ಭಾಲ್ಕಿ: ‘ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಮತದಾನ ಮಹತ್ವದ ಪಾತ್ರ ವಹಿಸುತ್ತದೆ. ಮತದಾರರ ನೋಂದಣಿ ಕುರಿತು ಜಾಗೃತಿ ಆಗಬೇಕಾಗಿದೆ. ಜಾಗೃತ ಮತದಾರರಿಂದ ಸದೃಢ, ಶಕ್ತಿಯುತ ಸರ್ಕಾರ ರಚನೆಯಾಗಲು ಸಾಧ್ಯ’ ಎಂದು ರಾಜ್ಯಮಟ್ಟದ ಚುನಾವಣಾ ತರಬೇತುದಾರ ಗೌತಮ ಅರಳಿ ಹೇಳಿದರು.
ತಾಲ್ಲೂಕಿನ ಹಾಲಹಳ್ಳಿ ಸಮೀಪದ ಬೀದರ್ ವಿಶ್ವವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರದ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಮತದಾರರ ನೋಂದಣಿ ಮತ್ತು ಜಾಗೃತಿ ವಿಷಯದ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಹದಿನೆಂಟು ವರ್ಷ ತುಂಬಿದ ಪ್ರತಿಯೊಬ್ಬರೂ ಮತದಾನದ ಹಕ್ಕನ್ನು ಸಂವಿಧಾನಾತ್ಮಕವಾಗಿ ಪಡೆದಿರುತ್ತಾರೆ. ಆದರೆ, ಕೆಲವೊಮ್ಮೆ ನಿರ್ಲಕ್ಷ್ಯದಿಂದಲೋ ಅಥವಾ ಜಾಗೃತಿಯ ಕೊರತೆಯಿಂದಲೋ ಮತದಾರರ ಚೀಟಿ ಹೊಂದಿರುವುದಿಲ್ಲ. ಹಾಗಾಗಿ ಸಮಾಜದ ಪ್ರಜ್ಞಾವಂತ ನಾಗರಿಕರು ಪ್ರತಿಯೊಬ್ಬರೂ ಮತದಾನದ ಹಕ್ಕನ್ನು ಹೊಂದಲು ಮತ್ತು ಕಡ್ಡಾಯವಾಗಿ ಮತದಾರರ ಚೀಟಿ ಪಡೆಯಲು ಪ್ರೇರೇಪಿಸಬೇಕು’ ಎಂದು ತಿಳಿಸಿದರು.
ವಿಶ್ವವಿದ್ಯಾಲಯದ ಕುಲಪತಿ ಬಿ.ಎಸ್.ಬಿರಾದಾರ ಮಾತನಾಡಿ,‘ಮತದಾರರು ಆಸೆ–ಆಮಿಷಕ್ಕೆ ಒಳಗಾಗದೆ ನಿರ್ಭಿಡೆಯಿಂದ ಮತದಾನ ಮಾಡಿದಾಗ ದೇಶದಲ್ಲಿ ಸಶಕ್ತವಾದ ಆಡಳಿತ ಹೊಂದಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.
ಕುಲಸಚಿವೆ (ಆಡಳಿತ) ಸುರೇಖಾ, ವಿಶೇಷಾಧಿಕಾರಿ ಡಾ.ರವೀಂದ್ರನಾಥ ವಿ.ಗಬಾಡಿ ಮಾತನಾಡಿದರು.
ಸಂತೋಷಿ ಮಾತಾ, ಅಂಬರೀಶ ವೀರನಾಯಕ, ಶಿವಕುಮಾರ ಹೂಗಾರ, ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಅಧಿಕಾರಿ ರಾಮಚಂದ್ರ ಗಣಾಪೂರ ಸೇರಿದಂತೆ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.