ADVERTISEMENT

ಝಿಕಾ ಸೋಂಕಿನ ಬಗ್ಗೆ ಮುನ್ನೆಚ್ಚರಿಕೆ ವಹಿಸಿ: ಜಿಲ್ಲಾಧಿಕಾರಿ ರಾಮಚಂದ್ರನ್ ಆರ್.

ಸಾರ್ವಜನಿಕರಲ್ಲಿ ಮನವಿ

​ಪ್ರಜಾವಾಣಿ ವಾರ್ತೆ
Published 11 ಜುಲೈ 2021, 6:15 IST
Last Updated 11 ಜುಲೈ 2021, 6:15 IST
ರಾಮಚಂದ್ರನ್
ರಾಮಚಂದ್ರನ್   

ಬೀದರ್‌: ಕೇರಳದಲ್ಲಿ ಝಿಕಾ ವೈರಸ್ ಪತ್ತೆಯಾಗಿದೆ. ಜಿಲ್ಲೆಯಲ್ಲಿ ಝಿಕಾ ಪ್ರಕರಣಗಳು ವರದಿಯಾಗಿಲ್ಲ. ಆದರೂ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಮನವಿ ಮಾಡಿದ್ದಾರೆ.

ಝಿಕಾ ಸೊಳ್ಳೆಗಳಿಂದ ಹರಡುತ್ತಿದೆ ಎನ್ನುವ ಆತಂಕ ಜನರಲ್ಲಿ ಇದೆ. ಸೊಳ್ಳೆಗಳು ಉತ್ಪತ್ತಿಯಾಗದಂತೆ ಸ್ವಯಂ ರಕ್ಷಣಾ ವಿಧಾನಗಳನ್ನು ಅಳವಡಿಸಿ ಕೊಳ್ಳಬೇಕು. ಅಂದಾಗ ಮಾತ್ರ ರೋಗ ಹರಡುವುದನ್ನು ನಿಯಂತ್ರಿಸಲು ಸಾಧ್ಯವಿದೆ ಎಂದು ತಿಳಿಸಿದ್ದಾರೆ.

ನಗರ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿರುವ ಆರೋಗ್ಯ ಸಹಾಯಕರಿಂದ ಪ್ರತಿ ತಿಂಗಳು ಮೊದಲನೇ ಶುಕ್ರವಾರ ಮತ್ತು ಮೂರನೇ ಶುಕ್ರವಾರ ಈಡೀಸ್ ಈಜಿಪ್ತಿ ಸೊಳ್ಳೆ ಉತ್ಪತ್ತಿ ತಾಣಗಳ ಸಮೀಕ್ಷೆ ನಡೆಸಲಾಗುತ್ತಿದೆ. ಆರೋಗ್ಯ ಸಹಾಯಕರು ಹಾಗೂ ಆಶಾ ಕಾರ್ಯಕರ್ತರು ಮನೆಗಳಿಗೆ ಬಂದಾಗ ಮಾಹಿತಿ ನೀಡಿ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.

ADVERTISEMENT

ಸೊಳ್ಳೆಯಿಂದ ಝಿಕಾ ವೈರಸ್: ಈಡೀಸ್ ಈಜಿಪ್ತಿ ಜಾತಿಯ ಹೆಣ್ಣು ಸೊಳ್ಳೆ ಕಚ್ಚುವುದರಿಂದ ಝಿಕಾ ವೈರಸ್ ಕಾಣಿಸಿಕೊಳ್ಳುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಧಿಕಾರಿ ಡಾ.ವಿ.ಜಿ.ರೆಡ್ಡಿ ತಿಳಿಸಿದ್ದಾರೆ.

ಈಡೀಸ್ ಸೊಳ್ಳೆಗಳು ಡ್ರಮ್, ಬ್ಯಾರಲ್, ನೀರಿನ ತೊಟ್ಟಿಗಳು, ಏರ್‌ಕೂಲರ್, ಅನುಪಯುಕ್ತ ಟೈರ್, ಒಡೆದ ಮಡಕೆಗಳು, ತೆಂಗಿನ ಚಿಪ್ಪುಗಳಲ್ಲಿ ಸಂಗ್ರಹವಾಗುವ ನೀರಲ್ಲಿ ಸಂತಾನ ಉತ್ಪತ್ತಿ ಮಾಡುತ್ತವೆ. ಸೋಂಕಿತ ಸೊಳ್ಳೆ ಕಚ್ಚಿದಾಗ ರೋಗ ಹರಡುತ್ತದೆ.

