ADVERTISEMENT

ಬೀದರ್ ಜಿಲ್ಲೆಯಲ್ಲಿ ಇವಿಎಂನಲ್ಲಿ ಮತ ಹಕ್ಕು ಚಲಾವಣೆ

ಚಳಿಯಿಂದ ಬೆಳಿಗ್ಗೆ ಮಂದ, ಮಧ್ಯಾಹ್ನ ಬಿರುಸಿನ ಮತದಾನ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2020, 14:23 IST
Last Updated 22 ಡಿಸೆಂಬರ್ 2020, 14:23 IST
ಬೀದರ್‌ ಜಿಲ್ಲೆ ಹುಮನಾಬಾದ್ ತಾಲ್ಲೂಕಿನ ಸಿಂದಬಂದಗಿಯಲ್ಲಿ ಅಜ್ಜಿಯನ್ನು ಮತಗಟ್ಟೆಗೆ ಕರೆ ತಂದ ಮೊಮ್ಮಗ
ಬೀದರ್‌ ಜಿಲ್ಲೆ ಹುಮನಾಬಾದ್ ತಾಲ್ಲೂಕಿನ ಸಿಂದಬಂದಗಿಯಲ್ಲಿ ಅಜ್ಜಿಯನ್ನು ಮತಗಟ್ಟೆಗೆ ಕರೆ ತಂದ ಮೊಮ್ಮಗ   


ಬೀದರ್‌: ಜಿಲ್ಲೆಯಲ್ಲಿ ಎರಡನೇ ಬಾರಿಗೆ ಮಂಗಳವಾರ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಎಲೆಕ್ಟ್ರಾನಿಕ್‌ ಮತಯಂತ್ರಗಳ ಮೂಲಕ ನಡೆಸಲಾಯಿತು. ಒಂದೆರಡು ಕಡೆ ಮತಯಂತ್ರಗಳಲ್ಲಿ ಸಣ್ಣಪುಟ್ಟ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು ಬಿಟ್ಟರೆ, ಮತದಾನ ಶಾಂತಿಯುವಾಗಿ ನಡೆಯಿತು.

‌ಜಿಲ್ಲೆಯಲ್ಲಿ ವಿಪರೀತ ಚಳಿ ಇದ್ದ ಕಾರಣ ಬೆಳಿಗ್ಗೆ ಹೆಚ್ಚು ಮತದಾರರು ಮತಗಟ್ಟೆಗಳಿಗೆ ಬರಲಿಲ್ಲ. ಹೀಗಾಗಿ ಮತದಾನ ಮಂದಗತಿಯಲ್ಲಿ ಆರಂಭವಾಯಿತು. ಮಧ್ಯಾಹ್ನದ ನಂತರ ಬಿರುಸಿನ ಮತದಾನ ನಡೆಯಿತು. ಏಕಸದಸ್ಯತ್ವಕ್ಕೆ ನಡೆದ ಚುನಾವಣೆಯಲ್ಲಿ ಸಮಸ್ಯೆ ಕಂಡು ಬರಲಿಲ್ಲ. ಮೂರು, ನಾಲ್ಕು ಹಾಗೂ ಐದು ಸದಸ್ಯತ್ವ ಇರುವ ಕಡೆ ಹಿರಿಯರು ಗೊಂದಲದಲ್ಲೇ ಮತದಾನ ಮಾಡಿದರು. ಕೆಲ ವೃದ್ಧರು ಮೊಮ್ಮಕ್ಕಳ ಜತೆಗೆ ಮತಗಟ್ಟೆಗೆ ಬಂದರೆ, ಇನ್ನು ಕೆಲವರು ಸಹಾಯಕರ ನೆರವಿನೊಂದಿಗೆ ಮತ ಚಲಾಯಿಸಿದರು.

2015ರ ಪಂಚಾಯಿತಿ ಚುನಾವಣೆಯಲ್ಲಿ ಮತಚಲಾಯಿಸಿದ್ದವರು ಸರಳವಾಗಿ ಮತದಾನ ಮಾಡಿ ಮನೆಗಳಿಗೆ ತೆರಳಿದರು. ಮೊದಲ ಬಾರಿಗೆ ಮತ ಹಕ್ಕು ಚಲಾಯಿಸಲು ಬಂದಿದ್ದವರು ಮಾತ್ರ ಆತಂಕದಲ್ಲಿ ಮತ ಚಲಾಯಿಸಿ ನಿರಾಳವಾಗಿ ಮನೆಗೆ ಮರಳಿದರು.

ADVERTISEMENT

ಜಿಲ್ಲೆಯಲ್ಲಿ ಬೆಳಿಗ್ಗೆ 9ಕ್ಕೆ ಶೇಕಡ 6.13 ರಷ್ಟು, 11 ಗಂಟೆಗೆ ಶೇಕಡ 19.59ರಷ್ಟು ಹಾಗೂ ಮಧ್ಯಾಹ್ನ 3 ಗಂಟೆಗೆ ಶೇಕಡ 50ರಷ್ಟು ಮತದಾನವಾಗಿತ್ತು.

