ADVERTISEMENT

ಹುಮನಾಬಾದ್‌ ಪುರಸಭೆ ಸಾಮಾನ್ಯ ಸಭೆ- ಅನಧಿಕೃತ ಕಟ್ಟಡ: ಕ್ರಮಕ್ಕೆ ಸೂಚನೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2021, 3:57 IST
Last Updated 22 ಜೂನ್ 2021, 3:57 IST
ಹುಮನಾಬಾದ್ ಪಟ್ಟಣದ ಪುರಸಭೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಶಾಸಕ ರಾಜಶೇಖರ ಪಾಟೀಲ ಮಾತನಾಡಿದರು
ಹುಮನಾಬಾದ್ ಪಟ್ಟಣದ ಪುರಸಭೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಶಾಸಕ ರಾಜಶೇಖರ ಪಾಟೀಲ ಮಾತನಾಡಿದರು   

ಹುಮನಾಬಾದ್: ‘ಪಟ್ಟಣದಲ್ಲಿ ಅನಧಿಕೃತವಾಗಿ ಕಟ್ಟಡ ನಿರ್ಮಾಣ ಮಾಡುತ್ತಿರುವ ದೂರುಗಳು ಬರುತ್ತಿವೆ. ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಳ್ಳುತ್ತಿರುವ ವ್ಯಕ್ತಿಗಳ ವಿರುದ್ಧ ಕಾನೂನಿನ ಕ್ರಮ ಕೈಗೊಳ್ಳಬೇಕು’ ಎಂದು ಶಾಸಕ ರಾಜಶೇಖರ ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದ ಪುರಸಭೆಯಲ್ಲಿ ಸೋಮವಾರ ನಡೆದ ಪ್ರಥಮ ಸಭೆಯಲ್ಲಿ ಅವರು ಮಾತನಾಡಿದರು.

‘ಕೊಳಚೆ ಪ್ರದೇಶ ನಿವಾಸಿಗಳಿಗಾಗಿ ಸರ್ಕಾರದಿಂದ ಬಂದಿರುವ 400 ಮನೆಗಳನ್ನು ಆಶ್ರಯ ಕಾಲೊನಿ ಹತ್ತಿರವಿರುವ ಸ್ಥಳದಲ್ಲಿ ಒಂದೇ ಕಡೆ ಎಲ್ಲಾ ಮೂಲ ಸೌಲಭ್ಯಗಳಿಂದ ನಿರ್ಮಿಸಿದರೆ ಅನುಕೂಲವಾಗಲಿದೆ’ ಎಂಬ ಶಾಸಕರ ಮಾತಿಗೆ ಎಲ್ಲಾ ಸದಸ್ಯರು ಒಮ್ಮತದಿಂದ ಸಮ್ಮತಿಸಿದರು.

ADVERTISEMENT

‘2005ರಿಂದ ಇಲ್ಲಿಯವರೆಗೆ ಪಟ್ಟಣದಲ್ಲಿ 47 ಲೇಔಟ್‌ಗಳಿಗೆ ಅನುಮತಿ ನೀಡಲಾಗಿದ್ದು, ಅವುಗಳಲ್ಲಿ ಕೈಗೊಂಡಿರುವ ಅಭಿವೃದ್ಧಿಯ ಸಾಧಕಬಾಧಕ ಪರಿಶೀಲಿಸಿ, ಅಲ್ಲಿನ ಸಿ.ಎ. ಸೈಟ್, ಉದ್ಯಾನದ ಸ್ಥಳಗಳಿಗೆ ಪುರಸಭೆಯಿಂದ ಸುತ್ತುಗೋಡೆ ನಿರ್ಮಿಸಬೇಕು. ಅಲ್ಲಿಯವರೆಗೆ ಹೊಸ ಲೇಔಟ್‍ಗಳ ಅನುಮತಿಗೆ ಬಂದ ಅರ್ಜಿಗಳನ್ನು ತಡೆಹಿಡಿಯಬೇಕು’ ಎಂದರು. ಇದಕ್ಕೆ ಎಲ್ಲಾ ಸದಸ್ಯರು ಪಕ್ಷ ಭೇದ ಮರೆತು ಒಪ್ಪಿಗೆ ಸೂಚಿಸಿದರು.

ಪೌರಕಾರ್ಮಿಕರ 3 ತಿಂಗಳ ವೇತನ ನೀಡಲು, 500 ವಿದ್ಯುತ್ ದೀಪ ಖರೀದಿ, ಮೌಲಾನ್ ಚೌಕ್‍ದಿಂದ ಗೋಗಿಸಾಬ್ ಮಸೀದಿ ವರೆಗೆ ರಸ್ತೆ ಅಗಲಿಕರಣಕ್ಕೆ ನಿರ್ಧಾರ ಕೈಗೊಳ್ಳಲಾಯಿತು.

ತನಿಖೆಗೆ ಒತ್ತಾಯ

ಕಳೆದ 2– 3 ಸಾಮಾನ್ಯ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ ಕಸ ವಿಲೇವಾರಿಗೆ ಖರೀದಿಸಲಾದ ವಾಹನಗಳ ನೋಂದಣಿ ಮಾಡಿಸದೆ ಇರುವುದು, ಜೆಸಿಬಿ ಯಂತ್ರ ರಿಪೇರಿ ಮಾಡಿಸದೆ ಬಾಡಿಗೆಗೆ ಪಡೆದು ನಿರ್ಲಕ್ಷ್ಯ ಹಾಗೂ ಯುಜಿಡಿ ಕಾಮಗಾರಿ ಪೂರ್ತಿಗೊಳ್ಳದೆ ಇದ್ದರೂ ಗುತ್ತಿಗೆದಾರರಿಂದ ಪುರಸಭೆ ವಶಕ್ಕೆ ಪಡೆದಿರುವ ಹಗರಣದ ವಿರುದ್ಧ ಪುರಸಭೆ ಸದಸ್ಯರಾದ ವಿರೇಶ್ ಸೀಗಿ, ಮುಕ್ರಂ, ಗೊರೆಮಿಯ್ಯಾ, ರಮೇಶ ಕಲ್ಲೂರ ಕ್ರಮಕ್ಕೆ ಒತ್ತಾಯಿಸಿದರು.

ದೀರ್ಘ ರಜೆ ಮೇಲೆ ತೆರಳಿರುವ ಮುಖ್ಯಾಧಿಕಾರಿ ಅವರನ್ನು ಅಮಾನತು ಮಾಡಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ, ಪುರಸಭೆ ಅಧ್ಯಕ್ಷೆ ಕಸ್ತೂರಿಬಾಯಿ ಪರಸನೂರ್, ಉಪಾಧ್ಯಕ್ಷೆ ಸತ್ಯವತಿ ಮಠಪತಿ, ಸದಸ್ಯರಾದ ರಮೇಶ ಕಲ್ಲೂರ, ಮುಕ್ರಮ್ ಪಟೇಲ್, ಅಫ್ಸರ್‌ಮಿಯ್ಯಾ, ಸವಿತಾ ಅಶೋಕ ಸೊಂಡೆ, ಎಸ್.ಎ.ಬಾಸಿತ್, ಅನೀಲ ಪಲ್ಲೇರಿ, ಮಡಿವಾಳಪ್ಪ ಪಾಟೀಲ, ಸುನೀಲ್ ಪಾಟೀಲ, ವಿಜಯಕುಮಾರ ದುರ್ಗದ, ಗಿರೀಶ್ ಪಾಟೀಲ, ರಾಜರೆಡ್ಡಿ, ಭೀಮಬಾಯಿ ಭೀಮರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.