ADVERTISEMENT

ಈ ಊರಿಗೆ ಆಟೊನೇ ಆಂಬುಲೆನ್ಸ್‌

ಕೋವಿಡ್ ನಿರ್ವಹಣೆಗೆ ಧುಪತಮಹಾಗಾಂವ್ ಗ್ರಾಮ ಪಂಚಾಯಿತಿ ಮಾದರಿ ಹೆಜ್ಜೆ

ಮನ್ನಥಪ್ಪ ಸ್ವಾಮಿ
Published 20 ಮೇ 2021, 2:28 IST
Last Updated 20 ಮೇ 2021, 2:28 IST
ಔರಾದ್ ತಾಲ್ಲೂಕಿನ ಧುಪತಮಹಾಗಾಂವ್ ಗ್ರಾಮ ಪಂಚಾಯಿತಿಯವರು ಆಟೊವನ್ನೇ ಆಂಬುಲೆನ್ಸ್ ಆಗಿ ಬಳಸುತ್ತಿದ್ದಾರೆ
ಔರಾದ್ ತಾಲ್ಲೂಕಿನ ಧುಪತಮಹಾಗಾಂವ್ ಗ್ರಾಮ ಪಂಚಾಯಿತಿಯವರು ಆಟೊವನ್ನೇ ಆಂಬುಲೆನ್ಸ್ ಆಗಿ ಬಳಸುತ್ತಿದ್ದಾರೆ   

ಔರಾದ್: ಕೊರೊನಾ ಸೋಂಕು ಹೆಚ್ಚುತ್ತಿರುವ ಕಾರಣ ಆಂಬುಲೆನ್ಸ್‌ ಸೇವೆಗೆ ಹೆಚ್ಚಿನ ಬೇಡಿಕೆ ಇದೆ. ಹಾಗಾಗಿ, ತಾಲ್ಲೂಕಿನ ಧುಪತಮಹಾಗಾಂವ್ ಗ್ರಾಮ ಪಂಚಾಯಿತಿಯವರು ಆಟೊವನ್ನೇ ಆಂಬುಲೆನ್ಸ್ ಆಗಿ ಬಳಸಿಕೊಂಡು ಕೋವಿಡ್‌ ನಿರ್ವಹಣೆಗೆ ಮಾದರಿ ಹೆಜ್ಜೆ ಇರಿಸಿದ್ದಾರೆ.

ಅನಾರೋಗ್ಯದಂತಹ ತುರ್ತು ಸಂದರ್ಭದಲ್ಲಿ ರೋಗಿಗಳು 18 ಕಿ.ಮೀ. ದೂರದ ಸಂತಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗುವುದು ತುಂಬಾ ಕಷ್ಟದ ಕೆಲಸ. ವಿಶೇಷವಾಗಿ, ಅಂಗವಿಕಲರು, ವೃದ್ಧರು ಹೆಚ್ಚಿನ ತೊಂದರೆ ಎದುರಿಸುತ್ತಿರುವುದನ್ನು ಗಮನಿಸಿದ ಧುಪತಮಹಾಗಾಂವ್ ಗ್ರಾಮ ಪಂಚಾಯಿತಿ ಎರಡು ಆಟೊ ಗಳನ್ನು ಬಾಡಿಗೆ ಪಡೆದು ಅವುಗಳನ್ನು ಆಂಬುಲೆನ್ಸ್ ಆಗಿ ಪರಿವರ್ತಿ ಸಿದೆ. ಒಂದು ಕೋವಿಡ್‌ ರೋಗಿಗಳಿಗೆ ಬಳಸಿದರೆ, ಮತ್ತೊಂದನ್ನು ಕೋವಿಡೇತರ ರೋಗಿಗಳಿಗೆ ಬಳಸಲಾಗುತ್ತಿದೆ.

‘ಕೋವಿಡ್ ಎರಡನೇ ಅಲೆಯಿಂದ ಜನ ಆಸ್ಪತ್ರೆಯಲ್ಲಿ ಬೆಡ್, ಆಮ್ಲಜನಕ ಕೊರತೆಯಿಂದ ನರಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನಮ್ಮ ಗ್ರಾಮದ ಜನರನ್ನು ನಾವೇ ಕಾಪಾಡುವ ಉದ್ದೇಶದಿಂದ ಊರಿನ ಸರ್ಕಾರಿ ವಸತಿ ಶಾಲೆಯಲ್ಲಿ ಐಸೊಲೇಷನ್ ವಾರ್ಡ್ ಮಾಡಲಾಗಿದೆ. ಅಲ್ಲಿಯ ತನಕ ರೋಗಿಗಳನ್ನು ಸಾಗಿಸಲು ಆಟೊ ಬಳಕೆ ಮಾಡಲಾಗುತ್ತಿದೆ. ಅದರಲ್ಲಿ ಆಮ್ಲಜನಕ ಮತ್ತು ಔಷಧ ವ್ಯವಸ್ಥೆಯೂ ಇದೆ’ ಎಂದು ಪಿಡಿಒ ಶಿವಾನಂದ ಔರಾದೆ ತಿಳಿಸುತ್ತಾರೆ.

