ADVERTISEMENT

ಅಧ್ಯಕ್ಷರ ವಿರುದ್ಧ ಅಸಮಾಧಾನದ ಹೊಗೆ

ಕೋರಂ ಕೊರತೆಯಿಂದ ನಡೆಯದ ಜಿಲ್ಲಾ ಪಂಚಾಯಿತಿ ಸಭೆ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2018, 14:40 IST
Last Updated 4 ಸೆಪ್ಟೆಂಬರ್ 2018, 14:40 IST
ಕೋರಂ ಇಲ್ಲದ ಕಾರಣ ಬೀದರ್‌ನ ಜಿಲ್ಲಾ ಪಂಚಾಯಿತಿಯಲ್ಲಿ ಮಂಗಳವಾರ ಕರೆದಿದ್ದ ಸಾಮಾನ್ಯ ಸಭೆಯಿಂದ ಅಧ್ಯಕ್ಷೆ ಭಾರತಬಾಯಿ ಶೇರಿಕಾರ ಹಾಗೂ ಉಪಾಧ್ಯಕ್ಷ ಪ್ರಕಾಶ ಪಾಟೀಲ ಹೊರಗೆ ಹೋದರು
ಕೋರಂ ಇಲ್ಲದ ಕಾರಣ ಬೀದರ್‌ನ ಜಿಲ್ಲಾ ಪಂಚಾಯಿತಿಯಲ್ಲಿ ಮಂಗಳವಾರ ಕರೆದಿದ್ದ ಸಾಮಾನ್ಯ ಸಭೆಯಿಂದ ಅಧ್ಯಕ್ಷೆ ಭಾರತಬಾಯಿ ಶೇರಿಕಾರ ಹಾಗೂ ಉಪಾಧ್ಯಕ್ಷ ಪ್ರಕಾಶ ಪಾಟೀಲ ಹೊರಗೆ ಹೋದರು   

ಬೀದರ್‌: ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗಿದೆ ಎನ್ನುವುದನ್ನೇ ಅಸ್ತ್ರ ಮಾಡಿಕೊಂಡು ಆಡಳಿತಾರೂಢ ಕಾಂಗ್ರೆಸ್‌ ಸದಸ್ಯರ ಗುಂಪೊಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತಬಾಯಿ ಶೇರಿಕಾರ ವಿರುದ್ಧ ಶೀತಲಸಮರಕ್ಕೆ ಇಳಿದಿದೆ.

ಮಂಗಳವಾರ ಇಲ್ಲಿ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಿಂದ ದೂರ ಉಳಿದು ಕೋರಂ ಕೊರತೆಯಾಗುವಂತೆ ನೋಡಿಕೊಂಡು ಭಾರತಬಾಯಿ ಅವರ ಮೇಲೆ ಒತ್ತಡ ಹಾಕಲು ಪ್ರಯತ್ನಿಸಿದರು. ಬೆಳಿಗ್ಗೆ 11 ಗಂಟೆಗೆ ಎಲ್ಲ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಗೆ ಬಂದಿದ್ದರು.

ಜಿಲ್ಲಾ ಪಂಚಾಯಿತಿಯ 34 ಸದಸ್ಯರ ಪೈಕಿ 16 ಸದಸ್ಯರು ಮಾತ್ರ 12 ಗಂಟೆಗೆ ಸಭೆಯಲ್ಲಿ ಕಾಣಿಸಿಕೊಂಡರು. ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸಿಇಒ ಅವರೂ ವೇದಿಕೆಯ ಮೇಲೆ ಬಂದು ಕುಳಿತರು. ಆದರೆ, ಅರ್ಧ ಗಂಟೆ ಕಾಯ್ದರೂ ಕೋರಂಗೆ ಅಗತ್ಯವಿರುವಷ್ಟು ಸದಸ್ಯರು ಬಾರದಿದ್ದಾಗ ಅಧ್ಯಕ್ಷರು ಸಭೆಯನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಿದರು.

ADVERTISEMENT

ಕೆಲ ಸಮಯದ ನಂತರ ಸಿಇಒ ಆರ್‌.ಸೆಲ್ವಮಣಿ ಅಧ್ಯಕ್ಷರ ಕೊಠಡಿಗೆ ಬಂದು ಅನುದಾನ ಹಂಚಿಕೆ ಕುರಿತು ಸಮಜಾಯಿಸಿ ನೀಡಿದರು. ಆದರೆ ಸಮಸ್ಯೆ ತಿಳಿಗೊಳ್ಳಲಿಲ್ಲ. ಮಧ್ಯಾಹ್ನ 2 ಗಂಟೆಯ ಸಭೆಗೂ ಸದಸ್ಯರು ಬಾರದ ಕಾರಣ ಅನಿರ್ದಿಷ್ಟಾವಧಿಯ ವರೆಗೆ ಸಭೆ ಮುಂದೂಡಲಾಯಿತು.

ಈ ನಡುವೆ ಒಂದು ಗುಂಪು ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಕೊಠಡಿಯಲ್ಲಿ ಸಭೆ ನಡೆಸಿದರೆ, ಇನ್ನೊಂದು ಗುಂಪು ಶಿವನಗರದಲ್ಲಿ ಸಭೆ ನಡೆಸಿತು.

