ADVERTISEMENT

ಬೀದರ್‌ | ಕಾಯಕವೇ ಕೈಲಾಸ ಪದದಲ್ಲಿ ವಿಶ್ವಕರ್ಮರಿಗೆ ನಂಬಿಕೆ: ಶಿವಾನಂದ ಕರಾಳೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2025, 6:08 IST
Last Updated 19 ಸೆಪ್ಟೆಂಬರ್ 2025, 6:08 IST
ಕಾರ್ಯಕ್ರಮವನ್ನು ಶ್ರೀನಿವಾಸ ಮಹಾರಾಜ,‌ ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಉದ್ಘಾಟಿಸಿದರು
ಕಾರ್ಯಕ್ರಮವನ್ನು ಶ್ರೀನಿವಾಸ ಮಹಾರಾಜ,‌ ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಉದ್ಘಾಟಿಸಿದರು   

ಬೀದರ್‌: ‘ಕಾಯಕವೇ ಕೈಲಾಸ’ ಎಂಬ ಪದದಲ್ಲಿ ನಂಬಿಕೆ ಇಟ್ಟು, ದುಡಿಮೆಯಲ್ಲಿ ಹೆಚ್ಚು ನಂಬಿಕೆ ಹೊಂದಿರುವವರು ವಿಶ್ವಕರ್ಮ ಸಮುದಾಯದವರು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಗರದ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಬುಧವಾರ ಏರ್ಪಡಿಸಿದ್ದ ವಿಶ್ವಕರ್ಮ ಜಯಂತಿ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ವಿಶ್ವಕರ್ಮ ಸಮುದಾಯದ ಜನರು ಕಠಿಣ ಶ್ರಮಜೀವಿಗಳು. ಪ್ರಾಚೀನ ಕಾಲದಿಂದಲೂ ವಿವಿಧ ಕಾಯಕ ಮಾಡುತ್ತ ಬಂದಿದ್ದಾರೆ. ದೊಡ್ಡ-ದೊಡ್ಡ ಕಟ್ಟಡ, ದೇವಾಲಯಗಳಿಗೆ ಬುನಾದಿ ಹಾಕುವ ವಿಶೇಷ ನೈಪುಣ್ಯ ಹೊಂದಿದ್ದಾರೆ. ಯಾವುದೇ ಯಂತ್ರೋಪಕರಣಗಳು ಬಂದರೂ ಇತಿಹಾಸದ ಮೂಲ ಸಂಸ್ಕೃತಿ ಮತ್ತು ಪರಂಪರೆ ಬಿಟ್ಟಿಲ್ಲ’ ಎಂದರು.

ADVERTISEMENT

‘ಸಮುದಾಯದ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಉನ್ನತ ಹುದ್ದೆ ಅಲಂಕರಿಸಬೇಕು’ ಎಂದು ಸಲಹೆ ನೀಡಿದರು.

ಕರಡ್ಯಾಳ ಅಲ್ಲಮಪ್ರಭು ಬಿ.ಇಡಿ ಕಾಲೇಜಿನ ಉಪ ಪ್ರಾಂಶುಪಾಲ ಮಾಣಿಕರಾವ್‌ ಬಿ. ಪಂಚಾಳ ಅತಿಥಿ ಉಪನ್ಯಾಸ ನೀಡಿ, ‘ವಿಶ್ವಕರ್ಮ ಜಗತ್ತಿನ ಸೃಷ್ಟಿಕರ್ತ ಎಂದು ಹೇಳಲಾಗುತ್ತದೆ. ವೇದ- ಪುರಾಣಗಳಲ್ಲಿ ಇವರ ಬಗ್ಗೆ ಉಲ್ಲೇಖವಿದೆ’ ಎಂದರು.

‘ಜನರಿಗೆ ಬೇಕಾಗುವ ಕಿಟಕಿ, ಬಾಗಿಲು, ದೇವರ ಮೂರ್ತಿಗಳನ್ನು ಮಾಡುವ ಕಲೆ ಇವರಲ್ಲಿದೆ. ನಾಗರಿಕತೆ ಇಷ್ಟೊಂದು ದೊಡ್ಡದಾಗಿದೆ, ಶ್ರೀಮಂತವಾಗಿದೆ ಎಂದರೆ ಅದಕ್ಕೆ ವಿಶ್ವಕರ್ಮರ ಕೊಡುಗೆ ದೊಡ್ಡದಿದೆ’ ಎಂದು ಹೇಳಿದರು.

ಇದಕ್ಕೂ ಮುನ್ನ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರು ‌ವಿಶ್ವಕರ್ಮ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮೆರವಣಿಗೆಗೆ ಚಾಲನೆ ನೀಡಿದರು. ಪ್ರಮುಖ ಮಾರ್ಗಗಳ ಮೂಲಕ ರಂಗಮಂದಿರದ ವರೆಗೆ ಮೆರವಣಿಗೆ ನಡೆಯಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಶಿಂಧೆ, ಶ್ರೀನಿವಾಸ ಮಹಾರಾಜ, ವಿಶ್ವಕರ್ಮ ಸಮಾಜದ ಮುಖಂಡರಾದ ಮಹೇಶ ಪಂಚಾಳ, ಭೀಮಶಾ ಪಂಚಾಳ, ಪ್ರಭಾಕರ ಶಾಸ್ತ್ರಿ, ಶಾಮರಾವ್ ವಿಶ್ವಕರ್ಮ, ಶ್ರೀನಿವಾಸ ಪಂಚಾಳ ಮತ್ತಿತರರು ಇದ್ದರು.

ವಿಶ್ವಕರ್ಮರು ಕಠಿಣ ಜೀವಿಗಳು ಸಮಾಜಕ್ಕೆ ಬಹುದೊಡ್ಡ ಕೊಡುಗೆ ಕಲೆಯಲ್ಲಿ ವಿಶೇಷ ನೈಪುಣ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.