ಬಸವಕಲ್ಯಾಣ: ‘ಅರಣ್ಯ ಇಲಾಖೆಯವರು ರೈತರಿಗೆ ಯಾವುದೇ ಸೋಚನೆ ನೀಡದೆ ಜಮೀನು ವಶಪಡಿಸಿಕೊಳ್ಳುತ್ತಿದ್ದಾರೆ. ಕೆಲವರ ಹೊಲದಲ್ಲಿನ ಬೆಳೆ ಹಾಳು ಮಾಡಿ ಕಿರುಕುಳ ನೀಡಿದ್ದು ಅವರ ಮೇಲೆ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿ ಉಪ ವಿಭಾಗಾಧಿಕಾರಿ ಮುಕುಲ್ ಜೈನ್ ಅವರಿಗೆ ಬಹುಜನ ಸಮಾಜ ಪಕ್ಷದಿಂದ ಶುಕ್ರವಾರ ಮನವಿಪತ್ರ ಸಲ್ಲಿಸಲಾಯಿತು.
‘ಬಡವರ ಜಮೀನು ವಶಕ್ಕೆ ಪಡೆದು, ಹಣವಂತರಿಗೆ ಮತ್ತು ಪ್ರಭಾವಿಗಳಿಗೆ ಏನೂ ಮಾಡದೆ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ. ಮಿರಖಲ್ ಮತ್ತು ಮಿರಖಲ್ ತಾಂಡಾ ವ್ಯಾಪ್ತಿಯ ಕೃಷಿಕರಿಗೆ ಅನೇಕ ದಿನಗಳಿಂದ ತೊಂದರೆ ನೀಡುತ್ತಿದ್ದಾರೆ. 75 ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದರೂ ಅಂಥವರ ಜಮೀನನ್ನು ವಲಯ ಅರಣ್ಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಜೆಸಿಬಿಯಿಂದ ಬೆಳೆ ಹಾಳು ಮಾಡಿದ್ದಾರೆ. ಈ ಕಾರಣ ಅವರ ಮೇಲೆ ಶೀಘ್ರ ಕ್ರಮ ತೆಗೆದುಕೊಳ್ಳಬೇಕು’ ಎಂದು ಒತ್ತಾಯಿಸಲಾಯಿತು.
ಪಕ್ಷದ ರಾಜ್ಯ ಘಟಕದ ಕಾರ್ಯದರ್ಶಿಗಳಾದ ಅಶೋಕ ಮಂಠಾಳಕರ್, ಜ್ಞಾನೇಶ್ವರ ಸಿಂಗಾರೆ, ತಾಲ್ಲೂಕು ಘಟಕದ ಅಧ್ಯಕ್ಷ ಶಂಕರ ಫುಲೆ, ರಮೇಶ ರಾಠೋಡ, ರವಿ ಉದಾತೆ, ಮಹಾದೇವ, ಚಂದ್ರಕಾಂತ, ಮಸ್ತಾನಸಾಬ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.