‘ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಒಟ್ಟು 818 ಎಲೆಕ್ಟ್ರಾನಿಕ್‌ ಮತ ಯಂತ್ರಗಳನ್ನು ಬಳಸಲಾಗುತ್ತಿದೆ. ಮೊದಲ ಹಂತದ ಚುನಾವಣೆಯಲ್ಲಿ 344 ಎಲೆಕ್ಟ್ರಾನಿಕ್‌ ಮತ ಯಂತ್ರಗಳನ್ನು ಬಳಸಲಾಗಿದ್ದು, ಒಂದೆರಡು ಮತಗಟ್ಟೆ ಬಿಟ್ಟರೆ ಎಲ್ಲೆಡೆ ಮತಯಂತ್ರಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಿವೆ’ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್‌. ತಿಳಿಸಿದರು.

ಮತದಾನ ವಿಳಂಬ

ಚಿಟಗುಪ್ಪ ತಾಲ್ಲೂಕಿನ ನಿರ್ಣಾದ ಮತಗಟ್ಟೆ ಸಂಖ್ಯೆ 7ರಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ ಮತದಾನ ಎರಡು ತಾಸು ವಿಳಂಬವಾಗಿ ಆರಂಭವಾಯಿತು. ಚುನಾವಣಾ ಅಧಿಕಾರಿಗಳು ಹಾಗೂ ತಹಶೀಲ್ದಾರರು ಸ್ಥಳಕ್ಕೆ ಭೇಟಿ ಕೊಟ್ಟು ಗೊಂದಲ ನಿವಾರಿಸಿದರು. ನಂತರ ಸಂಜೆ ಹೆಚ್ಚುವರಿಯಾಗಿ ಎರಡು ತಾಸು ಮತದಾನ ಮಾಡಲು ಅವಕಾಶ ಕಲ್ಪಿಸಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದರು.

ಹುಮನಾಬಾದ್‌ ತಾಲ್ಲೂಕಿನ ಸಿಂದಬಂದಗಿಯ ಮತಗಟ್ಟೆ ಸಂಖ್ಯೆ 14ರಲ್ಲಿ ಇವಿಎಂ ಬಟನ್‌ನಲ್ಲಿ ಸ್ವಲ್ಪ ತಾಂತ್ರಿಕ ದೋಷ ಕಾಣಿಸಿಕೊಂಡು 10 ನಿಮಿಷ ತಡವಾಗಿ ಮತದಾನ ಆರಂಭವಾಯಿತು.

ಹುಮನಾಬಾದ್‌ ತಾಲ್ಲೂಕಿನ ನಂದಗಾಂವ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಪ್ಪರರಾಂವ ಗ್ರಾಮಸ್ಥರು ಚುನಾವಣೆಗೆ ಬಹಿಷ್ಕಾರ ಹಾಕಿದರು. ಕಪ್ಪರಗಾಂವ ಕ್ಷೇತ್ರದಿಂದ ಒಬ್ಬ ಅಭ್ಯರ್ಥಿಯೂ ನಾಮಪತ್ರ ಸಲ್ಲಿಸಿಲ್ಲ. ಗ್ರಾಮಸ್ಥರು ಚುನಾವಣೆಯಿಂದಲೇ ದೂರ ಉಳಿದರು.

ಮತ ಚಲಾಯಿಸಿ ಮೃತಪಟ್ಟ ವೃದ್ಧ

ಚಿಟಗುಪ್ಪ ತಾಲ್ಲೂಕಿನ ಕರಕನಳ್ಳಿ ಗ್ರಾಮದ ಚಾಂದಪಾಶಾ (99) ಅವರು ಕುಟುಂಬದ ಸದಸ್ಯರೊಂದಿಗೆ ವ್ಹೀಲ್ ಚೇರ್‌ನಲ್ಲಿ ಮತಗಟ್ಟೆಗೆ ಬಂದು ಮತಚಲಾಯಿಸಿ ಮನೆಗೆ ತಲುಪಿದ ತಕ್ಷಣ ಮೃತಪಟ್ಟಿದ್ದಾರೆ.
ಬಸವಕಲ್ಯಾಣ ತಾಲ್ಲೂಕಿನ ಹಾರಕೂಡದಲ್ಲಿ ಮತಗಟ್ಟೆ ಅಧಿಕಾರಿಗೆ ಮೂರ್ಛೆರೋಗ ಬಂದ ಕಾರಣ ತಕ್ಷಣ ಅವರನ್ನು ಬದಲಿಸಿ ಬೇರೊಬ್ಬ ಅಧಿಕಾರಿಯನ್ನು ನಿಯೋಜಿಸಲಾಯಿತು. ಮಂಠಾಳ ಹಾಗೂ ಶಿರೂರು ಗ್ರಾಮದಲ್ಲಿ ಬೆಳಿಗ್ಗೆ ಮತಯಂತ್ರಗಳೇ ಆರಂಭವಾಗಲಿಲ್ಲ. ಹೀಗಾಗಿ ತಕ್ಷಣ ಬೇರೆ ಮತಯಂತ್ರಗಳನ್ನು ಜೋಡಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.