ADVERTISEMENT

ಮತದಾರರ ಖರೀದಿ ಹೇಯ ಕೃತ್ಯ: ಈಶ್ವರ ಖಂಡ್ರೆ

ಬಿಜೆಪಿ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ವಾಗ್ಧಾಳಿ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2021, 13:52 IST
Last Updated 15 ಏಪ್ರಿಲ್ 2021, 13:52 IST
ಈಶ್ವರ ಖಂಡ್ರೆ
ಈಶ್ವರ ಖಂಡ್ರೆ   

ಬೀದರ್: ‘ರಾಜ್ಯದ ಆಡಳಿತಾರೂಢ ಬಿಜೆಪಿ ಸರ್ಕಾರ ಬ್ರಹ್ಮಾಂಡ ಭ್ರಷ್ಟಾಚಾರ ನಡೆಸುತ್ತಿದ್ದು, ಲೂಟಿ ಮಾಡಿದ ಹಣದಿಂದ ಬಸವಕಲ್ಯಾಣ ಉಪ ಚುನಾವಣೆಯಲ್ಲಿ ಪ್ರತಿ ಮತಕ್ಕೆ ₹2 ಸಾವಿರ ಕೊಟ್ಟು ಖರೀದಿಗೆ ಮುಂದಾಗಿರುವುದು ಅತ್ಯಂತ ಹೇಯ ಕೃತ್ಯವಾಗಿದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ವಾಗ್ದಾಳಿ ನಡೆಸಿದ್ದಾರೆ.

‘ನಹಿ ಖಾವೂಂಗಾ, ಖಾನೆ ವಾಲೇ ಕೋ ನಹಿ ಛೋಡೂಂಗಾ ಎಂದು ಹೇಳುವ ಮೋದಿ ಅವರಿಗೆ ಕರ್ನಾಟಕದ ಬ್ರಹ್ಮಾಂಡ ಭ್ರಷ್ಟಾಚಾರ ಕಾಣುತ್ತಿಲ್ಲವೇ? ಅವರ ಪಕ್ಷದ ಶಾಸಕರೇ ಬಹಿರಂಗವಾಗಿ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ. ಇದು ಅವರ ಕಿವಿಗೆ ಕೇಳುತ್ತಿಲ್ಲವೇ’ ಎಂದು ಪ್ರಶ್ನಿಸಿದ್ದಾರೆ.

‘ಕೋವಿಡ್-19 ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಆಸ್ಪತ್ರೆಗಳಲ್ಲಿ ಲಸಿಕೆ ಕೊರತೆ ಇದೆ. ಚಿಕಿತ್ಸೆಗೆ ಅಗತ್ಯವಿರುವ ಚುಚ್ಚುಮದ್ದು, ಮಾತ್ರೆಗಳೂ ಸಿಗುತ್ತಿಲ್ಲ. ವೆಂಟಿಲೇಟರ್ ಮತ್ತು ಆಕ್ಸಿಜನ್ ಕೊರತೆ ವ್ಯಾಪಕವಾಗಿದೆ. ಇದಕ್ಕೆ ಸರ್ಕಾರದಲ್ಲಿ ಹಣ ಇಲ್ಲ. ಆದರೆ ಮತ ಖರೀದಿಗೆ ಕೋಟಿ ಕೋಟಿ ಇದೆ. ಈ ಹಣ ಎಲ್ಲಿಂದ ಬಂತು’ ಎಂದು ಕೇಳಿದ್ದಾರೆ.

ADVERTISEMENT

‘ಸಂವಿಧಾನಬದ್ಧವಾಗಿ ನಡೆದುಕೊಳ್ಳಬೇಕಾದ ಚುನಾವಣಾ ಆಯೋಗ, ಜಿಲ್ಲಾಡಳಿತ ಹಾಗೂ ವೀಕ್ಷಕರು ಏನು ಮಾಡುತ್ತಿದ್ದಾರೆ. ಇವರೂ ಸರ್ಕಾರದ ಕೈಗೊಂಬೆಯೇ?’ ಎಂದು ಕಿಡಿ ಕಾರಿದ್ದಾರೆ.

‘ಬಿಜೆಪಿ ಶಾಸಕರ ಖರೀದಿ ಮಾಡಿತು. ಈಗ ಮತದಾರರನ್ನು ಖರೀದಿ ಮಾಡುತ್ತಿದೆ. ಇನ್ನು ಕರ್ನಾಟಕದ ಖರೀದಿ ಒಂದೇ ಉಳಿದಿದೆ. ಜನ ಈಗ ಎಚ್ಚೆತ್ತು, ಬಿಜೆಪಿಯ ನೋಟು, ಕಾಂಗ್ರೆಸ್‌ಗೆ ವೋಟು ಎಂಬ ನೀತಿ ಅನುಸರಿಸಿ, ಕಲ್ಯಾಣ ಕರ್ನಾಟಕವನ್ನು ಸಂಪೂರ್ಣ ಕಡೆಗಣಿಸಿರುವ ಬಿಜೆಪಿ ಸರ್ಕಾರಕ್ಕೆ ತಕ್ಕ ಉತ್ತರ ನೀಡಬೇಕು’ ಎಂದು ಮನವಿ ಮಾಡಿದ್ದಾರೆ.

‘ಬಸವಕಲ್ಯಾಣಕ್ಕಾಗಿ ಹಗಲಿರುಳು ಶ್ರಮಿಸಿದ 4 ದಶಕಗಳ ಕಾಲ ನಿಸ್ವಾರ್ಥವಾಗಿ ದುಡಿದು ಮಡಿದ ದಿವಂಗತ ನಾರಾಯಣರಾವ್ ಅವರ ಪತ್ನಿ ಮಾಲಾ ನಾರಾಯಣರಾವ್ ಅವರಿಗೆ ಮತ ನೀಡುವ ಮೂಲಕ ಜನತೆ ನಾರಾಯಣರಾವ್ ಋಣ ತೀರಿಸುತ್ತಾರೆ ಎಂಬ ವಿಶ್ವಾಸವಿದೆ. ಬಿಜೆಪಿಯ ಅವನತಿ ಬಸವಕಲ್ಯಾಣದಿಂದಲೇ ಆರಂಭವಾಗಲಿದೆ’ ಎಂದು ಹೇಳಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.