ಬೀದರ್: ನಗರದ ಬಹಮನಿ ಕೋಟೆ ಆವರಣದಲ್ಲಿ ಶನಿವಾರ ಬೆಳಿಗ್ಗೆ 11ನೇ ಅಂತರರಾಷ್ಟ್ರೀಯ ಯೋಗ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು.
ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಸಾಮೂಹಿಕವಾಗಿ ಯೋಗ ಮಾಡಿದರು.
ಸೂರ್ಯೋದಯಕ್ಕೂ ಮುನ್ನ ಕೋಟೆಯ ಪರಿಸರದಲ್ಲಿ ಮ್ಯಾಟ್ ಹಾಕಿಕೊಂಡು ಶಿಸ್ತಿನಿಂದ ಸಾಲಾಗಿ ಕುಳಿತರು. ಆರಂಭದಲ್ಲಿ ದೇಹದ ಚಲನಕ್ರಿಯೆ ಚುರುಕುಗೊಳಿಸಲು ಕೆಲನಿಮಿಷ ವಾರ್ಮ್ ಅಪ್ ಮಾಡಿದರು. ಕಪಾಲಭಾತಿ, ನಾಡಿಶೋಧನ ಪ್ರಾಣಾಯಾಮ, ಭ್ರಾಮರಿ ಪ್ರಾಣಾಯಾಮ, ಧ್ಯಾನ ಮಾಡಿದರು. ಯೋಗ ಮಾಸ್ಟರ್ ಆನಂದ ಅವರು ಯೋಗ ಹೇಳಿಕೊಟ್ಟರು. ವಿವಿಧ ಆಸನಗಳಿಂದ ಆಗುವ ಪ್ರಯೋಜನಗಳ ಕುರಿತು ವಿವರಿಸಿದರು. ಆನಂತರ ಐದು ನಿಮಿಷಗಳ ಕಾಲ ವೈಯಕ್ತಿಕ ಯೋಗ ಮಾಡಿ, ಕಠಿಣವಾದ ಆಸನಗಳನ್ನು ಪ್ರದರ್ಶಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ, ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ ಬದೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ಹೆಚ್ಚುವರಿ ಎಸ್ಪಿ ಚಂದ್ರಕಾಂತ ಪೂಜಾರಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ವಾನತಿ ಎಂ.ಎಂ., ಜಿಲ್ಲಾ ಆಯುಷ್ ಅಧಿಕಾರಿ ಖುತೇಜಾ ಬೇಗಂ ಮತ್ತಿತರರು ಹಾಜರಿದ್ದರು.
ಜಿಲ್ಲಾಡಳಿತ, ಆಯುಷ್ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಸಚಿವ ಈಶ್ವರ ಬಿ. ಖಂಡ್ರೆ ಅವರು ಸಸಿಗೆ ನೀರೆರೆದು ಉದ್ಘಾಟಿಸಿದರು. ಬಳಿಕ ಮಾತನಾಡಿ, ನಿತ್ಯ ಪ್ರತಿಯೊಬ್ಬರೂ ಯೋಗ ಮಾಡುವುದನ್ನು ರೂಢಿಸಿಕೊಳ್ಳಬೇಕು. ನಾನು ಪ್ರಯತ್ನಿಸುವೆ. ಆರೋಗ್ಯವೇ ಭಾಗ್ಯ. ಆರೋಗ್ಯ ಇದ್ದರೆ ಎಲ್ಲವೂ. ಯೋಗ ಮಾಡುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಮನಸ್ಸಿನ ಏಕಾಗ್ರತೆ ಬೆಳೆಯುತ್ತದೆ. ಶಾಂತಿ, ಸಮಾಧಾನದಿಂದ ಬದುಕಲು ಸಹಾಯವಾಗುತ್ತದೆ ಎಂದು ಹೇಳಿದರು.