ಮಳೆಗಾಲದಲ್ಲಿ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿರುತ್ತದೆ. ಈ ಸೊಳ್ಳೆಗಳಿಂದ ಡೆಂಗಿ ಮತ್ತು ಚಿಕುನ್‌ಗುನ್ಯಾ ಸಹ ಹರಡುತ್ತದೆ. ತೀವ್ರತರವಾದ ಜ್ವರ, ಮೈಕೈ ನೋವು, ಕೀಲುಗಳಲ್ಲಿ ನೋವು, ದೇಹದ ಮೇಲೆ ಕೆಂಪು ರಕ್ತ ಮಿಶ್ರಿತ ಗುಳ್ಳೆಗಳು ಕಾಣಸಿಕೊಳ್ಳುತ್ತವೆ.

ಗರ್ಭಿಣಿಯರಿಗೆ ಸೋಂಕು ತಗುಲಿದಲ್ಲಿ ಗರ್ಭಪಾತವಾಗುವ ಸಾಧ್ಯತೆ ಇದೆ. ಹುಟ್ಟುವ ಮಕ್ಕಳಲ್ಲಿ ಅಂಗಾಂಗ ನ್ಯೂನ್ಯತೆ (ಮೈಕ್ರೋ ಸೆಫಾಲಿ) ಕಾಣಿಸಿಕೊಳ್ಳುವ ಸಾಧ್ಯತೆಯೂ ಇದೆ.

ಡ್ರಮ್‌ ಹಾಗೂ ಸಿಮೆಂಟಿನ ತೊಟ್ಟಿ ಗಳಲ್ಲಿ ಸೊಳ್ಳೆ ಮರಿ ಉತ್ಪತ್ತಿಯಾಗದಂತೆ ಕಡ್ಡಾಯ ವಾರಕ್ಕೊಂದು ಬಾರಿ ಖಾಲಿ ಮಾಡಬೇಕು. ವಾರಕ್ಕೊಂದು ಬಾರಿ ತಿಕ್ಕಿ ತೊಳೆದು ಒಣಗಿಸಿದ ನಂತರ ನೀರು ತುಂಬಬೇಕು. ಸೊಳ್ಳೆ ಉತ್ಪತ್ತಿ ತಾಣಗಳಾದ ತಗ್ಗು ಗುಂಡಿಗಳನ್ನು ಮುಚ್ಚಬೇಕು.

ನಿಂತ ನೀರಿನಲ್ಲಿ ಸೀಮೆ ಎಣ್ಣೆ ಅಥವಾ ಸುಟ್ಟಿದ ಆಯಿಲ್ ಸಿಂಪರಣೆ ಮಾಡಿದ್ದಲ್ಲಿ ಸೊಳ್ಳೆ ಉತ್ಪತ್ತಿಯಾಗದಂತೆ ನಿಯಂತ್ರಿಸಬಹುದಾಗಿದೆ. ಸೊಳ್ಳೆಗಳು ಕಚ್ಚದಂತೆ ಮೈಕೈ ಮುಚ್ಚುವಂತೆ ಬಟ್ಟೆ ಧರಿಸಬೇಕು. ಮಲಗುವಾಗ ಸೊಳ್ಳೆ ಪರದೆ ಬಳಸಬೇಕು.

ಮನೆಯ ಕಿಟಕಿ, ಬಾಗಿಲುಗಳಿಗೆ ಜಾಲರಿಗಳನ್ನು ಅಳವಡಿಸಬೇಕು. ಯಾವುದೇ ಜ್ವರ ಬಂದರೂ ಮೊದಲು ಸರ್ಕಾರಿ ಆಸ್ಪತ್ರೆಗೆ ಭೆಟ್ಟಿಕೊಟ್ಟು ಚಿಕಿತ್ಸೆ ಪಡೆಯಬೇಕು ಎಂದು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.