
ಬೀದರ್: ‘ಸ್ವಾಮಿ ವಿವೇಕಾನಂದರ ಮಾತುಗಳಿಂದ ಪ್ರಭಾವಿತರಾಗಿ ಅಸಂಖ್ಯ ಜನ ಈ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದ್ದರು. ಅಂದು, ಇಂದು, ಎಂದೆಂದಿಗೂ ವಿವೇಕಾನಂದರ ಮಾತುಗಳು ಸಾರ್ವಕಾಲಿಕವಾದುದು. ಅವರು ಭಾರತದ ಅಂತಃಸತ್ವದ ಪ್ರತೀಕ’ ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ಜ್ಯೋತಿರ್ಮಯಾನಂದ ಸ್ವಾಮೀಜಿ ಹೇಳಿದರು.
ವಿವೇಕಾನಂದ ಮಿತ್ರ ಮಂಡಳಿ ಹಾಗೂ ವಿವೇಕಾನಂದ ಬಡಾವಣೆಯ ಸಮಸ್ತ ನಾಗರಿಕರಿಂದ ನಗರದ ವಿವೇಕಾನಂದ ಉದ್ಯಾನದಲ್ಲಿ ಭಾನುವಾರ ಸಂಜೆ ಏರ್ಪಡಿಸಿದ್ದ ಸ್ವಾಮಿ ವಿವೇಕಾನಂದರ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಅಭಿವೃದ್ಧಿ, ದೂರದೃಷ್ಟಿಯ ಚಿಂತನೆ ಅಂದೇ ವಿವೇಕಾನಂದರು ಮಾಡಿದ್ದರು. ಸರ್ವರನ್ನೂ ಜೊತೆಗೆ ತೆಗೆದುಕೊಂಡು ಹೋಗುವ ವಿಚಾರಗಳನ್ನು ಸ್ವಾಮಿ ವಿವೇಕಾನಂದರು ಪ್ರತಿಪಾದಿಸಿದ್ದರು. ಮನುಷ್ಯನನ್ನು ಪಾಪಿ ಎನ್ನುವುದು ಮಹಾಪಾಪ. ಮನುಷ್ಯ ದಿವ್ಯ ಶಕ್ತಿ ಹೊಂದಿದ್ದಾನೆ. ಆತನಲ್ಲಿರುವ ದಿವ್ಯತೆ ಹೊರ ಹಾಕಬೇಕಿದೆ. ಕುರಿ ಅಂದುಕೊಂಡರೆ ಆ ವ್ಯಕ್ತಿ ಕುರಿಯಂತೆ ಬದುಕುತ್ತಾನೆ. ಹುಲಿ ಎಂದು ಭಾವಿಸಿದರೆ ಹುಲಿಯಂತೆ ಸ್ವಾಭಿಮಾನಿಯಾಗಿ ಬದುಕಬಲ್ಲ ಎನ್ನುವುದು ವಿವೇಕಾನಂದರ ನುಡಿಗಳಾಗಿದ್ದವು.
ದುರ್ಬಲರು, ಅಸಹಾಯಕರನ್ನೇ ಸಮಾಜ ಬಲಿ ತೆಗೆದುಕೊಳ್ಳುತ್ತದೆ. ಹಾಗಾಗಿ ಅಂತಃಸತ್ವದಿಂದ ಸದೃಢರಾಗಿರಬೇಕು. ಇನ್ನೊಬ್ಬರಿಗಿಂತ ನಾವು ಹೆಚ್ಚು ಶಕ್ತಿಶಾಲಿಗಳಾಗಿ ಕ್ರಿಯಾಶೀಲರಾದಾಗ ಭಾರತ ವಿಶ್ವಗುರು, ಆಗಬಲ್ಲದು. ಅಮರ ಭಾರತ ಮಾಡುವುದು ನಮ್ಮೆಲ್ಲರ ಸಂಕಲ್ಪ ಆಗಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ, ಸ್ವಾಮಿ ವಿವೇಕಾನಂದರು ನಮ್ಮೆಲ್ಲರಿಗೂ ಸ್ಫೂರ್ತಿ, ಆದರ್ಶ. ನಮ್ಮ ಯುವಪೀಳಿಗೆ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಲು ಸಂಕಲ್ಪ ಮಾಡಬೇಕು. ಸದೃಢ, ಶ್ರೇಷ್ಠ ಭಾರತ ನಿರ್ಮಾಣಕ್ಕೆ ಕೊಡುಗೆ ನೀಡಬೇಕು ಎಂದು ತಿಳಿಸಿದರು.
