗೆ ಮಗ್ಗಲು ಮುಳ್ಳಾಗಿದ್ದ ಬಹುಜನ ಸಮಾಜ ಪಾರ್ಟಿಯ ಅಭ್ಯರ್ಥಿ ಎಸ್.ಎಚ್. ಬುಖಾರಿ ಶೇಕಡ 2 ರಷ್ಟು ಮತಗಳನ್ನು ಸಹ ಪಡೆಯುವಲ್ಲಿ ವಿಫಲವಾಗಿದ್ದಾರೆ.

ಬೀದರ್‌ ಲೋಕಸಭಾ ಕ್ಷೇತ್ರದಲ್ಲಿ ಇರುವ 17,73,912 ಮತದಾರರ ಪೈಕಿ 11,13,312 ಮತದಾರರು ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಿದ್ದರು. ಅದರಲ್ಲಿ ಭಗವಂತ ಖೂಬಾ 5,85,471 ಮತಗಳನ್ನು ಗಳಿಸಿದರೆ, ಈಶ್ವರ ಖಂಡ್ರೆ 4,68,637 ಮತಗಳನ್ನು ಪಡೆದಿದ್ದಾರೆ. 2014ರಲ್ಲಿ ನಡೆದ ಚುನಾವಣೆಯಲ್ಲಿ ಪಡೆದ ಮತಕ್ಕೆ ಹೋಲಿಸಿದರೆ ಖೂಬಾ ಅವರು ನರೇಂದ್ರ ಮೋದಿ ಅಲೆಯಲ್ಲಿ ಶೇಕಡ 4.40ರಷ್ಟು ಅಧಿಕ ಮತಗಳನ್ನು ಪಡೆಯುವ ಮೂಲಕ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡಿದ್ದಾರೆ.

ADVERTISEMENT

1971ರಲ್ಲಿ ಎನ್‌ಸಿಜೆ ಅಭ್ಯರ್ಥಿ ಶಂಕರದೇವ ಬಾಲಾಜಿರಾವ್‌ ಅವರು ಶೇಕಡ 76.34 ರಷ್ಟು ಮತ ಪಡೆದು ಪ್ರತಿಸ್ಪರ್ಧಿ ಅಭ್ಯರ್ಥಿಗಳ ನಿದ್ದೆಗೆಡಿಸಿದ್ದರೆ, 1980ರಲ್ಲಿ ಕಾಂಗ್ರೆಸ್‌ನ ನರಸಿಂಗ್‌ರಾವ್‌ ಹುಲ್ಲಾ ಸೂರ್ಯವಂಶಿ ಶೇಕಡ 59.50 ರಷ್ಟು ಮತ ಪಡೆದು ಪ್ರತಿಸ್ಪರ್ಧಿಳು ನಿಬ್ಬೆರಗಾಗುವಂತೆ ಮಾಡಿದ್ದರು. ಈ ಬಾರಿಯ ಚುನಾವಣೆಯಲ್ಲಿ ಭಗವಂತ ಖೂಬಾ ಅವರು ಚಲಾವಣೆಯಾದ ಮತಗಳಲ್ಲಿ ಅರ್ಧಕ್ಕೂ ಹೆಚ್ಚು ಮತಗಳನ್ನು ಪಡೆದಿದ್ದಾರೆ.

ಹುಸಿಯಾದ ನಿರೀಕ್ಷೆ

ಕಾಂಗ್ರೆಸ್‌ ಹೈಕಮಾಂಡ್ ಅಳೆದು ತೂಗಿ ಬೀದರ್‌ ಲೋಕಸಭಾ ಕ್ಷೇತ್ರದಿಂದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರನ್ನು ಕಣಕ್ಕೆ ಇಳಿಸಿತ್ತು. ಕಾಂಗ್ರೆಸ್ ಮುಖಂಡರು ಈಶ್ವರ ಖಂಡ್ರೆ ಅವರನ್ನು ಗೆಲ್ಲುವ ಕುದುರೆ ಎಂದೇ ಭಾವಿಸಿದ್ದರು. ಆದರೆ ಈ ಚುನಾವಣೆಯಲ್ಲಿ ಭಾಲ್ಕಿ ವಿಧಾನಸಭಾ ಕ್ಷೇತ್ರದ ಜನರೂ ಕೈಕೊಟ್ಟಿರುವುದು ಕಾಂಗ್ರೆಸ್‌ ನಾಯಕರಲ್ಲಿ ಅಚ್ಚರಿ ಮೂಡಿಸಿದೆ.
ಭಾಲ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಸತತ ಮೂರನೇ ಬಾರಿಗೆ ಶಾಸಕರಾಗಿರುವ ಈಶ್ವರ ಖಂಡ್ರೆ ಅವರು 67,151 ಮತಗಳನ್ನು ಪಡೆದರೆ, ಭಗವಂತ ಖೂಬಾ ಅವರು 79,414 ಪಡೆದಿದ್ದಾರೆ. ಖಂಡ್ರೆ ಅವರಿಗೆ 12,263 ಮತಗಳು ಕಡಿಮೆ ಬಂದಿವೆ.

1,948 ನೋಟಾ ಚಲಾವಣೆ

ಬೀದರ್‌ ಲೋಕಸಭಾ ಕ್ಷೇತ್ರದ 1,948 ಮತದಾರರು ಎಲ್ಲ 22 ಅಭ್ಯರ್ಥಿಗಳ ವಿರುದ್ಧ ನೋಟಾ ಚಲಾಯಿಸಿದ್ದಾರೆ. ಚುನಾವಣೆ ಕಣದಲ್ಲಿರುವ ಯಾರೊಬ್ಬರೂ ಸಮರ್ಥರಲ್ಲ ಎನ್ನುವ ಸಂದೇಶ ನೀಡಲು ಪ್ರಯತ್ನಿಸಿದ್ದಾರೆ. ಬೀದರ್‌ ಜಿಲ್ಲೆಯ ಹುಮಬಾದ್‌ (ವಿಧಾನಸಭಾ ಕ್ಷೇತ್ರದಲ್ಲೇ ಅಧಿಕ ಮತದಾರರು ನೋಟಾ ಚಲಾಯಿಸಿದ್ದಾರೆ.

ಚಿಂಚೋಳಿ ವಿಧಾನಸಭಾ ಕ್ಷೇತ್ರದಲ್ಲಿ 255, ಆಳಂದದಲ್ಲಿ 271, ಬಸವಕಲ್ಯಾಣದಲ್ಲಿ 192, ಹುಮನಾಬಾದ್‌ದಲ್ಲಿ 287, ಬೀದರ್ ದಕ್ಷಿಣದಲ್ಲಿ 204, ಬೀದರ್‌ನಲ್ಲಿ 276, ಭಾಲ್ಕಿಯಲ್ಲಿ 231 ಹಾಗೂ ಔರಾದ್‌ನಲ್ಲಿ 230 ಮತದಾರರು ನೋಟಾ ಚಲಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.