ADVERTISEMENT

ಜಲ ಸಂರಕ್ಷಣೆಗೆ ಶಾಹೀನ್ ವಿದ್ಯಾರ್ಥಿಗಳ ಅಭಿಯಾನ

ನಗರದಲ್ಲಿ ಸಸಿ ನೆಡುವಿಕೆ, ಮಳೆ ನೀರು ಕೊಯ್ಲು ಘಟಕಗಳಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2019, 20:14 IST
Last Updated 22 ಜುಲೈ 2019, 20:14 IST
ನೀರು ಉಳಿಸಿ ಜಗತ್ತು ಉಳಿಸಿ, ನಿಸರ್ಗ ಉಳಿಸಿ ಅಭಿಯಾನ ಪ್ರಯುಕ್ತ ಬೀದರ್‌ನ ಬಸವಗಿರಿಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಾಂತೇಶ ಬೀಳಗಿ ಸಸಿ ನೆಟ್ಟರು. ಅಬ್ದುಲ್ ಖದೀರ್, ಅಕ್ಕ ಅನ್ನಪೂರ್ಣ, ರಮೇಶ ಮಠಪತಿ ಇದ್ದರು
ನೀರು ಉಳಿಸಿ ಜಗತ್ತು ಉಳಿಸಿ, ನಿಸರ್ಗ ಉಳಿಸಿ ಅಭಿಯಾನ ಪ್ರಯುಕ್ತ ಬೀದರ್‌ನ ಬಸವಗಿರಿಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಾಂತೇಶ ಬೀಳಗಿ ಸಸಿ ನೆಟ್ಟರು. ಅಬ್ದುಲ್ ಖದೀರ್, ಅಕ್ಕ ಅನ್ನಪೂರ್ಣ, ರಮೇಶ ಮಠಪತಿ ಇದ್ದರು   

ಬೀದರ್: ಶಿಕ್ಷಣದ ಜತೆಗೆ ಸಾಮಾಜಿಕ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿರುವ ಶಾಹೀನ್ ಪದವಿಪೂರ್ವ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ನಗರದಲ್ಲಿ ಸೋಮವಾರ ನೀರು ಉಳಿಸಿ ಜಗತ್ತು ಉಳಿಸಿ, ನಿಸರ್ಗ ಉಳಿಸಿ ಅಭಿಯಾನ ನಡೆಸುವ ಮೂಲಕ ಗಮನ ಸೆಳೆದರು.

ಕಾಲೇಜಿನ 3,825 ವಿದ್ಯಾರ್ಥಿಗಳು ನಗರದ ಪ್ರಮುಖ ರಸ್ತೆಗಳಲ್ಲಿ ಏಕಕಾಲಕ್ಕೆ ಮಾನವ ಸರಪಳಿ ರಚಿಸಿ ನೀರಿನ ಮಿತ ಬಳಕೆ ಹಾಗೂ ಮಳೆ ನೀರು ಕೊಯ್ಲು ಜಾಗೃತಿ ಮೂಡಿಸಿದರು.

ಅಂಬೇಡ್ಕರ್ ವೃತ್ತದಿಂದ ಶಹಾಗಂಜ್ ಕಮಾನ್, ಗವಾನ್ ಚೌಕ್, ಚೌಬಾರಾ, ನಯಿ ಕಮಾನ್, ಬಸವೇಶ್ವರ ವೃತ್ತ, ಮಹಾವೀರ ವೃತ್ತ, ಭಗತ್‌ಸಿಂಗ್ ವೃತ್ತ, ಶಿವಾಜಿ ವೃತ್ತ, ಹರಳಯ್ಯ ವೃತ್ತದ ಮಾರ್ಗವಾಗಿ ಅಂಬೇಡ್ಕರ್ ವೃತ್ತದವರೆಗೆ ಮಾನವ ಸರಪಳಿ ರಚಿಸಿದರು.

ADVERTISEMENT

ವಿದ್ಯಾರ್ಥಿಗಳು ‘ನೀರು ಉಳಿಸಿ ಜಗತ್ತು ಉಳಿಸಿ, ನಿಸರ್ಗ ಉಳಿಸಿ’, ‘ನೀರು ಉಳಿಸಿ ಭವಿಷ್ಯವನ್ನು ಭದ್ರಪಡಿಸಿ’ ಎಂಬಿತ್ಯಾದಿ ಘೋಷಣಾ ಫಲಕಗಳನ್ನು ಹಿಡಿದುಕೊಂಡಿದ್ದರು. ಘೋಷಣೆಗಳ ಮೂಲಕ ಸಾರ್ವಜನಿಕರಿಗೆ ನೀರು ಹಾಗೂ ನಿಸರ್ಗದ ಮಹತ್ವವನ್ನು ಮನದಟ್ಟು ಮಾಡಿಕೊಡಲು ಪ್ರಯತ್ನಿಸಿದರು.

ಪಾಪನಾಶ ಬಳಿಯ ಬಸವಗಿರಿಯಲ್ಲಿ 100 ಹಾಗೂ ನೆಹರೂ ಕ್ರೀಡಾಂಗಣ ಹತ್ತಿರದ ಮಸ್ಜೀದ್ ಎ ಖಾದ್ರಿಯಾ ಬಳಿ 50 ಸಸಿಗಳನ್ನು ನೆಟ್ಟರು. ಇದೇ ವೇಳೆ ಎರಡೂ ಕಡೆಗಳಲ್ಲಿ ಮಳೆ ನೀರು ಕೊಯ್ಲು ಘಟಕಗಳಿಗೆ ಚಾಲನೆಯನ್ನೂ ನೀಡಲಾಯಿತು.

