ADVERTISEMENT

ಮಕ್ಕಳ ಸಮಸ್ಯೆಗೆ ಪರಿಹಾರಕ್ಕೆ ಬದ್ಧತೆಯಿಂದ ಕೆಲಸ ಮಾಡಿ

ಮಕ್ಕಳ ಸ್ನೇಹಿ ನ್ಯಾಯಾಲಯ ಉದ್ಘಾಟಿಸಿದ ನ್ಯಾ.ಸಂಜಯ ಗೌಡ

​ಪ್ರಜಾವಾಣಿ ವಾರ್ತೆ
Published 4 ಜೂನ್ 2022, 14:18 IST
Last Updated 4 ಜೂನ್ 2022, 14:18 IST
ಬೀದರ್‌ನ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಶನಿವಾರ ಮಕ್ಕಳ ಸ್ನೇಹಿ ನ್ಯಾಯಾಲಯವನ್ನು ಹೈಕೋರ್ಟ್‌ ನ್ಯಾಯಮೂರ್ತಿ ಹಾಗೂ ಬೀದರ್‌ ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶ ಸಂಜಯ ಗೌಡ ಉದ್ಘಾಟಿಸಿದರು. ನಿವೃತ್ತ ನ್ಯಾಯಮೂರ್ತಿ ಎನ್‌.ಕೆ.ಪಾಟೀಲ, ಹೈಕೋರ್ಟ್‌ ರಿಜಿಸ್ಟ್ರಾರ್ ಶಿವಶಂಕರ ಗೌಡ, ನ್ಯಾಯಾಧೀಶ ಬಸವರಾಜ ಚೇಗರೆಡ್ಡಿ, ಅಶೋಕ ಮಾನೂರೆ ಇದ್ದಾರೆ
ಬೀದರ್‌ನ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಶನಿವಾರ ಮಕ್ಕಳ ಸ್ನೇಹಿ ನ್ಯಾಯಾಲಯವನ್ನು ಹೈಕೋರ್ಟ್‌ ನ್ಯಾಯಮೂರ್ತಿ ಹಾಗೂ ಬೀದರ್‌ ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶ ಸಂಜಯ ಗೌಡ ಉದ್ಘಾಟಿಸಿದರು. ನಿವೃತ್ತ ನ್ಯಾಯಮೂರ್ತಿ ಎನ್‌.ಕೆ.ಪಾಟೀಲ, ಹೈಕೋರ್ಟ್‌ ರಿಜಿಸ್ಟ್ರಾರ್ ಶಿವಶಂಕರ ಗೌಡ, ನ್ಯಾಯಾಧೀಶ ಬಸವರಾಜ ಚೇಗರೆಡ್ಡಿ, ಅಶೋಕ ಮಾನೂರೆ ಇದ್ದಾರೆ   

ಬೀದರ್‌: ‘ಸಮಸ್ಯೆಗೊಳಗಾದ ಮಕ್ಕಳಿಗೆ ಪರಿಹಾರ ಹಾಗೂ ನ್ಯಾಯ ದೊರಕಿಸಿಕೊಡುವಲ್ಲಿ ಪ್ರತಿಯೊಬ್ಬರೂ ಬದ್ಧತೆಯಿಂದ ಕಾರ್ಯನಿರ್ವಹಿಸುವ ಅಗತ್ಯ ಇದೆ’ ಎಂದು ಹೈಕೋರ್ಟ್‌ ನ್ಯಾಯಮೂರ್ತಿ ಹಾಗೂ ಬೀದರ್‌ ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶ ಸಂಜಯ ಗೌಡ ಹೇಳಿದರು.

