ADVERTISEMENT

ವಿಶ್ವವಿದ್ಯಾಲಯಗಳು ಜ್ಞಾನ ಕ್ರಾಂತಿಗೆ ಅಣಿಯಾಗಲಿ: ವೆಂಕಯ್ಯ ನಾಯ್ಡು

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2018, 15:36 IST
Last Updated 31 ಆಗಸ್ಟ್ 2018, 15:36 IST
ಬೀದರ್ ತಾಲ್ಲೂಕಿನ ಕಮಠಾಣ ಬಳಿಯ ಕರ್ನಾಟಕ ಪಶು ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ನಡೆದ ಘಟಿಕೋತ್ಸವದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮಾತನಾಡಿದರು
ಬೀದರ್ ತಾಲ್ಲೂಕಿನ ಕಮಠಾಣ ಬಳಿಯ ಕರ್ನಾಟಕ ಪಶು ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ನಡೆದ ಘಟಿಕೋತ್ಸವದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮಾತನಾಡಿದರು   

ಬೀದರ್‌: ‘ವಿಶ್ವವಿದ್ಯಾಲಯಗಳು ಜ್ಞಾನಾಧಾರಿತ ಸಂಸ್ಥೆಗಳಾಗಿದ್ದರೂ ಈಗಿರುವ ವ್ಯವಸ್ಥೆ ಜ್ಞಾನಾಭಿವೃದ್ಧಿಗೆ ಪೂರಕವಾಗಿಲ್ಲ. ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆಯಾದಾಗ ಮಾತ್ರ ಜಾಗತಿಕ ಜ್ಞಾನ ಕ್ರಾಂತಿಯಲ್ಲಿ ಯುವ ಜನಾಂಗ ಪಾಲ್ಗೊಳ್ಳಲು ಸಾಧ್ಯವಾಗಲಿದೆ’ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅಭಿಪ್ರಾಯಪಟ್ಟರು.

ನಗರದ ಹೊರವಲಯದ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ನಡೆದ 10ನೇ ಘಟಿಕೋತ್ಸವದಲ್ಲಿ ಅವರು ಮಾತನಾಡಿದರು.

‘ವಿಶ್ವವಿದ್ಯಾಲಯಗಳು ವಿದ್ಯಾವಂತರನ್ನು ಉತ್ಪಾದಿಸುವ ಕೇಂದ್ರಗಳಾಗಿವೆ. ಪರೀಕ್ಷೆ ಆಧಾರಿತ ವಿಧಾನವನ್ನು ಕೇಂದ್ರೀಕರಿಸುವ ಬದಲು ಸಂಶೋಧನೆ ಹಾಗೂ ಹೊಸ ಸಂಸ್ಕೃತಿಗೆ ಉತ್ತೇಜನ ನೀಡುವ ವಾತಾವರಣ ಸೃಷ್ಟಿಸಬೇಕಿದೆ’ ಎಂದು ಹೇಳಿದರು.

ADVERTISEMENT

‘ಜೈವಿಕ ಹಾಗೂ ನ್ಯಾನೊ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿದ್ದರೂ ಹೈನುಗಾರಿಕೆ ಹಾಗೂ ಮೀನುಗಾರಿಕೆಗೆ ಪೂರಕವಾಗಿರುವ ಹವಾಮಾನ ನಿಖರತೆಯಲ್ಲಿ ಪ್ರಗತಿ ಸಾಧಿಸಲು ವಿಜ್ಞಾನಿಗಳು ಮುಂದೆ ಬರಬೇಕಿದೆ’ ಎಂದು ತಿಳಿಸಿದರು.

‌ಕೃಷಿ ಆದಾಯ ದ್ವಿಗುಣಗೊಳಿಸಿ:‘ಜಾಗತಿಕ ಆಹಾರ ಸಮಸ್ಯೆ ಹಾಗೂ ಅಪೌಷ್ಟಿಕತೆಯ ನಿವಾರಣೆಗೆ ಕೃಷಿ ಆದಾಯವನ್ನು ದ್ವಿಗುಣಗೊಳಿಸುವ ಅಗತ್ಯವಿದೆ. ಬೆಳೆಯುತ್ತಿರುವ ಜನಸಂಖ್ಯೆಯನ್ನು ಗಮನದಲ್ಲಿಟ್ಟಕೊಂಡು ಉತ್ಪಾದನೆಯನ್ನು ಹೆಚ್ಚಿಸಬೇಕಾಗಿದೆ’ ಎಂದು ಸಲಹೆ ನೀಡಿದರು.

