ADVERTISEMENT

ಮತದಾರರ ಪಟ್ಟಿ ಪರಿಷ್ಕರಣೆ ಪ್ರಾರಂಭ

ಭಿತ್ತಿ ಪತ್ರ ಬಿಡುಗಡೆಗೊಳಿಸಿ ಜಿಲ್ಲಾಧಿಕಾರಿ ಡಾ.ಎಚ್.ಆರ್.ಮಹಾದೇವ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2019, 20:00 IST
Last Updated 1 ಸೆಪ್ಟೆಂಬರ್ 2019, 20:00 IST
ಡಾ.ಎಚ್.ಆರ್.ಮಹಾದೇವ
ಡಾ.ಎಚ್.ಆರ್.ಮಹಾದೇವ   

ಬೀದರ್: ಮುಖ್ಯ ಚುನಾವಣಾಧಿಕಾರಿಯ ಆದೇಶದ ಮೇರೆಗೆ ಸಮಗ್ರ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ 2020ರ ಅಂಗವಾಗಿ ಗ್ರಾಮ ಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ವಿವಿಧ ಹಂತಗಳಲ್ಲಿ ಏಕಕಾಲಕ್ಕೆ ಮತದಾರರ ಪಟ್ಟಿಯ ಪರಿಷ್ಕರಣೆ ಮಾಡಲಾಗುವುದು’ ಎಂದು ಜಿಲ್ಲಾಧಿಕಾರಿ ಎಚ್.ಆರ್.ಮಹಾದೇವ ತಿಳಿಸಿದರು.

ನಗರದಲ್ಲಿ ಭಾನುವಾರ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮತದಾರರ ಪಟ್ಟಿಯಲ್ಲಿ ಅರ್ಹ ಮತದಾರರ ಹೆಸರು ಸೇರ್ಪಡೆ, ಅನರ್ಹ ಮತದಾರರ ಹೆಸರು ತೆಗೆ ಯುವುದು, ತಪ್ಪಾದ ಮನೆ ವಿಳಾಸವನ್ನು ಸರಿಪಡಿಸಲಾಗುವುದು, ಪಟ್ಟಿಯಲ್ಲಿನ ಭಾವಚಿತ್ರಗಳ ಪರಿಶೀಲನೆ ಹಾಗೂ ದೃಢೀಕರಣ, ತಪ್ಪುಗಳನ್ನು ಸರಿಪಡಿಸುವುದು ಹಾಗೂ ಕುಟುಂಬದ ಹೊಸ ಸದಸ್ಯರ ಹೆಸರು ನಮೂದಿಸುವುದು ಹಾಗೂ ಪರಿಶೀಲನೆ ಮಾಡಲಾಗುವುದು’ ಎಂದು ತಿಳಿಸಿದರು.

‘ಸ್ಮಾರ್ಟ್‌ ಫೋನ್‌ಗಳ ಮೂಲಕ ಉತ್ತಮ ಸೇವೆ ಒದಗಿಸಲು ಮೊಬೈಲ್‌ ಸಂಖ್ಯೆಗಳನ್ನು ಪಡೆದುಕೊಳ್ಳಲಾಗುವುದು. ಹೊಸ ಮತಗಟ್ಟೆಗಳ ಸ್ಥಾಪನೆ ಹಾಗೂ ಹೆಚ್ಚುವರಿ ಮತಗಟ್ಟೆಗಳ ಪುನರ್ ವಿಂಗಡಣೆ ಮಾಡಲಾಗುವುದು. ಅಲ್ಲದೇ ಮತದಾರರ ಪಟ್ಟಿಗೆ ಹೊಸ ಹೆಸರನ್ನು ಸೇರ್ಪಡೆ ಮಾಡಲಾಗುವುದು, ಒಟ್ಟಾರೆಯಾಗಿ ಚುನಾವಣೆ ಸಂದರ್ಭದಲ್ಲಿ ಯಾವುದೇ ರೀತಿಯ ತೊಂದರೆ ಆಗದಂತೆ ಎಚ್ಚರಿಕೆ ವಹಿಸಲಾಗುವುದು’ ಎಂದು ಹೇಳಿದರು.

ADVERTISEMENT

‘ಸೆಪ್ಟೆಂಬರ್ 16ರಿಂದ ಅಕ್ಟೋಬರ್ 15 ರವರೆಗೆ ಮತದಾರರ ಪಟ್ಟಿಯ ಭಾಗಗಳನ್ನು ಸರಿಪಡಿಸುವುದು, ವಿಳಾಸ, ತಪ್ಪುಗಳನ್ನು ಸರಿಪಡಿಸಲಾಗುವುದು.ಅಕ್ಟೋಬರ್ 15 ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗುವುದು. ಈ ಪಟ್ಟಿಗೆ ಸಂಬಂಧಿಸಿದಂತೆ ಹಕ್ಕು ಮತ್ತು ಆಕ್ಷೇಪಣೆಗಳಿದ್ದರೆ ಅಕ್ಟೋಬರ್‌ 15 ರಿಂದ 30ರವರೆಗೆ ಕಾಲಾವಕಾಶ ನೀಡಲಾಗಿದೆ’ ಎಂದು ತಿಳಿಸಿದರು.

‘ನವೆಂಬರ್ 2,3,9 ಹಾಗೂ 10 ರಂದು ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ನಡೆಸಲಾಗುವುದು’ ಎಂದರು.

‘ಡಿಸೆಂಬರ್ 15 ರಂದು ಹಕ್ಕು ಮತ್ತು ಆಕ್ಷೇಪಣೆಗಳ ವಿಲೇವಾರಿ ಮಾಡಲಾಗುವುದು. ಡಿಸೆಂಬರ್‌ 25ಕ್ಕೆ ಆಯೋಗದ ಅನುಮತಿ ಪಡೆದು ಡಿಸೆಂಬರ್‌ 31ರಂದು ಮತದಾರರ ಪಟ್ಟಿಗಳ ಮುದ್ರಣ ಮಾಡಲಾಗುವುದು. 2020ರ ಜನವರಿ 1 ರಿಂದ 15ರ ಅವಧಿಯಲ್ಲಿ ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು. ಈ ಮತದಾರರ ಪಟ್ಟಿಯ ಪರಿಷ್ಕರಣಾ ಕಾರ್ಯಕ್ಕೆ ಸಾರ್ವಜನಿಕರು ಸಂಫೂರ್ಣ ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಘಾಳಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.