‘ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಿಗೆ ಸರಿಯಾಗಿ ಅನುದಾನ ಹಂಚಿಕೆ ಮಾಡಿಲ್ಲ ಎಂದು ಸದಸ್ಯರು ದೂರುತ್ತಿದ್ದಾರೆ. ಇದೊಂದು ಸಣ್ಣ ಸಮಸ್ಯೆ. ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳುತ್ತೇವೆ. ಮಾಧ್ಯಮ ಪ್ರತಿನಿಧಿಗಳು ವಿಷಯವನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ’ ಎಂದು ಭಾರತಬಾಯಿ ತಮ್ಮನ್ನು ಭೇಟಿಯಾದ ಪತ್ರಕರ್ತರಿಗೆ ಹೇಳಿದರು.

‘ಅಧ್ಯಕ್ಷರು ₹ 80 ಲಕ್ಷದ ವರೆಗೆ ಅನುದಾನ ಬಳಸಿಕೊಂಡಿದ್ದಾರೆ. ಬೇರೆ ಸದಸ್ಯರಿಗೆ ಕೇವಲ ₹ 1.5 ಲಕ್ಷದಿಂದ ₹ 15 ಲಕ್ಷದ ವರೆಗೆ ಹಂಚಿಕೆ ಮಾಡಲಾಗಿದೆ’ ಎಂದು ಸದಸ್ಯೆ ಗೀತಾ ಚಿದ್ರಿ ಮಾಧ್ಯಮದ ಎದುರು ಅಸಮಾಧಾನ ತೋಡಿಕೊಂಡರು.

‘ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ₹ 35 ಕೋಟಿ ವೆಚ್ಚದ ಪ್ರಸ್ತಾವ ಸಿದ್ಧಪಡಿಸಲಾಗಿದೆ. ಆದರೆ, ಅದರಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರು ಸೂಚಿಸಿದ ಕಾಮಗಾರಿಗಳೇ ಇಲ್ಲ. ಇದುವೇ ಸದಸ್ಯರ ಅಸಮಾಧಾನಕ್ಕೆ  ಕಾರಣವಾಗಿದೆ’ ಎಂದರು.

‘ಅಧ್ಯಕ್ಷರ ಕೊಠಡಿ ಹಾಗೂ ಸಭಾಂಗಣ ಸೇರಿ ನವೀಕರಣ ಕಾಮಗಾರಿಗೆ ಒಟ್ಟು ₹32 ಲಕ್ಷ ಖರ್ಚಾಗಿದೆ. ಮಾಹಿತಿ ಹಕ್ಕು ಅಡಿಯಲ್ಲಿ ಯಾರು ಬೇಕಾದರೂ ಮಾಹಿತಿ ಪಡೆಯಬಹುದು. ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಿಲ್ಲ’ ಎಂದು ಸೆಲ್ವಮಣಿ ಸ್ಪಷ್ಟಪಡಿಸಿದರು.

ಭಾರತಬಾಯಿ ಕೆಳಗಿಸಲು ಕಸರತ್ತು
ಬೀದರ್‌: ಕಾಂಗ್ರೆಸ್‌ ವರಿಷ್ಠರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಿದಂತೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತಬಾಯಿ ಶೇರಿಕಾರ ಅವಧಿ ಪೂರ್ಣಗೊಂಡಿದೆ. ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಪ್ರಕ್ರಿಯೆ ಶುರುವಾಗಿದೆ ಎಂದು ಸದಸ್ಯರೊಬ್ಬರು ತಿಳಿಸಿದರು.

ಅಕ್ಟೋಬರ್ ಅಂತ್ಯಕ್ಕೆ ಭಾರತಬಾಯಿ ಅವಧಿ ಮುಗಿಯಲಿದೆ. ಅದಕ್ಕೂ ಮೊದಲು ಹಿರಿಯ ಮುಖಂಡರ ಸಭೆ ನಡೆಯಲಿದೆ. ಭಾರತಬಾಯಿ ಅವರಿಗೆ ಯಾವ ಕಾರಣಕ್ಕೂ ಸಭೆ ನಡೆಸಲು ಅವಕಾಶ ಕೊಡುವುದಿಲ್ಲ ಎಂದು ಪರೋಕ್ಷ ಎಚ್ಚರಿಕೆ ನೀಡಿದರು.

‘ಈಶ್ವರ ಖಂಡ್ರೆ, ರಹೀಂ ಖಾನ್, ವಿಜಯಸಿಂಗ್‌, ಅಲ್ಲಂಪ್ರಭು ಪಾಟೀಲ, ಕಾಜಿ ಅರ್ಷದ್ ಅಲಿ ಸಮ್ಮುಖದಲ್ಲೇ ಒಪ್ಪಂದ ಆಗಿದೆ. ಎರಡನೇ ಹಂತದಲ್ಲಿ ಅಧ್ಯಕ್ಷ ಸ್ಥಾನ ನನಗೆ ದೊರೆಯುವ ವಿಶ್ವಾಸ ಇದೆ’ ಎಂದು ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಗೀತಾ ಚಿದ್ರಿ ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.