‘ಆಹಾರ ವಲಯದಲ್ಲಿ ತಳಿ ಅಭಿವೃದ್ಧಿ ಪ್ರಮುಖ ಪಾತ್ರ ವಹಿಸುತ್ತಿದೆ. ಭಾರತದಲ್ಲಿ ಮತ್ಸ್ಯ ತಳಿ ಅಭಿವೃದ್ಧಿ ವಾರ್ಷಿಕ ಬೆಳವಣಿಗೆ ದರ ಪ್ರತಿಶತ 8 ರಷ್ಟು ಇದೆ. ಉದ್ದದ ಕರಾವಳಿ ಪ್ರದೇಶ ಹೊಂದಿರುವ ಕರ್ನಾಟಕಕ್ಕೆ ಮತ್ಸ್ಯತಳಿ ಅಭಿವೃದ್ಧಿ ವರವಾಗಿದೆ’ ಎಂದು ಬಣ್ಣಿಸಿದರು.

‘ಭಾರತವು ಕೃಷಿ ಹಾಗೂ ಕ್ಷೀರ ಕ್ರಾಂತಿ ಮಾಡಿದೆ. ಮತ್ಸ್ಯ ಉತ್ಪಾದನೆಯಲ್ಲಿ ಹೆಚ್ಚಿನ ಸಾಧನೆ ಮಾಡಬೇಕಾಗಿದೆ. ರೈತರನ್ನು ಆರ್ಥಿಕವಾಗಿ ಸ್ವಾವಲಂಬಿಯನ್ನಾಗಿ ಮಾಡುವ ದಿಸೆಯಲ್ಲಿ ಜಾನುವಾರು ಪಾಲನೆಗೆ ಉತ್ತೇಜನ ನೀಡಬೇಕಾಗಿದೆ. ಕಡಿಮೆ ಬಡ್ಡಿ ದರದಲ್ಲಿ ರೈತರಿಗೆ ಸಾಲ ಸೌಲಭ್ಯ ಒದಗಿಸಬೇಕಾಗಿದೆ’ ಎಂದು ಹೇಳಿದರು.

‘ಪಶು ವೈದ್ಯಕೀಯ ಉದ್ಯಮಗಳ ವ್ಯಾಪಾರೀಕರಣದಿಂದಾಗಿ ಪಶುವೈದ್ಯರ ಬೇಡಿಕೆ ಹೆಚ್ಚುತ್ತಿದೆ. ಆಹಾರ ಉತ್ಪಾದನೆ, ಔಷಧಿ, ರೋಗಪತ್ತೆ ವಿಧಾನ ಹಾಗೂ ಲಸಿಕೆ ಉತ್ಪಾದನೆಯಲ್ಲಿ ಅಂತರರಾಷ್ಟ್ರೀಯ ಮಟ್ಟದ ಕೈಗಾರಿಕೆಗಳನ್ನು ಸ್ಥಾಪಿಸಬೇಕಿದೆ’ ಎಂದು ತಿಳಿಸಿದರು.

‘2022ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಮೋದಿ ಅವರ ಕನಸು ನನಸು ಮಾಡಲು ವಿಜ್ಞಾನಿಗಳು ಪ್ರಯತ್ನಿಸಬೇಕು. ಸಮಗ್ರ ಕೃಷಿ ಪದ್ಧತಿಯನ್ನು ಜನಪ್ರಿಯಗೊಳಿಸಿ ರೈತರಿಗೆ ಉತ್ತೇಜನ ನೀಡಬೇಕು’ ಎಂದು ಸಲಹೆ ನೀಡಿದರು.

ವಿಶ್ವವಿದ್ಯಾಲಯದ ಸಹ ಕುಲಾಧಿಪತಿಯಾದ ಪಶು ಸಂಗೋಪನಾ ಸಚಿವ ವೆಂಕಟರಾವ್ ನಾಡಗೌಡ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪುರ, ಸಂಸದ ಭಗವಂತ ಖೂಬಾ, ಕುಲಪತಿ ಎಚ್‌.ಡಿ.ನಾರಾಯಣಸ್ವಾಮಿ, ರಿಜಿಸ್ಟ್ರಾರ್ ಶಿವಶಂಕರ ಉಸ್ತುರಗಿ, ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯರಾದ ಮಲ್ಲಿಕಾರ್ಜುನ ಬಿರಾದಾರ, ನಾಗಭೂಷಣ ಕಮಠಾಣ, ಲುಂಬಿಣಿ ಗೌತಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.