ಜಯಂತಿ ಅಂಗವಾಗಿ ಏರ್ಪಡಿಸಿದ್ದ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದ ಜ್ಯೋತಿ ಪ್ರಭಾಕರ, ಪೂಜಾ ಬಂಡಿ ಹಾಗೂ ಲತಾಬಾಯಿ ಪ್ರಲ್ಹಾದ ಸೂರ್ಯವಂಶಿ ಅವರಿಗೆ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಿ ಗೌರವಿಸಲಾಯಿತು. ಹಿರಿಯ ಚಿತ್ರಕಲಾವಿದ ಸಿ.ಬಿ. ಸೋಮಶೆಟ್ಟಿ ಅವರು ತೀರ್ಪುಗಾರರಾಗಿದ್ದರು. ಸಂಗೀತ ಶಿಕ್ಷಕಿ ಶಾಂಭವಿ ಪ್ರಾರ್ಥನಾ ಗೀತೆ ಹಾಡಿದರು. ತರಂಗಿಣಿ, ಶ್ರೇಷ್ಠಾ ನೃತ್ಯ ಪ್ರದರ್ಶಿಸಿದರು. ಸಿದ್ಧಾಂತ ಅವರು ವಿವೇಕಾನಂದ ವೇಷಧಾರಿಯಾಗಿ ಅವರ ವಾಣಿ ಹೇಳಿ ಗಮನ ಸೆಳೆದರು. ಉದ್ಯಾನದ ಏಳಿಗೆಗೆ ಶ್ರಮಿಸಿದ ಭಗವಾನದಾಸ್, ಶಿವರಾಜ ವೈಜಂಪಾಡೆ, ವಿಠ್ಠಲರಾವ್ ಪಾಂಚಾಳ ಹಾಗೂ ಅಶೋಕ್ ರೆಡ್ಡಿ ಅವರನ್ನು ಸನ್ಮಾನಿಸಲಾಯಿತು.
ಬೀದರ್ ಮಹಾನಗರ ಪಾಲಿಕೆಯ ಸದಸ್ಯರಾದ ರಾಜಾರಾಮ ಚಿಟ್ಟಾ, ಶಶಿಧರ ಹೊಸಳ್ಳಿ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಶಿವಶಂಕರ್ ಕಾಮಶೆಟ್ಟಿ, ಹಿರಿಯ ಎಂಜಿನಿಯರ್ ಹಾವಶೆಟ್ಟಿ ಪಾಟೀಲ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ವಿವೇಕಾನಂದ ಮಿತ್ರ ಮಂಡಳಿಯ ಗೌರವ ಅಧ್ಯಕ್ಷ ಎಸ್.ವಿ. ಕಲ್ಮಠ ಅಧ್ಯಕ್ಷತೆ ವಹಿಸಿದ್ದರು. ಮಂಡಳಿಯ ಅಧ್ಯಕ್ಷ ಸಂಜೀವಕುಮಾರ ಸಜ್ಜನ್ ಸ್ವಾಗತಿಸಿದರು. ಕಾರ್ಯದರ್ಶಿ ಶಿವಪುತ್ರ ಪಾಟೀಲ್ ಚಟ್ನಳ್ಳಿ ಪ್ರಾಸ್ತಾವಿಕ ಮಾತನಾಡಿದರು. ಶಶಿ ಶೆಂಬೆಳ್ಳಿ ನಿರೂಪಿಸಿದರೆ, ಶರಣಪ್ಪ ಮಲಗೊಂಡ ವಂದಿಸಿದರು. ಕಾರ್ಯಕ್ರಮಕ್ಕೂ ಮುನ್ನ ಬಡಾವಣೆಯಲ್ಲಿ ಬೈಕ್ ರ್‍ಯಾಲಿ ನಡೆಸಲಾಯಿತು.
ಹಿಂದೂ ಧರ್ಮದ ಶ್ರೇಷ್ಠ ವಿಚಾರಗಳು ಹಾಗೂ ನ್ಯೂನತೆಗಳೆರಡನ್ನೂ ಸ್ವಾಮಿ ವಿವೇಕಾನಂದರು ಎತ್ತಿ ತೋರಿಸಿದ ದೊಡ್ಡ ವ್ಯಕ್ತಿ. ಯಾರಿಗೂ ನೋವು ಮಾಡದೇ ಇರುವುದು ನಿಜವಾದ ಧರ್ಮ ಎಂದು ಬಲವಾಗಿ ಪ್ರತಿಪಾದಿಸಿದ್ದರು.ಜ್ಯೋತಿರ್ಮಯಾನಂದ ಸ್ವಾಮೀಜಿ ರಾಮಕೃಷ್ಣ ವಿವೇಕಾನಂದ ಆಶ್ರಮ
ಹಿಂದೂ ಧರ್ಮದ ಶ್ರೇಷ್ಠ ವಿಚಾರಗಳನ್ನು ಜಗತ್ತಿಗೆ ಪರಿಚಯಿಸಿದ ಕೀರ್ತಿ ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ. ಅವರ ತತ್ವಾದರ್ಶಗಳು ಎಲ್ಲ ಕಾಲಕ್ಕೂ ಪ್ರಸ್ತುತ. ಅವರ ಸ್ಮರಣೆ ನಮ್ಮೆಲ್ಲರ ಕರ್ತವ್ಯಡಾ. ಶೈಲೇಂದ್ರ ಕೆ. ಬೆಲ್ದಾಳೆ ಬೀದರ್ ದಕ್ಷಿಣ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.