ADVERTISEMENT

ಬೀದರ್‌: ವಸಂತ ಕುಷ್ಟಗಿ ಬದುಕು–ಬರಹ ಸ್ಮರಣೆ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2023, 5:24 IST
Last Updated 30 ನವೆಂಬರ್ 2023, 5:24 IST
ಬೀದರ್‌ನಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಹಿರಿಯ ಸಾಹಿತಿ ಪಂಚಾಕ್ಷರಿ ಪುಣ್ಯಶೆಟ್ಟಿ ಅವರು ಸಸಿಗೆ ನೀರೆರೆದು ಉದ್ಘಾಟಿಸಿದರು
ಬೀದರ್‌ನಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಹಿರಿಯ ಸಾಹಿತಿ ಪಂಚಾಕ್ಷರಿ ಪುಣ್ಯಶೆಟ್ಟಿ ಅವರು ಸಸಿಗೆ ನೀರೆರೆದು ಉದ್ಘಾಟಿಸಿದರು   

ಬೀದರ್‌: ಕಲಬುರಗಿಯ ನುಡಿಸಿರಿ ಆಚಾರ್ಯ ವಸಂತ ಕುಷ್ಟಗಿ ಪ್ರತಿಷ್ಠಾನ ಹಾಗೂ ಅತಿವಾಳೆ ಸಾಂಸ್ಕೃತಿಕ ಪ್ರತಿಷ್ಠಾನದ ಸಹಯೋಗದಲ್ಲಿ ವಸಂತ ಕುಷ್ಟಗಿ ಬದುಕು–ಬರಹ ಉಪನ್ಯಾಸ ಮತ್ತು ‘ವಸಂತ ಸಾಹಿತ್ಯೋತ್ಸವ 2023’ ಕಾರ್ಯಕ್ರಮ ವನ್ನು ನಗರದಲ್ಲಿ ಮಂಗಳವಾರ ಆಯೋಜಿಸಲಾಗಿತ್ತು. 

ಹಿರಿಯ ಸಾಹಿತಿ ಪಂಚಾಕ್ಷರಿ ಪುಣ್ಯಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ,‘ಬೀದರ್‌ ಜಿಲ್ಲೆಯೊಂದಿಗೆ ವಸಂತ ಕುಷ್ಟಗಿಯವರದ್ದು ಅವಿನಾಭಾವ ಸಂಬಂಧವಿದೆ. ಬಿ.ವ್ಹಿ.ಬಿ ಕಾಲೇಜಿನಲ್ಲಿ ಕನ್ನಡದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಗಡಿಭಾಗದಲ್ಲಿ ಕನ್ನಡ ಕಟ್ಟಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕನ್ನಡ ಗಟ್ಟಿಯಾಗಿ ನೆಲೆಯೂರುವಲ್ಲಿ ಅವರ ಶ್ರಮ ಸಾಕಷ್ಟಿದೆ’ ಎಂದರು.

ಸಾಹಿತಿ ರಾಮಚಂದ್ರ ಗಣಾಪೂರ ಮಾತನಾಡಿ,‘ಕನ್ನಡ ಭಾಷೆ, ಸಾಹಿತ್ಯ ಮತ್ತು ದಾಸ ಸಾಹಿತ್ಯದ ಪ್ರಚಾರದಲ್ಲಿ ಕುಷ್ಟಗಿಯವರ ಪಾತ್ರ ಗಣನೀಯವಾಗಿದೆ. ದೈಹಿಕವಾಗಿ ನ್ಯೂನತೆ ಹೊಂದಿದ್ದರು ಕೂಡ ಕನ್ನಡದ ಎಲ್ಲಾ ಕಾರ್ಯಚಟುವಟಿಕೆಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದರು. ಸೃಜನಶೀಲ ಬರಹಗಾರರು, ದಾಸ ಸಾಹಿತ್ಯದ ವಿದ್ವಾಂಸರು, ಪ್ರತಿಭಾವಂತರು, ಗಟ್ಟಿ ಸಾಹಿತ್ಯದ ನಿರ್ಮಾಪಕರಾಗಿ ನಾಡಿನಾದ್ಯಾಂತ ಚಿರಪರಿಚಿತರು’ ಎಂದರು.

ADVERTISEMENT

ವಚನಾಮೃತ ಕನ್ನಡ ಸಂಘದ ಅಧ್ಯಕ್ಷ ಸಿದ್ರಾಮಪ್ಪಾ ಮಾಸಿಮಾಡೆ ಮಾತನಾಡಿ, ‘ಕನ್ನಡದ ಅನೇಕ ಲೇಖಕರನ್ನು ನಾಡಿಗೆ ಕೊಟ್ಟ ಕೀರ್ತಿ ವಸಂತ ಕುಷ್ಟಗಿಯವರಿಗೆ ಸಲ್ಲುತ್ತದೆ’ ಎಂದರು.

ಕರ್ನಾಟಕ ನಾಟಕ ಅಕಾಡಮಿ ಮಾಜಿ ಸದಸ್ಯ ವಿನೋದ ಅಂಬೇಕರ, ಅಖಿಲ ಭಾರತ ದಾಸ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ‌ರವೀಂದ್ರ ಲಂಜವಾಡಕರ, ದಾಸ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎಂ.ಅಮರವಾಡಿ, ಸಂಚಾರಿ ಜರ್ನೋ ಶಾಮ ಕುಷ್ಟಗಿ, ಅತಿವಾಳೆ ಸಾಂಸ್ಕೃತಿಕ ಪ್ರತಿಷ್ಠಾನದ ಸಂಚಾಲಕ ‌‌ಸಂಜೀವಕುಮಾರ ಅತಿವಾಳೆ, ರೇಣುಕಾ ಎನ್.ಬಿ., ಸಂತೋಷಕುಮಾರ ಜೋಳದಾಪಕೆ, ಉಮಾಕಾಂತ ಮೀಸೆ ಹಾಗೂ ಸೂರ್ಯಕಾಂತ ನಿರ್ಣಾಕರ ಹಾಜರಿದ್ದರು.

‘ವಸಂತಸಿರಿ ಸ್ನೇಹ ಸಂಪದ’ ಪ್ರಶಸ್ತಿ ದಿ.ಪ್ರೊ. ದೇವೇಂದ್ರ ಕಮಲ್ ಪರವಾಗಿ ರತಿನ್ ಕಮಲ್, ‘ವಸಂತಸಿರಿ ಶಿಷ್ಯೋತ್ತಮ’ ಪ್ರಶಸ್ತಿ ಹರತಿ ದ್ವಾರಕಾನಾಥ ವಿಕಾರಾಬಾದ್, ‘ವಸಂತಸಿರಿ ಹಾರಾಯಿಕೆ ಸಿರಿಕಾವ್ಯ’ ಪ್ರಶಸ್ತಿ ಡಾ. ಸುಮನ ಯಜುರ್ವೇದಿ ಕಲಬುರಗಿ ಅವರಿಗೆ ಪ್ರದಾನ ಮಾಡಲಾಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.