ಜಿಲ್ಲಾ ನ್ಯಾಯಾಂಗ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ವಕೀಲರ ಸಂಘದ ಸಹಯೋಗದಲ್ಲಿ ಶನಿವಾರ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಮಕ್ಕಳ ಸ್ನೇಹಿ ನ್ಯಾಯಾಲಯದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಅನ್ಯಾಯಕ್ಕೆ ಒಳಗಾದ ಮಕ್ಕಳೇ ನ್ಯಾಯಾಲಯಕ್ಕೆ ಬರುವುದರಿಂದ ವಕೀಲರು, ಅಧಿಕಾರಿಗಳು ಹಾಗೂ ಪಾಲಕರು ಪ್ರಕರಣದಲ್ಲಿ ಸೂಕ್ಷ್ಮವಾಗಿ ನಡೆದುಕೊಳ್ಳಬೇಕಾಗುತ್ತದೆ. ಈ ದಿಸೆಯಲ್ಲಿ ಪ್ರತಿಯೊಬ್ಬರೂ ಕಾರ್ಯನಿರ್ವಹಿಸಲಿದ್ದಾರೆ ಎನ್ನುವ ವಿಶ್ವಾಸ ಇದೆ. ಜಿಲ್ಲೆಯ ನ್ಯಾಯಾಂಗ ಇಲಾಖೆಯ ಆಡಳಿತ ಅಧಿಕಾರಿಯಾಗಿಯೂ ಮೂಲಸೌಕರ್ಯ ಒದಗಿಸುವುದು ನನ್ನ ಹೊಣೆಯಾಗಿದೆ. ನ್ಯಾಯಾಲಯಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಅಗತ್ಯವಿರುವ ಸಹಕಾರ ನೀಡಲಾಗುವುದು ಎಂದು ಹೇಳಿದರು.

ADVERTISEMENT

ನಿವೃತ್ತ ನ್ಯಾಯಮೂರ್ತಿ ಎನ್‌.ಕೆ.ಪಾಟೀಲ, ಹೈಕೋರ್ಟ್‌ ರಿಜಿಸ್ಟ್ರಾರ್ ಶಿವಶಂಕರ ಗೌಡ, ಜಿಲ್ಲಾ ಪ್ರಧಾನ ಹಾಗೂ ಸೆಷನ್ಸ್ ನ್ಯಾಯಾಧೀಶ ಬಸವರಾಜ ಚೇಗರಡ್ಡಿ, ಬೀದರ್‌ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಅಶೋಕ ಮಾನೂರೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ರವೀಂದ್ರ ರತ್ನಾಕರ್, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ಅಶೋಕ ಖಂಡ್ರೆ, ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ರವಿಕುಮಾರ ವಡ್ಡೆ, ಪ್ರಧಾನ ಕಾರ್ಯದರ್ಶಿ ಶಿವಶರಣಪ್ಪ ಪಾಟೀಲ, ಜಂಟಿ ಕಾರ್ಯದರ್ಶಿ ಕೃಷ್ಣ ಬಿರಾದಾರ ಇದ್ದರು.

ಇದಕ್ಕೂ ಮೊದಲು ನ್ಯಾಯಾಲಯದ ಆವರಣದಲ್ಲಿ ಗೃಹ ಇಲಾಖೆಯಿಂದ ಪೊಲೀಸರು ನ್ಯಾಯಮೂರ್ತಿಗಳಿಗೆ ಗೌರವ ವಂದನೆ ಸಲ್ಲಿಸಿದರು. ಮಕ್ಕಳ ನ್ಯಾಯಾಲಯದಲ್ಲಿ ಕಕ್ಷಿದಾರ ಮಕ್ಕಳಿಗೆ ಕುಳಿತುಕೊಳ್ಳಲು ಮಾಡಿರುವ ವ್ಯವಸ್ಥೆ ವೀಕ್ಷಿಸಿ ನ್ಯಾಯಮೂರ್ತಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.

ಮಕ್ಕಳ ಹಕ್ಕು ರಕ್ಷಣಾ ಅಧಿಕಾರಿ ಗೌರಿಶಂಕರ ಪ್ರತಾಪುರೆ ಸ್ವಾಗತಿಸಿ, ನಿರೂಪಿಸಿದರು. ನ್ಯಾಯಾಂಗ ಇಲಾಖೆಯ ಸಿಬ್ಬಂದಿ ಹಾಗೂ ವಕೀಲರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.