ಭಾರತೀಯ ಪರಂಪರೆಯಲ್ಲಿ ಯೋಗಕ್ಕೆ ವಿಶೇಷ ಸ್ಥಾನಮಾನವಿದೆ. ವಿಶ್ವಕ್ಕೆ ಯೋಗದ ಕೊಡುಗೆ ಕೊಟ್ಟದ್ದು ಭಾರತ. ಯೋಗದಿಂದ ಸಾಕಷ್ಟು ಪ್ರಯೋಜನಗಳಿವೆ. ಕೋವಿಡ್‌ನಲ್ಲಿ ಆಮ್ಲಜನಕ ಇಲ್ಲದೇ ಅನೇಕರು ಮೃತಪಟ್ಟಿದ್ದು ನಮಗೆಲ್ಲ ಗೊತ್ತಿಲ್ಲ. ಯೋಗ, ಧ್ಯಾನದಿಂದ ಆರೋಗ್ಯವಂತರಾಗಿ ಬದುಕಬಹುದು. ಯೋಗ ಒಂದು ದಿನಕ್ಕೆ ಸೀಮಿತವಾಗಬಾರದು ಎಂದು ತಿಳಿಸಿದರು.
ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ ಮಾತನಾಡಿ, ಯೋಗ ನಮ್ಮ ದೇಶದ ಸಂಸ್ಕೃತಿ, ಆಚಾರ- ವಿಚಾರಗಳನ್ನು ಒಳಗೊಂಡಿರುವ ಉತ್ತಮ ಆರೋಗ್ಯದ ಆಚರಣೆಯಾಗಿದೆ. ಇಂದು ವಿಶ್ವದಾದ್ಯಂತ ಯೋಗ ದಿನ ಆಚರಿಸಲಾಗುತ್ತಿದ್ದು, ಅದರ ಮಹತ್ವ ಎಲ್ಲರಿಗೂ ಗೊತ್ತಾಗಿದೆ ಎಂದರು.
ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಮಾತನಾಡಿ, ಯೋಗ ಮನಸ್ಸು, ದೇಹ ಒಂದುಗೂಡಿಸಿ ಮನುಷ್ಯನನ್ನು ಕ್ರಿಯಾಶೀಲಗೊಳಿಸುತ್ತದೆ. ನಿತ್ಯ ಜೀವನದಲ್ಲಿ ಯೋಗ ಮಾಡಿದರೆ ಉತ್ತಮ ಎಂದರು.
‘ಸುಳ್ಳು ಹೇಳುವುದು ಬಿಜೆಪಿ ಕೆಲಸ’ ‘
ನಮ್ಮ ಸರ್ಕಾರದಲ್ಲಿ ಭ್ರಷ್ಟಾಚಾರಕ್ಕೆ ಯಾವುದೇ ಜಾಗವಿಲ್ಲ. ಒಂದುವೇಳೆ ಯಾರಾದರೂ ಅಕ್ರಮ ಎಸಗಿರುವುದು ದೃಢಪಟ್ಟರೆ ಕ್ರಮ ಖಚಿತ. ಸುಳ್ಳು ಹೇಳುವುದು ಬಿಜೆಪಿಯವರ ಕೆಲಸ. ನಮ್ಮ ಸರ್ಕಾರದ ಜನಪ್ರಿಯ ಯೋಜನೆಗಳಿಂದ ಬಿಜೆಪಿಯವರು ಕಂಗಾಲಾಗಿದ್ದಾರೆ. ಆದಕಾರಣ ಏನೇನೋ ಸುಳ್ಳು ಆರೋಪ ಮಾಡುತ್ತಿರುತ್ತಾರೆ’ ಎಂದು ಸಚಿವ ಈಶ್ವರ ಬಿ. ಖಂಡ್ರೆಯವರು ವಸತಿ ಯೋಜನೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಮೇಲಿನಂತೆ ಪ್ರತಿಕ್ರಿಯಿಸಿದರು. ಬಸವಕಲ್ಯಾಣದಲ್ಲಿ ನಿರ್ಮಾಣವಾಗುತ್ತಿರುವ ಅನುಭವ ಮಂಟಪದ ₹740 ಕೋಟಿ ಪರಿಷ್ಕೃತ ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಪರುಷ ಕಟ್ಟೆಯ ಹಕ್ಕು ಪತ್ರ ವಿಳಂಬದ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.