ADVERTISEMENT

ಕ.ಕ. ಇತಿಹಾಸ: ಜನಸೇವಾ ಶಾಲೆಯಿಂದ ವಿವಿಧ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2022, 8:46 IST
Last Updated 17 ಸೆಪ್ಟೆಂಬರ್ 2022, 8:46 IST
ಬೀದರ್‌ನ ಜನಸೇವಾ ಶಾಲೆಯಲ್ಲಿ ನಡೆದ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು
ಬೀದರ್‌ನ ಜನಸೇವಾ ಶಾಲೆಯಲ್ಲಿ ನಡೆದ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು   

ಬೀದರ್: ಯುವ ಪೀಳಿಗೆಗೆ ಕಲ್ಯಾಣ ಕರ್ನಾಟಕ ಇತಿಹಾಸ ಪರಿಚಯಿಸುವ ದಿಸೆಯಲ್ಲಿ ಜನಸೇವಾ ಶಾಲೆಯಿಂದ ಒಂದು ವರ್ಷ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಜನಸೇವಾ ಪ್ರತಿಷ್ಠಾನದ ಕಾರ್ಯದರ್ಶಿ ರೇವಣಸಿದ್ದಪ್ಪ ಜಲಾದೆ ತಿಳಿಸಿದರು.

ಇಲ್ಲಿಯ ಪ್ರತಾಪನಗರದ ಜನಸೇವಾ ಶಿಶು ಮಂದಿರ, ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಲ್ಯಾಣ ಕರ್ನಾಟಕ ಈಗ ತನ್ನ ಸ್ವಾತಂತ್ರ್ಯದ 75ನೇ ವರ್ಷಕ್ಕೆ ಪದಾರ್ಪಣೆ ಮಾಡಿದೆ. 2023 ರಲ್ಲಿ ಅಮೃತ ಮಹೋತ್ಸವ ಆಚರಿಸಿಕೊಳ್ಳಲಿದೆ. ಕಾರಣ, ಶಾಲೆಯು ಅಮೃತ ಮಹೋತ್ಸವದ ವರೆಗೆ ಕಲ್ಯಾಣ ಕರ್ನಾಟಕದ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಗೋಷ್ಠಿ, ವಿಚಾರ ಸಂಕಿರಣ, ಉಪನ್ಯಾಸ ಕಾರ್ಯಕ್ರಮ, ವಿವಿಧ ಸ್ಪರ್ಧೆಗಳನ್ನು ಸಂಘಟಿಸಲಿದೆ ಎಂದು ಹೇಳಿದರು.

ADVERTISEMENT

ದೇಶಕ್ಕೆ ಸ್ವಾತಂತ್ರ್ಯ ಬಂದ ಒಂದು ವರ್ಷದ 32 ದಿನಗಳ ನಂತರ ಕಲ್ಯಾಣ ಕರ್ನಾಟಕಕ್ಕೆ ಸ್ವಾತಂತ್ರ್ಯ ದೊರಕಿದೆ. ಕಲ್ಯಾಣ ಕರ್ನಾಟಕ ಹನುಮ, ಸಿದ್ಧಾರೂಢರು, ಶರಣರು, ಸಂತರು ಜನಿಸಿದ ಪುಣ್ಯ ಭೂಮಿಯಾಗಿದೆ. ನಿಜಾಮನ ವಿರುದ್ಧ ಹೋರಾಡಿದ ವೀರ ಭೂಮಿಯೂ ಆಗಿದೆ. ಕಲ್ಯಾಣ ಕರ್ನಾಟಕ ಹೆಸರೇ ಸ್ವಾಭಿಮಾನದ ಸಂಕೇತವಾಗಿದೆ ಎಂದು ತಿಳಿಸಿದರು.

ಪ್ರೌಢಶಾಲೆ ಮುಖ್ಯಶಿಕ್ಷಕ ಶಿವಾನಂದ ಮಲ್ಲ, ವಿದ್ಯಾರ್ಥಿನಿ ಭುವನೇಶ್ವರಿ ಮಾತನಾಡಿದರು. ಜಿಲ್ಲಾಮಟ್ಟದ ವಿಜ್ಞಾನ ಮೇಳ ಹಾಗೂ ಜಿಲ್ಲಾಮಟ್ಟದ ಕ್ರೀಡಾಕೂಟದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

ಪ್ರತಿಷ್ಠಾನದ ಖಜಾಂಚಿ ಶಿವರಾಜ ಹುಡೇದ್ ಧ್ವಜಾರೋಹಣ ಮಾಡಿದರು. ಸದಸ್ಯ ಶಿವಲಿಂಗಪ್ಪ ಜಲಾದೆ, ಶಿಕ್ಷಕರು ಉಪಸ್ಥಿತರಿದ್ದರು. ಶಿಕ್ಷಕಿ ರೇಣುಕಾ ಭಾಗೇರಿ ನಿರೂಪಿಸಿದರು. ನೀಲಮ್ಮ ಚಾಮರೆಡ್ಡಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.