ADVERTISEMENT

ಕೌಠಾ: ಕುಡಿಯುವ ನೀರಿಗೆ ಹಾಹಾಕಾರ

ಮಳೆಗಾಲದಲ್ಲೂ ತಪ್ಪದ ನೀರಿನ ಬವಣೆ, ಸಮಸ್ಯೆ ಬಗೆಹರಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2020, 1:09 IST
Last Updated 8 ಸೆಪ್ಟೆಂಬರ್ 2020, 1:09 IST
ಔರಾದ್ ತಾಲ್ಲೂಕಿನ ಕೌಠಾದಲ್ಲಿ ಮಹಿಳೆಯರು ಕುಡಿಯುವ ನೀರಿಗಾಗಿ ನಳದ ಮುಂದೆ ಸರತಿ ಸಾಲಿನಲ್ಲಿ ನಿಂತಿರುವುದು
ಔರಾದ್ ತಾಲ್ಲೂಕಿನ ಕೌಠಾದಲ್ಲಿ ಮಹಿಳೆಯರು ಕುಡಿಯುವ ನೀರಿಗಾಗಿ ನಳದ ಮುಂದೆ ಸರತಿ ಸಾಲಿನಲ್ಲಿ ನಿಂತಿರುವುದು   

ಔರಾದ್: ತಾಲ್ಲೂಕಿನ ಕೌಠಾ (ಬಿ) ಗ್ರಾಮದಲ್ಲಿ ಮಳೆಗಾಲದಲ್ಲೂ ಕುಡಿವ ನೀರಿನ ಸಮಸ್ಯೆ ಎದುರಾಗಿದೆ.

‘ಗ್ರಾಮ ಪಂಚಾಯಿತಿ ಕೇಂದ್ರವಾಗಿರುವ ಈ ಊರಲ್ಲಿ ನಿರಂತರವಾಗಿ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿರುತ್ತದೆ. ನಮ್ಮ ಊರಿನ ಪಕ್ಕದಲ್ಲೇ ಮಂಜ್ರಾ ನದಿ ಹರಿಯುತ್ತದೆ. ಆದರೂ ಕುಡಿಯುವ ನೀರಿನ ಬವಣೆ ಮಾತ್ರ ತಪ್ಪುತ್ತಿಲ್ಲ’ ಎಂದು ಗ್ರಾಮಸ್ಥರು ಅಸಮಾಧಾನ ಹೊರ ಹಾಕಿದ್ದಾರೆ.

‘ಸಮಸ್ಯೆ ಪರಿಹರಿಸುವಂತೆ ಗ್ರಾಮ ಪಂಚಾಯಿತಿಯವರಿಗೆ ಸಾಕಷ್ಟು ಸಲ ಮನವಿ ಮಾಡಿಕೊಂಡರೂ ಸ್ಪಂದನೆ ಸಿಕ್ಕಿಲ್ಲ. ಜನರಿಗೆ ಶುದ್ಧ ನೀರು ಪೂರೈಸುವಲ್ಲಿ ಪಂಚಾಯಿತಿಯವರು ವಿಫಲರಾಗಿದ್ದಾರೆ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಇಂತಹ ಮಳೆಗಾಲದಲ್ಲೂ ನಮಗೆ ಕುಡಿಯಲು ನೀರು ಸಿಗುತ್ತಿಲ್ಲ. ವಾರಗಟ್ಟಲೇ ಕಾಯಬೇಕು. ಇಲ್ಲವೇ ಕಲುಷಿತ ನೀರು ಕುಡಿಯಬೇಕು' ಎಂದು ವಾರ್ಡ್‌ 1 ಮತ್ತು ವಾರ್ಡ್‌ -2 ಮಹಿಳೆಯರು ಗೋಳು ತೋಡಿಕೊಂಡಿದ್ದಾರೆ.

‘ಕೆಲ ವಾರ್ಡ್‌ಗಳಲ್ಲಿ ಕುಡಿಯಲು ನೀರಿನ ಕೊರತೆ ಇದೆ. ವಿದ್ಯುತ್ ಸಮಸ್ಯೆಯಿಂದ ನಿತ್ಯ ನೀರು ಪೂರೈಸಲು ಆಗುತ್ತಿಲ್ಲ. ನಿರಂತರ ಜ್ಯೋತಿ ವಿದ್ಯುತ್ ಸಂಪರ್ಕ ಕಲ್ಪಿಸಿದರೆ ಸಮಸ್ಯೆ ಪರಿಹಾರ ಆಗುತ್ತದೆ. ಈ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ’ ಎನ್ನುತ್ತಾರೆ ಪಿಡಿಒ ಕುಮುದಾ.

‘ಕೌಠಾದಲ್ಲಿ ನೀರು ಶುದ್ಧೀಕರಣ ಘಟಕ ಇದೆ. ಐದಾರು ವಾರ್ಡ್‌ ಜನರಿಗೆ ಅದರಿಂದ ಅನುಕೂಲವಾಗುತ್ತಿದೆ. ಇನ್ನು ಕೆಲ ಬಡವಾಣೆ ನಿವಾಸಿಗಳು ಕೊಳವೆ ಬಾವಿ ನೀರು ಉಪಯೋಗಿಸುತ್ತಾರೆ. ವಾರ್ಡ್‌-1 ಮತ್ತು ವಾರ್ಡ್‌– 2 ನಿವಾಸಿಗಳಿಗೆ ಸ್ವಲ್ಪ ಸಮಸ್ಯೆಯಾಗುತ್ತಿದೆ’ ಎಂದು ಅವರು ಸ್ಪಷ್ಟನೆ ನೀಡಿದರು.

ಕೌಠಾ ಗ್ರಾಮ ಜಿಲ್ಲಾ ಕೇಂದ್ರಕ್ಕೆ ಹೊಂದಿಕೊಂಡಿರುವ ದೊಡ್ಡ ಗ್ರಾಮ ಪಂಚಾಯಿತಿ. ಸರ್ಕಾರ ಹೆಚ್ಚವರಿ ಅನುದಾನ ನೀಡಿ ಕುಡಿಯುವ ನೀರು, ಸಿಸಿ ರಸ್ತೆ, ಚರಂಡಿ ವ್ಯವಸ್ಥೆ ಮಾಡುವಂತೆ ಗ್ರಾಮಸ್ಥರು ಬೇಡಿಕೆ ಮಂಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.