ADVERTISEMENT

‘ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ಒತ್ತಡ ಜಾಸ್ತಿಯಾಗಿ ಸೋಂಕಿತರಿಗೆ ಸಮಸ್ಯೆಯಾಗುತ್ತಿದೆ. ತುರ್ತು ಸಂದರ್ಭದಲ್ಲಿ ಆಸ್ಪತ್ರೆಗೆ ಸಾಗಿಸಲು ಸಕಾಲಕ್ಕೆ ಆಂಬುಲೆನ್ಸ್ ಸಿಗುತ್ತಿಲ್ಲ. ಈ ಕಾರಣಕ್ಕೆ ನಾವು ರೋಗಿಗಳಿಗೆ ಉಚಿತ ಆಟೊ ಸೇವೆ ಕಲ್ಪಿಸಿದ್ದೇವೆ. ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ತೆರೆದ ಸಹಾಯವಾಣಿ (9482552486)ಯಲ್ಲಿ ಕೋವಿಡ್‍ಗೆ ಸಂಬಂಧಿಸಿದಂತೆ 24 ಗಂಟೆ ಸೇವೆ ಮಾಹಿತಿ ಸಿಗಲಿದೆ’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ ಜೊನ್ನೆಕೇರಿ ಮಾಹಿತಿ ನೀಡುತ್ತಾರೆ.

‘ವಿಶೇಷವಾಗಿ ಪಕ್ಕದ ಹೆಡಗಾಪುರ ಆಸ್ಪತ್ರೆ ವೈದ್ಯರನ್ನು ಊರಿಗೆ ಕರೆಸಿ ಜನರಿಗೆ ಕೋವಿಡ್ ಲಸಿಕೆ ಕೊಡಿಸಲಾಗುತ್ತಿದೆ. ಈಗಾಗಲೇ ನಮ್ಮ ಪಂಚಾಯಿತಿ ವ್ಯಾಪ್ತಿಯ ಶೇ 60ರಷ್ಟು ಜನ ಲಸಿಕೆ ಪಡೆದುಕೊಂಡಿದ್ದಾರೆ. ಮುಂದಿನ ಎರಡು ತಿಂಗಳಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಕೊಡಿಸುವ ಗುರಿ ಹೊಂದಲಾಗಿದೆ’ ಎಂದು ಪಿಡಿಒ ಹೇಳಿದರು.

ಸದ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ 4 ಗ್ರಾಮ ಹಾಗೂ 2 ತಾಂಡಾಗಳಲ್ಲಿ ಕೋವಿಡ್ ಜಾಗೃತಿ ಅಭಿಯಾನ ನಡೆಯುತ್ತಿದೆ. ಇಬ್ಬರು ಆಶಾ ಕಾರ್ಯಕರ್ತೆಯರು, ಇಬ್ಬರು ಅಂಗನವಾಡಿ ಸಹಾಯಕರು ದಿನದ 12 ಗಂಟೆ ಕೆಲಸ ಮಾಡುತ್ತಿದ್ದಾರೆ. ಪ್ರತಿ ಮನೆಗೆ ಹೋಗಿ ಕೊರೊನಾ ಸೋಂಕಿನ ಬಗ್ಗೆ ತಿಳಿದುಕೊಳ್ಳುವುದು, ಯಾರಿಗಾದರೂ ರೋಗ ಲಕ್ಷಣ ಇದ್ದರೆ ಅವರನ್ನು ಪರೀಕ್ಷೆಗೆ ಒಳಪಡಿಸುವುದು, ಸೋಂಕು ದೃಢಪಟ್ಟರೆ ಅವರಲ್ಲಿ ಧೈರ್ಯ ತುಂಬಿ ಚಿಕಿತ್ಸೆ ಕೊಡಿಸುವ ಕೆಲಸವನ್ನು ಇಡೀ ಪಂಚಾಯಿತಿ ಮಾಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.