ಅಭಿಯಾನದ ಸಂಪೂರ್ಣ ಖರ್ಚು-ವೆಚ್ಚಗಳನ್ನು ವಿದ್ಯಾರ್ಥಿಗಳೇ ಭರಿಸಿದರು. ಪಾಲಕರು ಜೇಬು ಖರ್ಚಿಗಾಗಿ ನೀಡಿದ ಹಣದ ಕೆಲ ಪಾಲನ್ನು ಅಭಿಯಾನಕ್ಕೆ ವಿನಿಯೋಗಿಸಿದರು.

ಅಂಬೇಡ್ಕರ್ ವೃತ್ತದಲ್ಲಿ ನಿಸರ್ಗ ಉಳಿಸಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಾಂತೇಶ ಬೀಳಗಿ, ‘ನೀರು ಹಾಗೂ ನಿಸರ್ಗದ ಉಳಿವಿಗಾಗಿ ವಿದ್ಯಾರ್ಥಿಗಳು ಜನಜಾಗೃತಿ ಮೂಡಿಸುತ್ತಿರುವುದು ಪ್ರಶಂಸನೀಯ’ ಎಂದರು.

‘ಜೀವದ ಮೂಲ ಆಧಾರವಾದ ನೀರನ್ನು ಮುಂದಿನ ಪೀಳಿಗೆಗೆ ಬಳುವಳಿಯಾಗಿ ಕೊಡಬೇಕಿದೆ. ಸರ್ಕಾರ ಸ್ವಚ್ಛಮೇವ ಜಯತೆ, ಜಲಾಮೃತದಂತಹ ಕಾರ್ಯಕ್ರಮಗಳ ಮೂಲಕ ಸ್ವಚ್ಛತೆ ಹಾಗೂ ನೀರಿನ ಸಂರಕ್ಷಣೆ ಕಾರ್ಯ ಕೈಗೊಳ್ಳುತ್ತಿದೆ’ ಎಂದು ಹೇಳಿದರು.

ಶಾಹೀನ್ ಶಿಕ್ಷಣ ಸಮೂಹ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ಖದೀರ್ ಮಾತನಾಡಿ, ‘ಈಚಿನ ವರ್ಷಗಳಲ್ಲಿ ಮಳೆ ಕೊರತೆ ಹೆಚ್ಚಾಗಿದೆ. ಹೀಗಾಗಿ ಬಿದ್ದಷ್ಟೂ ಮಳೆ ನೀರನ್ನು ಸಂಗ್ರಹಿಸಿ, ಮರು ಬಳಕೆ ಮಾಡಬೇಕಾಗಿದೆ. ಮಳೆ ನೀರು ಕೊಯ್ಲು ಆಂದೋಲನದ ಮಾದರಿಯಲ್ಲಿ ನಡೆಯಬೇಕಾಗಿದೆ’ ಎಂದು ತಿಳಿಸಿದರು.

‘ಸಾರ್ವಜನಿಕರು ನೀರನ್ನು ಹಿತ ಮಿತವಾಗಿ ಬಳಸಬೇಕು. ಕಟ್ಟಡಗಳಿಗೆ ಮಳೆ ನೀರು ಕೊಯ್ಲು ವಿಧಾನವನ್ನು ಅಳವಡಿಸಬೇಕು’ ಎಂದು ಸಲಹೆ ಮಾಡಿದರು.

‘ಕಾಲೇಜು ವಿದ್ಯಾರ್ಥಿಗಳು ‘ಪಾಕೇಟ್ ಮನಿ’ ಬಳಸಿ ನಿಸರ್ಗ ಜಾಗೃತಿ ಅಭಿಯಾನ ನಡೆಸಿದ್ದಾರೆ. ವಿದ್ಯಾರ್ಥಿ ದಿಸೆಯಲ್ಲಿಯೇ ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದು ಸಂತಸದ ಸಂಗತಿ’ ಎಂದು ಹೇಳಿದರು.

ಶಾಹೀನ್ ಶಿಕ್ಷಣ ಸಮೂಹ ಸಂಸ್ಥೆಯ ನಿರ್ದೇಶಕ ಮಹಮ್ಮದ್ ಆರಿಫ್, ಕಾರ್ಯಕ್ರಮದ ಉಸ್ತುವಾರಿ ಮಹಮ್ಮದ್ ಖುರ್ಷಿದ್, ವಿವಿಧ ಇಲಾಖೆಗಳ ಅಧಿಕಾರಿಗಳು, ಉಪನ್ಯಾಸಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಜಿಲ್ಲಾ ಪಂಚಾಯಿತಿ, ಅರಣ್ಯ, ತೋಟಗಾರಿಕೆ, ಕೃಷಿ ಮತ್ತಿತರ ಇಲಾಖೆಗಳ ಸಹಯೋಗದೊಂದಿಗೆ ನಡೆದ ನಿಸರ್ಗ ಜಾಗೃತಿ ಅಭಿಯಾನವು ಪರಿಸರ ಸಂರಕ್ಷಣೆ ಬಗೆಗೆ ಜನರನ್ನು ಚಿಂತನೆಗೆ ಹಚ್ಚುವಲ್ಲಿ ಯಶಸ್ವಿಯಾಯಿತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.