ADVERTISEMENT

ಕಾಯಂಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಧರಣಿ: ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ

​ಪ್ರಜಾವಾಣಿ ವಾರ್ತೆ
Published 23 ಮೇ 2025, 14:14 IST
Last Updated 23 ಮೇ 2025, 14:14 IST
ಬೀದರ್‌ ಸಿಟಿ ವಾಟರ್‌ ಸಪ್ಲೈ ವರ್ಕರ್ಸ್‌ ಸೊಸೈಟಿಯಿಂದ ಬೀದರ್ ಜಿಲ್ಲಾಧಿಕಾರಿ ಕಚೇರಿ ಸಮೀಪ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಶುಕ್ರವಾರ ಎರಡನೇ ದಿನಕ್ಕೆ ಕಾಲಿಟ್ಟಿತು
ಬೀದರ್‌ ಸಿಟಿ ವಾಟರ್‌ ಸಪ್ಲೈ ವರ್ಕರ್ಸ್‌ ಸೊಸೈಟಿಯಿಂದ ಬೀದರ್ ಜಿಲ್ಲಾಧಿಕಾರಿ ಕಚೇರಿ ಸಮೀಪ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಶುಕ್ರವಾರ ಎರಡನೇ ದಿನಕ್ಕೆ ಕಾಲಿಟ್ಟಿತು   

ಬೀದರ್‌: ನಗರಸಭೆ ವ್ಯಾಪ್ತಿಯಲ್ಲಿ 24X7 ಕುಡಿಯುವ ನೀರು ಸರಬರಾಜು ಯೋಜನೆಯಡಿ ಕೆಲಸ ನಿರ್ವಹಿಸುತ್ತಿರುವವರ ಸೇವೆ ಕಾಯಂಗೊಳಿಸಬೇಕೆಂದು ಆಗ್ರಹಿಸಿ ಬೀದರ್‌ ಸಿಟಿ ವಾಟರ್‌ ಸಪ್ಲೈ ವರ್ಕರ್ಸ್‌ ಸೊಸೈಟಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಸಮೀಪ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಶುಕ್ರವಾರ ಎರಡನೇ ದಿನಕ್ಕೆ ಕಾಲಿರಿಸಿದೆ.

ಎರಡು ದಿನಗಳಿಂದ ಧರಣಿ ನಡೆಸುತ್ತಿರುವುದರಿಂದ ನಗರದಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಇನ್ನೊಂದೆಡೆ ಬೇಡಿಕೆ ಈಡೇರಿಸುವವರೆಗೆ ಧರಣಿ ಕೈಬಿಡುವುದಿಲ್ಲ ಎಂದು ಸೊಸೈಟಿ ಮುಖಂಡರು ಸ್ಪಷ್ಟಪಡಿಸಿದ್ದಾರೆ.

ಬೀದರ್‌ ನಗರಕ್ಕೆ ಕುಡಿಯುವ ನೀರು ಸರಬರಾಜು ಯೋಜನೆಯಡಿ 50 ಜನರನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗಿದೆ. ಯೋಜನೆ ಶುರುವಾದ ನಂತರ ಕೆಲಸ ಕಾಯಂಗೊಳಿಸಲಾಗುವುದು ಎಂದು ಆಶ್ವಾಸನೆ ನೀಡಲಾಗಿತ್ತು. ಈಡೇರದ ಕಾರಣ ಅನಿವಾರ್ಯವಾಗಿ ಧರಣಿ ನಡೆಸಲಾಗುತ್ತಿದೆ ಎಂದು ಸೊಸೈಟಿ ಮುಖಂಡರು ತಿಳಿಸಿದ್ದಾರೆ.

ADVERTISEMENT

ಬೀದರ್‌ ನಗರದ ಜನಸಂಖ್ಯೆ ಮೂರು ಲಕ್ಷಕ್ಕೂ ಅಧಿಕವಿದೆ. 50 ಜನ ಇಡೀ ನಗರಕ್ಕೆ ನೀರು ಸರಬರಾಜು ಮಾಡುವ ಜವಾಬ್ದಾರಿ ಹೊತ್ತಿಕೊಂಡು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ, ಎರಡು ತಿಂಗಳಿಂದ ವೇತನ ಪಾವತಿಸಿಲ್ಲ. ಸೇವೆ ಕೂಡ ಕಾಯಂಗೊಳಿಸಿಲ್ಲ ಎಂದು ಆರೋಪಿಸಿದ್ದಾರೆ.

ಸೊಸೈಟಿ ಅಧ್ಯಕ್ಷ ತುಕಾರಾಮ ಕಾಂಬ್ಳೆ, ಮಹೇಶ, ದಿಗಂಬರ, ಈಶ್ವರ, ರಮೇಶ, ರವಿ, ಶಿವರಾಜ, ಮಹಾದೇವ, ಆಸಿಫ್‌, ಉಮೇಶ ಮತ್ತಿತರರು ಧರಣಿಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.